ಭೌತಿಕ ತರಗತಿ ಆರಂಭಿಸಲು ಖಾಸಗಿ ಶಾಲಾ ಒಕ್ಕೂಟ, ಶಿಕ್ಷಣ ತಜ್ಞರ ಆಗ್ರಹ
ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಲೋಕೇಶ್ ತಾಳಿಕಟ್ಟೆ ಮತ್ತು ನಿರಂಜನಾರಾಧ್ಯ 2021-22ರ ಸಾಲಿನ ಭೌತಿಕ ತರಗತಿಗಳನ್ನು ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು: ರಾಜ್ಯದಲ್ಲಿ ಶೀಘ್ರ ಭೌತಿಕ ತರಗತಿಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂದು ಖಾಸಗಿ ಶಾಲಾ ಒಕ್ಕೂಟ ಆಗ್ರಹಿಸಿದೆ. ಈ ಸಂಬಂಧ ನಗರದಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಲೋಕೇಶ್ ತಾಳಿಕಟ್ಟೆ ಮತ್ತು ನಿರಂಜನಾರಾಧ್ಯ 2021-22ರ ಸಾಲಿನ ಭೌತಿಕ ತರಗತಿಗಳನ್ನು ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕಳೆದ 15 ತಿಂಗಳಿಂದ ಶಾಲೆಗಳು ಸಂಪೂರ್ಣ ಬಂದ್ ಆಗಿವೆ. ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸಿಕ್ಕಿಲ್ಲ. ರಾಜ್ಯದಲ್ಲಿ ಸದ್ಯ ಕೊವಿಡ್ ಪಾಸಿಟಿವಿಟಿ ರೇಟ್ ಸಹ ಕಡಿಮೆಯಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಶಾಲೆ ಆರಂಭಿಸಬೇಕೆಂದು ಅವರು ಆಗ್ರಹಿಸಿದರು.
1 ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಯೋಜನೆ ಕೊರೊನಾ ಕಾರಣದಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಶಿಕ್ಷಣ ಇಲಾಖೆ ಮತ್ತೊಂದು ತೀರ್ಮಾನ ತೆಗೆದುಕೊಂಡಿದೆ. ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಬೆಂಗಳೂರು ಸೇರಿದಂತೆ ಹಲವೆಡೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಈ ವರ್ಷ ಬರೋಬ್ಬರಿ 1 ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. 2018ರಲ್ಲಿ ಆರಂಭವಾದ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಇದೀಗ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಕಾರಣ ಶಾಲೆಗಳ ಸಂಖ್ಯೆ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಜುಲೈ 3ರಂದು ಹೇಳಿಕೆ ನೀಡಿದ್ದರು.
ಕೊರೊನಾದಿಂದಾಗಿ ಜನರ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿರುವ ಪರಿಣಾಮ ಲಕ್ಷಾಂತರ ಹಣ ಸುರಿದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಕಷ್ಟವಾಗಿದೆ. ಹೀಗಾಗಿ, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದ್ದು, ಈ ಪರಿಸ್ಥಿತಿಯನ್ನು ಸದುಪಯೋಗ ಪಡಿಸಿಕೊಂಡರೆ ಸರ್ಕಾರಿ ಶಾಲೆಗಳು ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಸೆಳೆಯುವುದು ಸಾಧ್ಯ. ಇದೇ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದ್ದು, ಇದು ತ್ವರಿತವಾಗಿ ಆದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಮಕ್ಕಳು ಸೇರುವ ನಿರೀಕ್ಷೆಯಿದೆ.
ಖಾಸಗಿ ಶಾಲೆಗಳ ಶುಲ್ಕಕ್ಕೆ ರೋಸಿ ಹೋಗಿರುವ ಪೋಷಕರು, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸುವಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಈ ವರ್ಷ ಶೇ.30ರಷ್ಟು ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಸರ್ಕಾರಿ ಇಂಗ್ಲೀಷ್ ಮಾಧ್ಯಮಕ್ಕೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಸುಮಾರು 1,000 ಶಾಲೆಗಳನ್ನು ಹೊಸದಾಗಿ ಆರಂಭಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
(Private Schools Demand School Reopening at the Earliest)
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ; ವಿವರ ಇಲ್ಲಿದೆ
Published On - 3:09 pm, Wed, 7 July 21