
ಬೆಂಗಳೂರು, (ಅಕ್ಟೊಬರ್ 20): ವಿಜಯ ದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ನಡೆಸುವ ಪಥಸಂಚಲನಕ್ಕೆ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಅನುಮತಿ ಪಡೆಯಿರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ. ನಾಳೆ (ಅಕ್ಟೋಬರ್ 21) ವಿಜಯದಶಮಿಯಂದು ಬೆಂಗಳೂರಿನಲ್ಲಿ ಪಥಸಂಚಲನಕ್ಕೆ ಆರ್ಎಸ್ಎಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಔಪಚಾರಿಕ ಅನುಮತಿಗಾಗಿ ಕಾಯಿರಿ ಎಂದು ಹೇಳಿದ್ದಾರೆ.
ಆಗಾಗ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸುವ ಪ್ರಿಯಾಂಕ್ ಖರ್ಗೆ , ಡಿಕೆ ಶಿವಕುಮಾರ್ ಸಂಪುಟದಲ್ಲಿ ಗೃಹ ಸಚಿವರಾಗುತ್ತಿದ್ದಂತೆಯೇ ರಾಜ್ಯದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದ್ದರು. ಇದೀಗ ವಿಜಯದಶಮಿಯಂದು ಪಠಸಂಚಲನಕ್ಕೆ ಸಿದ್ಧತೆ ಮಾಡಿಕೊಳ್ಳುವ ಹೊತ್ತಲ್ಲೇ ಆರ್ಎಸ್ಎಸ್ ಸ್ವಯಂ ಸೇವಕರಿಗೆ ಅನುಮತಿ ಪಡೆಯುವ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಮೂಲಕ ಮತ್ತೆ ಪ್ರಿಯಾಂಕ್ ಖರ್ಗೆ ವರ್ಸಸ್ ಮುನ್ನೆಲೆಗೆ ಬಂದಂತಾಗಿದೆ.
ನನ್ನ ಆತ್ಮೀಯ RSS ಸ್ವಯಂಸೇವಕರೇ, ದಸರಾ ಹಬ್ಬದ ಸಂಭ್ರಮ ಜೋರಾಗಿ ನಡೆಯುತ್ತಿದೆ ಎಂದು ಭಾವಿಸುತ್ತೇನೆ.ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚುವ ಉದ್ದೇಶವಿಲ್ಲ, ಆದರೆ ಒಂದು ಸಣ್ಣ ಜ್ಞಾಪನೆ, ಕೇವಲ “ಮಾಹಿತಿ ನೀಡುವುದು” ಅಥವಾ ಗೃಹ ಇಲಾಖೆಗೆ “ಸಹಕರಿಸಿ” ಅಥವಾ “ಅಗತ್ಯ ವ್ಯವಸ್ಥೆ ಮಾಡಿ” ಎಂದು ಹೇಳುವುದು ಅನುಮತಿ ಪಡೆದಂತೆ ಆಗುವುದಿಲ್ಲ. ದಯವಿಟ್ಟು ಎಲ್ಲಾ ಸಂಘಟನೆಗಳಿಗೆ ಅನ್ವಯಿಸುವ ನಿಗದಿತ ಕಾರ್ಯವಿಧಾನದ ಪ್ರಕಾರ ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಸಕ್ಷಮ ಪ್ರಾಧಿಕಾರಗಳಿಂದ ಔಪಚಾರಿಕ ಅನುಮೋದನೆಗಾಗಿ ಕಾಯಿರಿ.
ನಿಮ್ಮದೇ ಆದ ಅಖಿಲ ಭಾರತೀಯ ಪ್ರತಿನಿಧಿ ಸಭಾ ವಾರ್ಷಿಕ ವರದಿ 2025-26 ರಲ್ಲಿ ಆರ್ಎಸ್ಎಸ್ ಕರ್ನಾಟಕದಾದ್ಯಂತ 2,21,963 ಸಮವಸ್ತ್ರಧಾರಿ ಕಾರ್ಯಕರ್ತರನ್ನು ಒಳಗೊಂಡ 562 ಪಥಸಂಚಲನಗಳನ್ನು ನಡೆಸಿದೆ ಎಂದು ಹೇಳಿದೆ ಎಂದು ನೀವು ಓದಿದ್ದೀರಿ ಎಂದು ನನಗೆ ಖಾತರಿಯಿದೆ.ಈಗ ಲಕ್ಷಾಂತರ ಮಂದಿ ಒಂದೇ ದಿನ ಒಂದೇ ಸಮಯದಲ್ಲಿ ಕರ್ನಾಟಕದ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದಾಗ, ಪೊಲೀಸ್ ಇಲಾಖೆಯು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಿಬ್ಬಂದಿ ನಿಯೋಜನೆ, ಸಾರಿಗೆ, ಆಹಾರ, ಸಂಚಾರ ನಿರ್ವಹಣೆ, ಭದ್ರತಾ ವ್ಯವಸ್ಥೆಗಳು ಮತ್ತು ಇತರ ಲಾಜಿಸ್ಟಿಕ್ಸ್. ಇವೆಲ್ಲಕ್ಕೂ ಯೋಜನೆ, ಜನಬಲ ಮತ್ತು ಸಾರ್ವಜನಿಕ ಸಂಪನ್ಮೂಲಗಳು ಬೇಕಾಗುತ್ತವೆ. ಆದ್ದರಿಂದ, ದಯವಿಟ್ಟು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಔಪಚಾರಿಕ ಅನುಮತಿಗಾಗಿ ಕಾಯಬೇಕೆಂದು ಸೂಚಿಸಿದ್ದಾರೆ.
Published On - 6:10 pm, Tue, 20 October 26