ಪಾಕ್ ಪರ ಘೋಷಣೆ ಆರೋಪ: ತನಿಖೆ ಚುರುಕುಗೊಳಿಸಿದ ಪೊಲೀಸರು, ನಾಸೀರ್ ಹುಸೇನ್ ಬೆಂಬಲಿಗ ಶಫಿ ನಾಶಿಪುಡಿ ಧ್ವನಿ ಪರೀಕ್ಷೆ

ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಬ್ಯಾಡಗಿ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಬಂದಿರುವ ವಿಧಾನಸೌಧ ಪೊಲೀಸರು, ಆರೋಪಿಯ ಧ್ವನಿಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ. ಆರೋಪಿ ಶಫಿ ನಾಶಿಪುಡಿ ಯಾರು? ಈತನ ಹಿನ್ನೆಲೆಯೇನು? ಇಲ್ಲಿದೆ ಮಾಹಿತಿ.

ಪಾಕ್ ಪರ ಘೋಷಣೆ ಆರೋಪ: ತನಿಖೆ ಚುರುಕುಗೊಳಿಸಿದ ಪೊಲೀಸರು, ನಾಸೀರ್ ಹುಸೇನ್ ಬೆಂಬಲಿಗ ಶಫಿ ನಾಶಿಪುಡಿ ಧ್ವನಿ ಪರೀಕ್ಷೆ
ನಾಸೀರ್ ಹುಸೇನ್ ಬೆಂಬಲಿಗ ಶಫಿ ನಾಶಿಪುಡಿ
Follow us
| Updated By: ಗಣಪತಿ ಶರ್ಮ

Updated on:Feb 29, 2024 | 2:12 PM

ಬೆಂಗಳೂರು, ಫೆಬ್ರವರಿ 29: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogan) ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು (Vidhan Soudha Police) ತನಿಖೆಯನ್ನು ಚುರುಕುಗೊಳಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ ಗೆದ್ದಿರುವ ನಾಸಿರ್ ಹುಸೇನ್ ಅವರ ಬೆಂಬಲಿಗ ಮೊಹಮ್ಮದ್ ಶಫಿ ನಾಶಿಪುಡಿ ಎಂಬವರನ್ನು ಹಾವೇರಿಯಿಂದ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ಬುಧವಾರ ತಡ ರಾತ್ರಿಯೇ ಶಫಿಯನ್ನು ಬೆಂಗಳೂರಿಗೆ ತರಲಾಗಿದ್ದು ಧ್ವನಿಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಕುರಿತು ಹಾವೇರಿ ಪೊಲೀಸ್ ವರಿಷ್ಟಾಧಿಕಾರಿ ಅಂಶುಕುಮಾರ್ ಸಹ ಮಾಹಿತಿ ನೀಡಿದ್ದಾರೆ. ಬುಧವಾರ ರಾತ್ರಿ ವಿಧಾನಸೌಧ ಪೊಲೀಸರು ಹಾವೇರಿಗೆ ಬಂದಿದ್ದರು. ಶಫಿ ನಾಶಿಪುಡಿ ಎಂಬ ವ್ಯಕ್ತಿಯನ್ನು ವಿಚಾರಣೆ ಮತ್ತು ಧ್ವನಿ ಪರೀಕ್ಷೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆರೋಪಿಯು ಯಾವುದೇ ಸಂಘಟನೆಗೆ ಸೇರಿದ ಮಾಹಿತಿ ಇಲ್ಲ. ಆತ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ ಕ್ರಮಕ್ಕೆ ಅಗ್ರಹಿಸಿದ್ದಾರೆ. ಹೀಗಾಗಿ ವಿಚಾರಣೆಗಾಗಿ ವಿಧಾನಸೌಧ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಅಂಶುಕುಮಾರ್ ತಿಳಿಸಿದ್ದಾರೆ.

ಯಾರು ಈ ಶಫಿ ನಾಶಿಪುಡಿ?

ಕಾಂಗ್ರೆಸ್ ಪಕ್ಷದ ನೂತನ ರಾಜ್ಯಸಭಾ ಸಂಸದ ನಾಸಿರ್ ಹುಸೇನ್ ಬೆಂಬಲಿಗ ಮೊಹಮ್ಮದ್ ಶಫಿ ನಾಶಿಪುಡಿ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಇಲ್ಲಿ ಮೆಣಸಿನಕಾಯಿ ವ್ಯಾಪಾರ ಮಾಡುತ್ತಾರೆ. ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಇದೇ ವ್ಯಕ್ತಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪಿಸಿದ್ದಾರೆ. ಈ ಆರೋಪವನ್ನು ನಾಶಿಪುಡಿ ಈಗಾಗಲೇ ಅಲ್ಲಗಳೆದಿದ್ದು, ನಾನು ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ತಾಯಿ ಆಣೆಗೂ ದೇಶದ್ರೋಹಿ ಘೋಷಣೆ ಕೂಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಪರ ಘೋಷಣೆ: ಎಫ್ಎಸ್ಎಲ್ ವಿಡಿಯೋ ತನಿಖೆ ನಡೆಸುವುದು ಹೇಗೆ? ಸೈಬರ್ ತಜ್ಞರು ಕೊಟ್ಟ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

ವಿಧಾನಸಭೆ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ರಾಜ್ಯ ರಾಜಕೀಯದಲ್ಲಿ ಕೋಲಾಹಲನ್ನೇ ಸೃಷ್ಟಿಸಿದೆ. ಬುಧವಾರ ಮತ್ತು ಗುರುವಾರ ವಿಧಾನಸಭೆ ಕಲಾಪದಲ್ಲಿಯೂ ಈ ವಿಚಾರ ತೀವ್ರ ಗದ್ದಲಕ್ಕೆ ಕಾರಣವಾಗಿದೆ. ಇಂದಿನ ಕಲಾಪದ ವೇಳೆ ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ತೀವ್ರ ಅಡ್ಡಿಪಡಿಸಿ ಗದ್ದಲ ಸೃಷ್ಟಿಸಿದ್ದಾರೆ. ನಂತರ ಸಭಾತ್ಯಾಗ ಮಾಡಿದ್ದಾರೆ. ಹೀಗಾಗಿ ಕೊನೆಯಲ್ಲಿ ಪ್ರತಿಪಕ್ಷ ನಾಯಕರ ಅನುಪಸ್ಥಿತಿಯಲ್ಲಿ ಬಜೆಟ್​ಗೆ ಅನುಮೋದನೆ ಪಡೆಯಲಾಯಿತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:04 pm, Thu, 29 February 24