ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಪರ ವಕೀಲರ ಸಿದ್ಧತೆ

| Updated By: ಗಣಪತಿ ಶರ್ಮ

Updated on: Aug 17, 2024 | 1:29 PM

ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಕಾನೂನು ಸಂಕೋಲೆಯಲ್ಲಿ ಸಿಲುಕಿದ್ದಾರೆ. ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಮೊದಲಿನಿಂದಲೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲು ಸಾಧ್ಯವೇ ಇಲ್ಲ ಅಂತಾ ವಾದಿಸುತ್ತಾ ಬಂದಿದ್ದ ಸಿದ್ದರಾಮಯ್ಯ, ಕಾನೂನು ಹೋರಾಟ ಮಾಡುತ್ತೇನೆ ಅಂತಾ ತೊಡೆ ತಟ್ಟಿದ್ದರು. ಇದೀಗ ಅಂಥದ್ದೇ ಸನ್ನಿವೇಶ ಸಿಎಂಗೆ ಎದುರಾಗಿದೆ. ಹೇಳಿ ಕೇಳಿ ಲಾಯರ್ ಆಗಿದ್ದ ಸಿದ್ದರಾಮಯ್ಯ, ಇದೀಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಅವರಿಗೆ ಹೈಕಮಾಂಡ್, ಸಚಿವರು, ಅಭಿಮಾನಗಳ ಬಲ ಸಿಕ್ಕಿದೆ.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಪರ ವಕೀಲರ ಸಿದ್ಧತೆ
ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಆಗಸ್ಟ್ 17: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ರಾಜ್ಯಪಾಲರ ನಿರ್ಧಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಾನೂನು ಸಮರ ಸಾರಿದ್ದಾರೆ. ಇದರ ಭಾಗವಾಗಿ ಕಾನೂನು ಸಲಹೆಗಾರ ಪೊನ್ನಣ್ಣ ಜತೆ ಸಭೆ ನಡೆಸಿದ್ದಾರೆ. ಮುಂದೆ ಯಾವ ರೀತಿ ಹೋರಾಡಬೇಕು ಎಂಬ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

ರಾಜ್ಯಪಾಲರ ಪ್ರಾಸಿಕ್ಯೂಷನ್​ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಿಎಂ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೋಮವಾರವೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದಾರೆ. ರಾಜ್ಯಪಾಲರ ಅನುಮತಿ ವಿರುದ್ಧ ಹೈಕೋರ್ಟ್​ನಲ್ಲಿ ಪ್ರಶ್ನಿಸಲು ತೀರ್ಮಾನ ಮಾಡಿದ್ದು, ಕಾನೂನು ಸಲಹೆಯಂತೆ ನ್ಯಾಯಾಲಯದಲ್ಲಿ‌ ಪ್ರಶ್ನಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡುತ್ತಿದ್ದಂತೆಯೇ ದೂರು ದಾರ ಪ್ರದೀಪ್ ಕೇವಿಯಟ್ ಸಲ್ಲಿಸಿದ್ದಾರೆ. ತಮ್ಮ ವಾದ ಆಲಿಸದೇ ಈ ಕೇಸ್‌ನಲ್ಲಿ ಮಧ್ಯಂತರ ಆದೇಶ ನೀಡದಂತೆ ಕೇವಿಯಟ್ ಸಲ್ಲಿಸಿದ್ದಾರೆ.

ಆದರೆ ಸಿಎಂ ಸಿದ್ದರಾಮಯ್ಯ ಅವರ ವಾದವೇ ಬೇರೆಯಾಗಿದೆ. ಪ್ರಕರಣ ಹೊರಬಂದ ದಿನದಿಂದಲೂ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡುತ್ತಾ ಬಂದಿದ್ದಾರೆ.

ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ವಾದವೇನು?

ಕಾನೂನಿನ ಅನ್ವಯ ಪರಿಹಾರ ರೂಪದ ನಿವೇಶನ ಪಡೆದಿರುವುದು ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರದಲ್ಲೇ ನಡಾವಳಿ ಆಗಿದೆ, ಪರಿಹಾರಕ್ಕೆ ಒಪ್ಪಿಗೆ ಸಿಕ್ಕಿದೆ. 2023 ಅಕ್ಟೋಬರ್​ನಲ್ಲೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಅದಕ್ಕೂ‌ ಮುನ್ನವೇ ಪರಿಹಾರ ರೂಪದ ನಿವೇಶನ ನೀಡಲಾಗಿದೆ. ಮುಡಾದವರು ನಮಗೆ ಸೇರಿದ ಜಾಗ 3.16 ಎಕರೆಯನ್ನ ಒತ್ತುವರಿ ಮಾಡಿಕೊಂಡಿದ್ದಾರೆ. 50:50 ಅನುಪಾತದಲ್ಲೇ ಜಾಗ ಕೊಡಿ ಎಂದು ಮುಡಾಗೆ ಹೇಳಿದ್ದೆವು. ಇದೇ ಜಾಗದಲ್ಲೇ ನಮಗೆ ಸೈಟ್​ ಕೊಡಿ ಎಂದು ನಾವು ಕೇಳಿಲ್ಲ. ನಾವೇನು ವಿಜಯನಗರ ಲೇಔಟ್​ನಲ್ಲೇ ಕೊಡಿ ಅಂತಾ ಕೇಳಿಲ್ಲ. ಜಾಗ ಕೊಟ್ಟಾಗ 2021ರಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದರು ಎಂಬುದು ಸಿಎಂ ಸಿದ್ದರಾಮಯ್ಯ ವಾದ.

