ಕೊವಿಡ್ ಮಿತ್ರ ಮಾದರಿಗೆ ಪ್ರಧಾನಿ ಮೆಚ್ಚುಗೆ; ಕೇಂದ್ರಕ್ಕೆ ಈ ಪರಿಕಲ್ಪನೆ ಕಳುಹಿಸುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಮನವಿ
ಕೊವಿಡ್ ಮಿತ್ರ ಅಂದರೆ ರೋಗ ಲಕ್ಷಣ ಆಧಾರಿತ ತುರ್ತು ಸ್ಪಂದನೆ. ನೆಗಡಿ, ಜ್ವರ, ಕೆಮ್ಮು, ತಲೆನೋವು, ಸುಸ್ತು ಮುಂತಾದ ಲಕ್ಷಣ ಹೊಂದಿರುವ ಯಾವುದೇ ವ್ಯಕ್ತಿ ಆಸ್ಪತ್ರೆಗೆ ಬಂದ ದಿನದಿಂದಲೇ ಕೊವಿಡ್ ಚಿಕಿತ್ಸೆ ಶುರುವಾಗುತ್ತದೆ. ಕೊರೊನಾ ಪರೀಕ್ಷೆಯ ಫಲಿತಾಂಶ ಬರುವುದಕ್ಕೂ ಮುನ್ನವೇ ಸದರಿ ವ್ಯಕ್ತಿಗೆ ಆತ್ಮಸ್ಥೈರ್ಯ ತುಂಬಿ, ಮಾತ್ರೆ ಮತ್ತು ಔಷಧಿ ನೀಡಲಾಗುತ್ತದೆ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮೈಸೂರು: ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಸಾವು-ನೋವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಸರ್ಕಾರ ಕೊರೊನಾ ತಡೆಯಲು ನಾನಾ ಪ್ರಯತ್ನ ಮಾಡುತ್ತಿದ್ದು, ಆಯಾ ಜಿಲ್ಲಾಡಳಿತಕ್ಕೆ ಈ ಕುರಿತು ಅಧಿಕಾರ ನೀಡಿ ಪರಿಸ್ಥಿತಿ ಹತೋಟಿಗೆ ತರಲು ಕ್ರಮಕೈಗೊಳ್ಳಲಾಗಿದೆ. ಅದರಂತೆ ಮೈಸೂರು ಜಿಲ್ಲಾಡಳಿತ ಕೂಡ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಕೊವಿಡ್ ಮಿತ್ರ ದೇಶಕ್ಕೇ ಮಾದರಿ ಆಗಲಿದೆ. ಈ ಪರಿಕಲ್ಪನೆ ಕುರಿತು ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಡೀ ದೇಶಕ್ಕೆ ಅನ್ವಯಿಸಬಹುದಾದ ಪರಿಕಲ್ಪನೆಗಳನ್ನು ಕಳುಹಿಸಿಕೊಡುವಂತೆ ಕೋರಿದ್ದು, ಮೈಸೂರಿನಿಂದ ಕೊವಿಡ್ ಮಿತ್ರ ಪರಿಕಲ್ಪನೆಯ ಮಾಹಿತಿಯನ್ನು ಕಳುಹಿಸಲು ನಿರ್ಧರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ರಾಜ್ಯದ 17 ಜಿಲ್ಲೆಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದರು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಡಿಸಿ ಡಾ.ಮಂಜುನಾಥಸ್ವಾಮಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಸಿ.ಬಿ.ರಿಷ್ಯಂತ್ ಸೇರಿದಂತೆ ಪ್ರಮುಖರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಪ್ರಧಾನಿ ಮೋದಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ನೂತನ ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಕೋರಿದರು. ಮೈಸೂರು ಜಿಲ್ಲೆಯಿಂದ ಕೊವಿಡ್ ಮಿತ್ರ ಪರಿಕಲ್ಪನೆ ಕಳುಹಿಸಿಕೊಡುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ವೇಳೆ ಹೇಳಿದ್ದಾರೆ.
