ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ದಾಳಿಂಬೆ ಬೆಳೆಗೆ ಹರಡಿದ ವೈರಸ್; 30 ಲಕ್ಷ ರೂ. ನಷ್ಟ, ರೈತನ ಕಣ್ಣೀರು
ರೈತರ ಸ್ಥಿತಿ ಹೇಗೆ ಅಂದರೆ ಮಳೆ ಬಂದರೂ ಕಷ್ಟ, ಮಳೆ ಬಾರದೇ ಇದ್ದರೂ ಕಷ್ಟ. ಇದೀಗ ರಾಯಚೂರಿನಲ್ಲಿ ಮಳೆಯ ಕಣ್ಣಾ ಮುಚ್ಚಾಲೆ ಆಟಕ್ಕೆ ದಾಳಿಂಬೆ ಬೆಳೆಗೆ ವೈರಸ್ ಅಟ್ಯಾಕ್ ಆಗಿದ್ದು, ಲಕ್ಷಾಂತರ ಮೌಲ್ಯದ ದಾಳಿಂಬೆ ತೋಟ ಸಂಪೂರ್ಣ ಹಾಳಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ರಾಯಚೂರು, ಆ.30: ಬಿಸಿಲನಾಡು ರಾಯಚೂರಿನಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಇದರಿಂದ ಸಾಮಾನ್ಯ ರೈತರಿಗೇನು ಸಮಸ್ಯೆ ಆಗುತ್ತಿಲ್ಲ. ಆದ್ರೆ, ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಹೌದು, ರಾಯಚೂರು ಜಿಲ್ಲೆಯಲ್ಲಿ ಮಳೆ ಕಣ್ಣಾ ಮುಚ್ಚಾಲೆ ಆಟಕ್ಕೆ ಹೊಸ ವೈರಸ್ ಉಲ್ಬಣಿಸಿದೆ. ದಾಳಿಂಬೆ ಗಿಡಗಳಿಗೆ ದುಂಡಾಣುರೋಗ(Bacterial blight) ಎನ್ನುವ ವೈರಸ್ ಬಾಧಿಸುತ್ತಿದ್ದು, ರೈತರನ್ನ ದಿಕ್ಕೇಡುವಂತೆ ಮಾಡಿದೆ.
ಬೆಳೆಗೆ ವೈರಸ್ ಅಟ್ಯಾಕ್; 30 ಲಕ್ಷ ರೂ. ನಷ್ಟ
ದಾಳಿಂಬೆ ಗಿಡಗಳಿಗೆ ಬ್ಯಾಕ್ಟೀರಿಯಲ್ ಬ್ಲೈಟ್ ವೈರಸ್ ಹರಡುತ್ತಿರುವುದರಿಂದ ಜಿಲ್ಲೆಯ ಕೆಲ ರೈತರು ಕಂಗಾಲಾಗಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗುಡಿಗಾಳ ಎನ್ನುವ ಗ್ರಾಮದ ಈರಣ್ಣ ಎನ್ನುವ ರೈತ, ತನ್ನ ಹತ್ತು ಎಕೆರೆಯಲ್ಲಿ ಬೆಳೆದ ದಾಳಿಂಬೆ ಸಂಪೂರ್ಣ ಹಾಳಾಗಿದೆ. ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವುದರಿಂದ ಸೆಕೆ ಹೆಚ್ಚಾಗಿ ವಾತಾವರಣದಲ್ಲಿನ ಏರುಪೇರಿನಿಂದ ಈ ವೈರಸ್ ಉಲ್ಬಣಿಸುತ್ತಿದೆ. ಒಂದು ದಾಳಿಂಬೆಗೆ ವೈರಸ್ ಅಟ್ಯಾಕ್ ಆದರೆ ಇಡೀ ಕಾಯಿ, ಗಿಡ ಹಾಳಾಗುತ್ತದೆ.
ಇದನ್ನೂ ಓದಿ:ಬಾಗಲಕೋಟೆ: ಭೀಕರ ಬರಕ್ಕೆ ತತ್ತರಿಸಿದ್ದ ರೈತನ ಕೈ ಹಿಡಿದ ದಾಳಿಂಬೆ ಬೆಳೆ
ಬಳಿಕ ಇಡೀ ತೋಟಕ್ಕೆ ತೋಟವೇ ವೈರಸ್ಗೆ ತುತ್ತಾಗುತ್ತದೆ. ಇದೇ ರೀತಿ ರೈತ ಈರಣ್ಣನ ಇಡೀ ತೋಟ ಹಾಳಾಗಿ ಹೋಗಿದ್ದು, ಬೇರೆ ತೋಟಗಳಿಗೂ ಇದು ವ್ಯಾಪಿಸುವ ಹಿನ್ನೆಲೆ ಲೋಡ್ಗಟ್ಟಲೇ ವೈರಸ್ ಅಟ್ಯಾಕ್ ಆದ ದಾಳಿಂಬೆ ಹಣ್ಣುಗಳನ್ನ ಮಣ್ಣಿನಲ್ಲಿ ಹೂಳಲಾಗಿದೆ. ಸದ್ಯ ರೈತ ಈರಣ್ಣಗೆ 30 ಲಕ್ಷ ದಷ್ಟು ನಷ್ಟ ಆಗಿದೆ. ಇಷ್ಟೆಲ್ಲಾ ದಾಳಿಂಬೆ ತೋಟ ನಾಶ ಆಗುತ್ತಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈರಣ್ಣರ ತೋಟಕ್ಕೆ ಭೇಟಿ ನೀಡಿ ವೈರಸ್ ಬಗ್ಗೆ ಅಧ್ಯಯನ ನಡೆಸುವ ಮನಸ್ಸು ಮಾಡುತ್ತಿಲ್ಲ. ಕೂಡಲೇ ಅಧಿಕಾರಿಗಳು ಈ ನಷ್ಟಕ್ಕೆ ಪರಿಹಾರ ನೀಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 pm, Fri, 30 August 24