ಧೈರ್ಯವಾಗಿ ಕಾನೂನು ಹೋರಾಟ ನಡೆಸಿ: ಸಿಎಂಗೆ ಸಚಿವರ ಅಭಯ

ಸಿಎಂಗೆ ಸಚಿವರ ಬಲವೂ ಸಿಕ್ಕಿದೆ. ಇವತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಸೇರಿ ಸಚಿವರ ದಂಡೇ ಬಂತು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪರ ನಿಂತು, ಕಾನೂನು ಹೋರಾಟ ಮಾಡುವ ಸಂಬಂಧ ಚರ್ಚೆ ಮಾಡಿದರು. ಇದೇ ವೇಳೆ ಸಿಎಂಗೆ ಅಭಯ ನೀಡಿರುವ ಸಚಿವರು ನಾವು ನಿಮ್ಮ ಜೊತೆಗಿದ್ದೇವೆ, ಧೈರ್ಯವಾಗಿ ಕಾನೂನು ಹೋರಾಟ ನಡೆಸಿ ಅಂತ ಹೇಳಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಅಭಯ, ರಾಜ್ಯವ್ಯಾಪಿ ಹೋರಾಟಕ್ಕೆ​ ಸೂಚನೆ

ಪ್ರಾಸಿಕ್ಯೂಷನ್ ಸಂಬಂಧ ಎಐಸಿಸಿ ನಾಯಕರು ಕೂಡ ಸಿಎಂ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್,‌ ಉಸ್ತುವಾರಿ ರಣದೀಪ್ ಸುರ್ಜೇವಾಲ ಕರೆ ಮಾಡಿದ್ದು ಸಿದ್ದರಾಮಯ್ಯಗೆ ಅಭಯ ನೀಡಿದ್ದಾರೆ. ನಿಮ್ಮ ಜತೆ ನಾವಿದ್ದೇವೆ, ಧೈರ್ಯವಾಗಿರಿ. ಏನೇ ಆದರೂ ಕಾನೂನು ಹೋರಾಟ ನಡೆಸೋಣ ಅಂತ ಹೇಳಿದ್ದಾರೆ. ಜತೆಗೆ ರಾಜ್ಯವ್ಯಾಪಿ ಸಮರಕ್ಕೆ ರಣಕಹಳೆ ಮೊಳಗಿಸುವಂತೆ ಸೂಚನೆ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ‘ಗೋ ಬ್ಯಾಕ್ ಗವರ್ನರ್’ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ ವಿರುದ್ಧ ಕೈಗೊಂಡಿರುವ ಕ್ರಮ, ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಆತಂಕದಲ್ಲೇ ಸಿದ್ದು ಫ್ಯಾನ್ಸ್ ಬೆಂಗಳೂರಿನ ಮನೆಯತ್ತ ದೌಡಾಯಿಸುತ್ತಿದ್ದಾರೆ. ಈ ನಡುವೆ, ಸಿಎಂ ತವರು ಮೈಸೂರಿನಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೋ ಬ್ಯಾಕ್ ಗವರ್ನರ್ ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ, ಕಾನೂನು ಸಮಾಲೋಚನೆಯಲ್ಲಿ ಸಿಎಂ

ಸಿಎಂ ವಿರುದ್ಧದ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್​​ಗೆ ಅನುಮತಿ ಕೊಟ್ಟಿದ್ದೇ ತಡ ಕಾಂಗ್ರೆಸ್ ಪಾಳಯದಲ್ಲಿ ಕಾನೂನು ಹೋರಾಟದ ಚಟುವಟಿಕೆ ಬಿರುಸುಗೊಂಡಿದೆ. ಎಐಸಿಸಿ ಹೋರಾಟಕ್ಕೂ ಕರೆ ಕೊಟ್ಟಿದ್ದು, ರಾಜ್ಯ ರಾಜಕಾರಣ ರಣರಣವಾಗುವ ಸಾಧ್ಯತೆ ಇದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಂಗಳೂರಿಗೆ ಬಂದಿರುವುದು ಕುತೂಹಲ ಕೆರಳಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