ಕೊವಿಡ್ ಮಿತ್ರ ಅಂದರೆ ರೋಗ ಲಕ್ಷಣ ಆಧಾರಿತ ತುರ್ತು ಸ್ಪಂದನೆ. ನೆಗಡಿ, ಜ್ವರ, ಕೆಮ್ಮು, ತಲೆನೋವು, ಸುಸ್ತು ಮುಂತಾದ ಲಕ್ಷಣ ಹೊಂದಿರುವ ಯಾವುದೇ ವ್ಯಕ್ತಿ ಆಸ್ಪತ್ರೆಗೆ ಬಂದ ದಿನದಿಂದಲೇ ಕೊವಿಡ್ ಚಿಕಿತ್ಸೆ ಶುರುವಾಗುತ್ತದೆ. ಕೊರೊನಾ ಪರೀಕ್ಷೆಯ ಫಲಿತಾಂಶ ಬರುವುದಕ್ಕೂ ಮುನ್ನವೇ ಸದರಿ ವ್ಯಕ್ತಿಗೆ ಆತ್ಮಸ್ಥೈರ್ಯ ತುಂಬಿ, ಮಾತ್ರೆ ಮತ್ತು ಔಷಧಿ ನೀಡಲಾಗುತ್ತದೆ. ಮೈಸೂರಿನ ಎಲ್ಲಾ 174 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದಾಗಿ ಸೋಂಕಿತ ವ್ಯಕ್ತಿ ಗಂಭೀರ ಸ್ಥಿತಿ ತಲುಪುವುದಕ್ಕೂ ಮುನ್ನವೇ ಚಿಕಿತ್ಸೆ ದೊರಕುತ್ತಿದೆ. ಆ ಮೂಲಕ ಸೋಂಕು ಹರಡುವಿಕೆ ಮತ್ತು ಆಸ್ಪತ್ರೆಯ ಮೇಲಿನ ಒತ್ತಡ ಎರಡನ್ನೂ ಸುಲಭವಾಗಿ ನಿಬಾಯಿಸಲು ಸಾಧ್ಯವಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಕೊವಿಡ್ ಮಿತ್ರಕ್ಕಾಗಿ ಅಪಾರ ಪ್ರಮಾಣದ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯನ್ನು ಕೊವಿಡ್ ಮಿತ್ರ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಜಿಲ್ಲೆಯ ಎಲ್ಲಾ ಪಿಎಚ್‌ಸಿ, ಸಿಎಚ್‌ಸಿ, ಕೊವಿಡ್ ಆಸ್ಪತ್ರೆಗಳು ಮತ್ತು ಕೇರ್ ಸೆಂಟರ್‌ಗಳಲ್ಲೂ ಕೊವಿಡ್ ಮಿತ್ರ ಜಾರಿಯಲ್ಲಿದೆ. ಈ ಪರಿಕಲ್ಪನೆಯನ್ನು ಪ್ರಧಾನಮಂತ್ರಿಗಳ ಕಚೇರಿಗೆ ಕಳುಹಿಸಿಕೊಡಲು ಜಿಲ್ಲಾಡಳಿತ ಸದ್ಯ ಮುಂದಾಗಿದೆ.
ಇದನ್ನೂ ಓದಿ:
Health Insurance: ಕೊರೊನಾ ನಂತರ ಹೆಚ್ಚುತ್ತಿದೆ ಆರೋಗ್ಯ ವಿಮೆ ಬೇಡಿಕೆ; ಈಗ ಆಗಬಹುದು ಪ್ರೀಮಿಯಂ ದರದ ಏರಿಕೆ
ಸಿಂಗಾಪುರದಲ್ಲಿ ಪತ್ತೆಯಾದ ಕೊರೊನಾ ವೈರಾಣು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು: ಅರವಿಂದ್ ಕೇಜ್ರಿವಾಲ್
Published On - 7:57 am, Wed, 19 May 21