ಬೆಂಗಳೂರು, ನವೆಂಬರ್ 26: ಬೆಳಗಾವಿಯ ಸುವರ್ಣಸೌಧದಲ್ಲಿ ಡಿ.9ರಿಂದ ಚಳಿಗಾಲ ಅಧಿವೇಶನ ನಡೆಯಲಿದ್ದು, 2 ವಾರಕ್ಕಿಂತ ಹೆಚ್ಚು ದಿನ ಅಧಿವೇಶನ ನಡೆಸಲು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ (R Ashoka) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಿದ್ದೇನೆ ಎಂದಿದ್ದಾರೆ.
ವಕ್ಫ್ ಆಸ್ತಿ ನೋಂದಣಿ, ಪಡಿತರ ಚೀಟಿ ಗೊಂದಲದ ಬಗ್ಗೆ, ಅಬಕಾರಿ ಇಲಾಖೆ ಹಗರಣದ ಬಗ್ಗೆಯೂ ಪ್ರಸ್ತಾಪ ಮಾಡುತ್ತೇವೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಕೇಳುತ್ತೇವೆ ಎಂದು ಹೇಳಿದ್ದಾರೆ.
ಬೈಎಲೆಕ್ಷನ್ನಲ್ಲಿ 3 ಕ್ಷೇತ್ರ ಗೆದ್ದಿದ್ದೇವೆಂದು ಬೀಗುವುದು ಬೇಡ. ಸರ್ಕಾರದಲ್ಲಿ ಅಧಿಕಾರಿಗಳಿಗೆ ನೇಣುಭಾಗ್ಯ, ವರ್ಗಾವಣೆ ಭಾಗ್ಯ ನೀಡಿದೆ. ಜನರ ಧ್ವನಿಯಾಗಿ ನಾವು ಸದನದಲ್ಲಿ ಹೋರಾಟ ಮಾಡುತ್ತೇವೆ. ಅನುದಾನ ಕಡಿತ, ಬಿತ್ತನೆ ಬೀಜ ಬೆಲೆ ಏರಿಕೆ ವಿಚಾರಗಳ ಬಗ್ಗೆ ಕೂಡಾ ಚರ್ಚೆ ಮಾಡುತ್ತೇವೆ. ಸರ್ಕಾರದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿರುವ ಬಗ್ಗೆಯೂ ಅಧಿವೇಶನದಲ್ಲಿ ಚರ್ಚಿಸಲು ದಾಖಲೆ ಸಿದ್ಧಪಡಿಸಿಟ್ಟುಕೊಂಡಿದ್ದೇವೆ. ಕಾಂಗ್ರೆಸ್ ಶಾಸಕ ಗವಿಯಪ್ಪ ಇಂದು ಗವಿಯಿಂದ ಗುಡುಗಿದ್ದಾರೆ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಲದಲ್ಲಿ ಕೂತಿದ್ದಾರೆ. ಬಿಲ ಓಪನ್ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಚಳಿಗಾಲದ ಅಧಿವೇಶ: ಬಿಜೆಪಿ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡಿದ ಕಾಂಗ್ರೆಸ್, ಎಲ್ಲರ ಚಿತ್ತ ರಾಜ್ಯಪಾಲರತ್ತ
ವಕ್ಫ್ ವಿಚಾರವಾಗಿ ಮಾತನಾಡಿದ ಅವರು, ವಕ್ಫ್ ವಿಚಾರ ಬಿಜೆಪಿ ವಿಚಾರವಾಗಿ ಉಳಿದಿಲ್ಲ, ಜನರ ವಿಚಾರವಾಗಿದೆ. ವಕ್ಫ್ ವಿಚಾರದಲ್ಲಿ ಯಾರೇ ಹೋರಾಟ ಮಾಡಿದರೂ ಸ್ವಾಗತಿಸುತ್ತೇವೆ. ವಿಧಾನಸಭೆಯೊಳಗೆ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ. ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ನಾನು ಮಾತನಾಡುತ್ತೇನೆ ಎಂದಿದ್ದಾರೆ.
EVM ಹ್ಯಾಕ್ ಆಗಿದ್ದಕ್ಕೆ ಮಹಾರಾಷ್ಟ್ರದಲ್ಲಿ ನಮಗೆ ಸೋಲು’ ಜಿ. ಪರಮೇಶ್ವರ್ ಹೇಳಿಕೆಗೆ ವಿಪಕ್ಷ ನಾಯಕ ಅಶೋಕ್ ಪ್ರತಿಕ್ರಿಯಿಸಿದ್ದು, ಇವಿಎಂ ಸರಿ ಇಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಮಗೂ ಕರ್ನಾಟಕದಲ್ಲಿ ಅನುಮಾನ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ 90 ಸ್ಥಾನ ದಾಟಲ್ಲ ಆದರೂ, 136 ಸ್ಥಾನ ಹೇಗೆ ಬಂತು? ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ 136 ಸ್ಥಾನ ಹೇಗೆ ಬಂತು? ತಕ್ಷಣ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. ಗೆದ್ದಾಗ ಕುಣಿಯುವುದು, ಸೋತಾಗ ಬಾಯಿ ಬಡಿದುಕೊಳುತ್ತಾರೆ. ಬೈಎಲೆಕ್ಷನ್ನಲ್ಲಿ ಸೋತಾಗ ನಾವು ಇವಿಎಂ ಮೇಲೆ ಆರೋಪಿಸಿಲ್ಲ. ಬ್ಯಾಲೆಟ್ನಲ್ಲಿ ಚುನಾವಣೆ ನಡೆಸಿ ಎಂದು ಎಲ್ಲರೂ ಸೇರಿ ಚುನಾವಣಾ ಆಯೋಗಕ್ಕೆ ಮನವಿ ಮಾಡೋಣ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:03 pm, Tue, 26 November 24