ಬಿಕ್ಲು ಶಿವ ಕೊಲೆ ಕೇಸ್: ಬಂಧನ ಭೀತಿ, ಭೈರತಿ ಬಸವರಾಜ್ ಬಲಗೈ ಬಂಟ ಎಸ್ಕೇಪ್
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಬಲಗೈ ಬಂಟ ಮಲಿಯಾಳಿ ಅಜಿತ್ಗೆ ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ ಪರಾರಿಯಾಗಿದ್ದಾರೆ. ಆರೋಪಿ ಕಿರಣ್ ಮನೆ ಮತ್ತು ಕಚೇರಿಯಲ್ಲಿ ಪರಿಶೀಲಿಸಿದ್ದ ವೇಳೆ ಮಲಿಯಾಳಿ ಅಜಿತ್ಗೆ ಸೇರಿದ್ದ ಕೆಲವು ದಾಖಲೆಗಳು ಪತ್ತೆ ಆಗಿದ್ದವು.

ಬೆಂಗಳೂರು, ಜುಲೈ 25: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva Murder Case) ಶಾಸಕ ಭೈರತಿ ಬಸವರಾಜ್ (Byrati Basavaraj) ಎರಡು ಬಾರಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ತನಿಖಾಧಿಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಕೊಲೆಗೂ ತಮಗೂ ಸಂಬಂಧವಿಲ್ಲ ಅಂದಿದ್ದಾರೆ. ಈ ಮಧ್ಯೆ ಬಂಧನ ಭೀತಿಯಿಂದ ಮತ್ತೊಬ್ಬ ಆರೋಪಿ ಪರಾರಿ ಆಗಿದ್ದಾನೆ. ಭೈರತಿ ಬಸವರಾಜ್ ಬಲಗೈ ಬಂಟ ಮಲಿಯಾಳಿ ಅಜಿತ್ ಎಸ್ಕೇಪ್ ಆದ ಆರೋಪಿ. ಸಾಕಷ್ಟು ಕಡೆ ಪೊಲೀಸರು ಹುಡುಕಾಟ ನಡೆಸಿದರು ಪತ್ತೆ ಆಗಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್ ಮನೆ ಮತ್ತು ಕಚೇರಿಯಲ್ಲಿ ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಮಲಿಯಾಳಿ ಅಜಿತ್ಗೆ ಸೇರಿದ ಕೆಲವು ದಾಖಲೆಗಳು ಪತ್ತೆ ಆಗಿವೆ. ಈ ದಾಖಲೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಲಿಯಾಳಿ ಅಜಿತ್ಗೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಸ್ವೀಕರಿಸಿದ್ದ ಅಜಿತ್ ವಿಳಾಸವಿಲ್ಲದ ಲೆಟರ್ ಹೆಡ್ನಲ್ಲಿ ಉತ್ತರ ನೀಡಿದ್ದ.
ಪೊಲೀಸರಿಗೇ ಅವಾಜ್ ಹಾಕಿದ್ದ ಅಜಿತ್
‘ನಾನು ಹೈಕೋರ್ಟ್ ವಕೀಲ. ನನಗೆ ನೀವು ಸುಖಾಸುಮ್ಮನೆ ತೊಂದರೆ ನೀಡುತ್ತಿದ್ದೀರಿ. ನನಗೆ ಹಾಗೂ ಜಗ್ಗನಿಗೆ ಅಥವಾ ಕೊಲೆಯಾದ ಶಿವನ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲ. ಒಂದು ವೇಳೆ ನೀವು ನನ್ನನ್ನು ಈ ಕೇಸ್ನಲ್ಲಿ ಸಿಲುಕಿಸುವ ಪ್ರಯತ್ನ ಪಟ್ಟರೆ ನಾನು ಕಾನೂನಿನ ರೀತಿಯಲ್ಲಿ ಕ್ರಮಕ್ಕೆ ಮುಂದಾಗುತ್ತೇನೆ’ ಎಂದು ಅಜಿತ್ ಉತ್ತರ ನೀಡಿದ್ದ.
ಇದನ್ನೂ ಓದಿ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ ತಂದಿಟ್ಟ ಬಿಕ್ಲು ಶಿವ ಕೊಲೆ ಪ್ರಕರಣ ಸಿಐಡಿ ಹೆಗಲಿಗೆ
ತಕ್ಷಣವೇ ಪೊಲೀಸರು ಪ್ರತ್ಯುತ್ತರವಾಗಿ ಕೆಲವು ಕೇಸ್ ಅಂಶಗಳನ್ನು ಇಟ್ಟುಕೊಂಡು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಟಿ.ಸಿ ಪಾಳ್ಯದಲ್ಲಿರುವ ಸಿನಿಮಾಸ್ ವಿ ಗ್ರೂಪ್ನ ಕಚೇರಿಯನ್ನು ಖಾಲಿ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಕಚೇರಿ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಡೆಡ್ಲಿ ಮರ್ಡರ್ಗೂ ಮುನ್ನ ಜಗ್ಗನ ಸ್ಕೆಚ್ ಹೇಗಿತ್ತು?
ಇನ್ನು ಬಿಕ್ಲು ಶಿವ ಕೊಲೆಗೆ ಜಗ್ಗ ಅಲಿಯಾಸ್ ಜಗದೀಶ್ ಪ್ರೀಪ್ಲಾನ್ ಮಾಡಿದ್ದ. ರಾಮಮೂರ್ತಿ ನಗರದ ಬಾರ್ ನಲ್ಲಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಜುಲೈ 15ರ ರಾತ್ರಿ ಶಿವನ ಕೊಲೆಗೂ ಮುನ್ನ ಎಂಟು ಜನ ಆರೋಪಿಗಳೊಂದಿಗೆ ಜಗದೀಶ್ ಮೀಟಿಂಗ್ ಮಾಡಿದ್ದ. ಹಂತಕರು ಸ್ಕೆಚ್ ಹಾಕಿದ್ದ ಸಿಸಿ ಕ್ಯಾಮೆರಾ ದೃಶ್ಯವಳಿ ಟಿವಿ9 ಗೆ ಲಭ್ಯವಾಗಿದೆ.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್: ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು! ಮತ್ತಷ್ಟು ರೋಚಕ ಅಂಶ ಬಯಲು
ಬಿಕ್ಲು ಶಿವನ ಕೊಲೆ ಆಗಿ ಕೇವಲ 10 ನಿಮಿಷಕ್ಕೆ ಜಗದೀಶ್ ಪರಾರಿ ಆಗಿದ್ದ. ಬಿಕ್ಲು ಶಿವನ ಕೊಲೆಯಾಗಿದ್ದು ರಾತ್ರಿ 8:05 ನಿಮಿಷಕ್ಕೆ. ರಾತ್ರಿ 08:15 ನಿಮಿಷಕ್ಕೆ ಹೆಣ್ಣೂರಿನ ಕ್ಯಾನೋಪಿ ಅಪಾರ್ಟ್ಮೆಂಟ್ನಿಂದ ಆಡಿ ಕಾರಿನಲ್ಲಿ ಅತ್ತಿಬೆಲೆ ಮಾರ್ಗವಾಗಿ ಪರಾರಿ ಆಗಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.






