ರಾಯಚೂರು: ಮಸೀದಿಯೊಳಗೆ ಬಿಯರ್ ಬಾಟಲ್ ಒಡೆದು ಕಿಡಿಗೇಡಿಗಳ ಅಟ್ಟಹಾಸ, ಅಪ್ರಾಪ್ತ ಸೇರಿ 7 ಜನ ವಶಕ್ಕೆ
ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಫಿರ್ದೋಸಿ ಮಸೀದಿ ಒಳಗೆ ಬಿಯರ್ ಬಾಟಲ್ ಒಡೆದು ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು ತಡ ರಾತ್ರಿ ಜನರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸದ್ಯ ಪೊಲೀಸರು 7 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರಾಯಚೂರು, ಜುಲೈ.31: ರಾಯಚೂರಿನಲ್ಲಿ ಮಸೀದಿಯೊಳಗೆ ಬಿಯರ್ ಬಾಟಲ್ ಎಸೆದು ಕಿಡಿಗೇಡಿಗಳು ಅಟ್ಟಹಾಸ ಮೆರೆದಿರುವ ಘಟನೆ ರಾಯಚೂರು (Raichur) ಜಿಲ್ಲೆ ಸಿರವಾರ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಫಿರ್ದೋಸಿ ಮಸೀದಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಫಿರ್ದೋಸಿ ಮಸೀದಿಯಲ್ಲಿ ಬಿಯರ್ ಬಾಟಲ್ ಒಡೆದು ಕಿಡಿಗೇಡಿಗಳು ದರ್ಪ ಮೆರೆದಿದ್ದು ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಮುಸ್ಲಿಂ ಸಮುದಾಯದ ಜನ ಸ್ಥಳದಲ್ಲಿ ಜಮಾಯಿಸಿದ್ದರು. ಸದ್ಯ ಇದೀಗ ಪೊಲೀಸರು ಈ ಘಟನೆ ಸಂಬಂಧ ಓರ್ವ ಅಪ್ರಾಪ್ತ ಸೇರಿ 7 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ತಡ ರಾತ್ರಿ ಈ ಘಟನೆ ನಡೆಯುತ್ತಿದ್ದಂತೆ ಕೂಡಲೇ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ, ಕ್ರಮ ಕೈಗೊಳ್ಳುವಂತೆ ಜನರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಅಧಿಕಾರಿಗಳು ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದ್ರು ಇನ್ನು ಘಟನೆ ಸಂಬಂಧ ಕೇಸ್ ದಾಖಲಾಗಿದ್ದು ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಜನರು ಪ್ರತಿಭಟನೆ ನಿಲ್ಲಿಸಿ ತಮ್ಮ ಮನೆ ಸೇರಿದ್ರು. ಸದ್ಯ ಈಗ ಕಾರ್ಯಾಚರಣೆ ನಡೆಸಿ ಓರ್ವ ಅಪ್ರಾಪ್ತ ಸೇರಿ 7 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಯಚೂರು ಜಿಲ್ಲೆ ಸಿರವಾರ ಪೊಲೀಸರು ಸಾಗರ್, ಬಸವ, ವಿಜಯ್, ರಂಗನಾಥ್, ಸುರೇಶ್, ಸಾಬಯ್ಯ ಹಾಗೂ ಓರ್ವ ಆಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೆಡಿಕಲ್ ಶಾಪ್ ಮಾಲೀಕನನ್ನು ಬಂಧಿಸಿದ ಪೊಲೀಸರು
ಧಾರವಾಡದಲ್ಲಿ ನಿಷೇಧಿತ ಔಷಧ ಮಾರಾಟ ಮಾಡುತಿದ್ದ ಮೆಡಿಕಲ್ ಶಾಪ್ ಮಾಲೀಕನನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೆಡಿಕಲ್ ಶಾಪ್ನಲ್ಲಿ ತಮಿಳುನಾಡು ಮೂಲದ ವ್ಯಕ್ತಿ ಔಷಧ ಖರೀದಿಸಿದ್ನಂತೆ. ಔಷಧಿ ಖರೀದಿಸಿದ ವ್ಯಕ್ತಿಯನ್ನ ತಮಿಳುನಾಡು ಪೊಲೀಸರು ವಿಚಾರಣೆ ನಡೆಸಿದ್ರು. ಧಾರವಾಡದಲ್ಲಿ ಖರೀದಿಸಿದ್ದಾಗಿ ಹೇಳಿದ್ದಾನೆ. ಈ ಮಾಹಿತಿ ಆಧರಿಸಿ ಧಾರವಾಡಕ್ಕೆ ಬಂದ ಕೊಯಿಮತ್ತೂರು ಪೊಲೀಸರು ಮೆಡಿಕಲ್ ಶಾಪ್ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ವಯನಾಡು ಭೂಕುಸಿತ: ಕರ್ನಾಟಕದ ನಾಲ್ವರು ಸಾವು, ಮಂಡ್ಯದ ಮಹಿಳೆ ನಾಪತ್ತೆ
ತಹಶೀಲ್ದಾರ್ ಸಮ್ಮುಖದಲ್ಲೇ ಅಧಿಕಾರಿ ಮೇಲೆ ಹಲ್ಲೆ
ತಹಶೀಲ್ದಾರ್ ಸಮ್ಮುಖದಲ್ಲೇ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಜಮೀನಿನ ದಾರಿ ವಿವಾದ ಸಂಬಂಧ ರೈತ ತಿಪ್ಪೇಸ್ವಾಮಿ ದೂರು ನೀಡಿದ್ರು. ರೈತನ ದೂರಿನನ್ವಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಪರಿಶೀಲಿಸಿ ದಾರಿ ಬಿಟ್ಟುಕೊಡುವಂತೆ ಸೂಚಿಸಿದ್ರು. ಇದ್ರಿಂದ ಕೆರಳಿದ ಶಿವಶಂಕರ್ ರೆಡ್ಡಿ, ವಿದ್ಯಾಶಂಕರ್ ರೆಡ್ಡಿ ಎಂಬುವವರು ಕಂದಾಯ ನಿರೀಕ್ಷಕ ಪ್ರಾಣೇಶ್ ಮೇಲೆ ಹಲ್ಲೆ ಮಾಡಿದ್ದಾರೆ.
ಆತ್ಯಾಚಾರ ಎಸಗಿದ್ದ ಆರೋಪದಡಿ ಪೂಜಾರಿ ಅರೆಸ್ಟ್
ಮಹಿಳೆ ಮೇಲೆ ಆತ್ಯಾಚಾರ ಎಸಗಿದ್ದ ಆರೋಪದಡಿ ಪೂಜಾರಿ ಅರೆಸ್ಟ್ ಆಗಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ ಬಂಧಿಸಲಾಗಿದೆ. ಮಹಿಳೆಯ ದೂರಿನ್ವಯ ಆರೋಪಿಯನ್ನ ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದೋಷ ನಿವಾರಣೆಗೆ ಪೂಜೆ ಮಾಡುತ್ತೇನೆಂದು ಹಣ ಪಡೆದು, ಬಳಿಕ ಮಹಿಳೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:29 am, Wed, 31 July 24