ರಾಯಚೂರು, ಫೆಬ್ರವರಿ 11: ಲಿಂಗಸಗೂರು (Lingasur) ತಾಲೂಕಿನ ನೀರಲಕೇರಿ ಗ್ರಾಮದ ನೀರಲಕೇರಿ ಸರಕಾರಿ ಶಾಲೆಯ (Government School) 150 ಕ್ಕೂ ಹೆಚ್ಚು ಮಕ್ಕಳ ಮಂಗನ ಬಾವು (Mumps Virus) ಕಾಣಿಸಿಕೊಂಡಿದೆ. ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಿ, ಇಡೀ ಶಾಲೆಯನ್ನು ಆವರಿಸಿದೆ. ಗಂಟಲು ಭಾಗದಲ್ಲಿ ಬಾವು, ತಲೆನೋವು, ಸ್ನಾಯು ಸೆಳೆತದಿಂದ ಮಕ್ಕಳು ಬಳಲುತ್ತಿದ್ದಾರೆ. ಬಾವು ಇರುವ ಕಡೆ ಅರಿಶಿಣ ಮತ್ತು ಪಟ್ಟಿ ಹಾಕಿ ಪೋಷಕರು ಮನೆ ಮದ್ದು ನೀಡುತ್ತಿದ್ದಾರೆ. ಮಂಗನ ಬಾವು ಕಾಯಿಲೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದಾರೆ. ಸದ್ಯ ಭಾದಿತರಿಗೆ ಆನೆಹೊಸರು, ಲಿಂಗಸಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಚಾರ ತಿಳಿದು ಗ್ರಾಮದಲ್ಲಿ ಮುಕ್ಕಾಂ ಹೂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ಪೋಷಕರು ಹೆದರುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಬೇಸಿಗೆಯ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಖಾಯಿಲೆ ಬರುತ್ತದೆ. ಮೂರು-ನಾಲ್ಕು ದಿನಗಳಲ್ಲಿ ಬಾವು ವಾಸಿಯಾಗತ್ತೆ. ಸದ್ಯ ಶಾಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮಂಗನ ಬಾವು ಅಥವಾ ಕೆಪ್ಪಟ ಮಮ್ಸ್ ಎಂಬ ವೈರಾಣುಗಳಿಂದ ಈ ರೋಗ ಬರುತ್ತದೆ. ಪ್ಯಾರೊಟಿಡ್ ಗ್ರಂಥಿಗಳನ್ನು ದೊಡ್ಡದಾಗಿಸುವ ಮೂಲಕ ತೀವ್ರ ನೋವನ್ನುಂಟು ಮಾಡುತ್ತದೆ. ಕಿವಿಯ ಮುಂಭಾಗದಲ್ಲಿ ಕೆಳಗಡೆ ಇರುವ ಈ ಗ್ರಂಥಿಗಳು ಜೊಲ್ಲನ್ನು ಉತ್ಪಾದಿಸುತ್ತವೆ.
ಇದನ್ನೂ ಓದಿ: Monkeypox: ಮಂಗನ ಕಾಯಿಲೆಯಿಂದ ಯಾರಿಗೆ ಅಪಾಯ ಜಾಸ್ತಿ?; ಮಂಕಿಫಾಕ್ಸ್ನಿಂದ ಪಾರಾಗುವುದು ಹೇಗೆ?
ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ಮಗು, ವ್ಯಕ್ತಿಯ ಸಂಪರ್ಕದಿಂದಾಗಿ (ದೈಹಿಕ ಸ್ಪರ್ಶ,ಎಂಜಲು,ಉಸಿರಾಟ) ಇನ್ನೊಬ್ಬರಿಗೆ ಹರಡುತ್ತದೆ. 2 ರಿಂದ 12 ವರ್ಷ ಪ್ರಾಯದ ಮಕ್ಕಳು ಈ ಸೋಂಕಿಗೆ ಹೆಚ್ಚಾಗಿ ಗುರಿಯಾಗುತ್ತಾರೆ. ವಯಸ್ಸಾದವರಲ್ಲಿ ಪ್ಯಾರೊಟಿಡ್ ಗ್ರಂಥಿಗಳ ಜೊತೆಗೆ ವೃಷಣಗಳು, ಮೇದೋಜ್ಜೀರಕ ಗ್ರಂಥಿ ಮತ್ತು ನರಮಂಡಲದಂತಹ ಇತರ ಅಂಗಾಂಗಗಳೂ ಈ ಸೋಂಕಿಗೊಳಗಾಗಬಹುದು. ಸಾಮಾನ್ಯವಾಗಿ ವೈರಾಣು ಸೋಂಕು ಉಂಟಾದ 12ರಿಂದ 14 ದಿನಗಳಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತವೆ.
ಮಂಗನಬಾವು ಬಂದಾಗ ಮುಖದ ಕೆಳಗಿನ ಭಾಗ ಊದಿಕೊಳ್ಳುತ್ತದೆ. ಇದು ತಲೆನೋವು, ಜ್ವರ ಮತ್ತು ಆಯಾಸದಂತಹ ಸೌಮ್ಯ ಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಆದರೆ ನಂತರ ಗಂಟಲಿನಲ್ಲಿ ತೀವ್ರವಾದ ಊತ ಉಂಟಾಗುತ್ತದೆ. ಹಿಂದೆ ಮಂಗನಬಾವು ಮಕ್ಕಳಲ್ಲಿ ಉಂಟಾಗುವ ಬಹಳ ಸಾಮಾನ್ಯ ಕಾಯಿಲೆಯಾಗಿತ್ತು. 1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ರೋಗದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ದಡಾರ-ಮಂಪ್ಸ್-ರುಬೆಲ್ಲಾ (MMR) ಲಸಿಕೆಯನ್ನು ಪಡೆಯುವ ಮೂಲಕ ನಿಮ್ಮ ಮಗುವಿಗೆ ಮಂಗನಬಾವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