ರಾಯಚೂರು: ಒಂದೇ ಊರಿನ ಮೂವರು ಯುವತಿಯರ ಆತ್ಮಹತ್ಯೆ ಯತ್ನಕ್ಕೆ ಬಿಗ್ ಟ್ವಿಸ್ಟ್, ಒಬ್ಬೊಬ್ಬರಿಗೂ ಇತ್ತು ಒಂದೊಂದು ಲವ್ ಸ್ಟೋರಿ!
ರಾಯಚೂರಿನಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದೆ. ರಾತ್ರಿ ಮನೆಗೆ ಸೇರಬೇಕಿದ್ದವರು ಸಾವಿನ ಮನೆ ಸೇರಲು ಕಾರಣವೇ ಲವ್ ಸ್ಟೋರಿ. ಅಷ್ಟಕ್ಕೂ ಆ ಭಯಾನಕ ಘಟನೆ ಯಾಕಾಯಿತು? ಘಟನೆ ಹಿಂದಿನ ಪ್ರೇಮ ಪ್ರಕರಣಗಳು ಎಂಥವು? ವಿವರಗಳಿಗೆ ಮುಂದೆ ಓದಿ.

ರಾಯಚೂರು, ಸೆಪ್ಟೆಂಬರ್ 16: ಒಂದೇ ಊರಿನ ಮೂವರು ಯುವತಿಯರು ರಾಯಚೂರು (Raichur) ಜಿಲ್ಲೆ ದೇವದುರ್ಗ ತಾಲ್ಲೂಕಿನ ಕ್ವಾರಿಯರದೊಡ್ಡಿ ಗ್ರಾಮದಲ್ಲಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಕೃಷಿ ಕೆಲಸ ಮಾಡಿ ಮನೆ ಸೇರಬೇಕಿದ್ದವರು ಪೋಷಕರ ನೆಮ್ಮದಿಯನ್ನೇ ಕಸಿದುಕೊಂಡಿದ್ದರು. ಈ ಪೈಕಿ 18 ವರ್ಷದ ರೇಣುಕಾ ಮೃತಪಟ್ಟಿದ್ದರೆ, ತಿಮ್ಮಕ್ಕ ಹಾಗೂ ಮತ್ತೊಬ್ಬ ಅಪ್ರಾಪ್ತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಈ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ ಎಂಬುದೇ ನಿಗೂಢವಾಗಿತ್ತು. ಸಂಚಲನ ಸೃಷ್ಟಿಸಿದ್ದ, ಪ್ರಕರಣಕ್ಕೆ ಇದೀಗ ಪೊಲೀಸ್ ತನಿಖೆ ವೇಳೆ ದೊಡ್ಡ ತಿರುವು ದೊರೆತಿದೆ.
ದೇವದುರ್ಗ ಪೊಲೀಸರ ತನಿಖೆ ವೇಳೆ ದುರಂತದ ಹಿಂದಿನ ಲವ್ ಸ್ಟೋರಿ ಬಯಲಾಗಿದೆ. ಈ ಪ್ರೇಮ ಪ್ರಕರಣವೇ ಮೂವರು ಯುವತಿಯರ ಬಾಳಿಗೆ ಎರವಾಗಿದ್ದು, ಮೂವರೂ ಆತ್ಮಹತ್ಯೆಗೆ ಯತ್ನಿಸಲು ಕಾರಣವಾಗಿದೆ.
ನಿಶ್ಚಿತಾರ್ಥ ನಿಗದಿ: ಪ್ರೇಮ ಪ್ರಕರಣ ಬಹಿರಂಗವಾಗುವ ಹೆದರಿಕೆಯಿಂದ ಆತ್ಮಹತ್ಯೆ
ಆತ್ಮಹತ್ಯೆಗೆ ಯತ್ನಿಸಿದ್ದ ಮೂವರ ಹಿಂದೆ ಒಂದೊಂದು ಲವ್ ಸ್ಟೋರಿ ಇತ್ತು. ಮೃತ ರೇಣುಕಾ, ತಿಮ್ಮಕ್ಕ ಹಾಗೂ ಅಪ್ರಾಪ್ತೆ ಮೂವರೂ ಸಂಬಂಧಿಕರು. ಮೂವರು ಓಬ್ಬೊಬ್ಬ ಯುವಕನ ಜೊತೆ ಪ್ರಣಯದಲ್ಲಿದ್ದರು. ಈ ಮಧ್ಯೆ ರೇಣುಕಾಗೆ ಬೇರೋಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಇನ್ನೊಂದು ವಾರದಲ್ಲಿ ನಿಶ್ಚಿತಾರ್ಥವಿತ್ತು. ಹೀಗಾಗಿ ರೇಣುಕಾ ಒಳಗೊಳಗೆ ಬೇಸರಗೊಂಡಿದ್ದಳು ಎನ್ನಲಾಗಿದೆ. ಒಂದು ವೇಳೆ, ಈ ಬಗ್ಗೆ ಹಿರಿಯರು ಪ್ರಶ್ನೆ ಮಾಡಿದರೆ ಮೂವರ ಪ್ರೇಮ ಪ್ರಕರಣವೂ ಬಯಲಾಗತ್ತದೆ ಎಂದು ಅವರು ಆತಂಕಗೊಂಡಿದ್ದರು.
ಹೀಗಾಗಿ ಕಳೆದ ವಾರವೇ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದರು. ಈ ಮಧ್ಯೆ, ಭಾನುವಾರ ತಿಮ್ಮಕ್ಕನ ಹೊಲಕ್ಕೆ ತಿಮ್ಮಕ್ಕ, ರೇಣುಕಾ ಹಾಗೂ ಆಪ್ರಾಪ್ತೆ ಕೆಲಸಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ತಿಮ್ಮಕ್ಕ ಕ್ರಿಮಿನಾಶಕ ಸೇವಿಸಿದ್ದಳು. ಬಳಿಕ ರೇಣುಕಾ ಮತ್ತು ಅಪ್ರಾಪ್ತೆ ಕೂಡ ಅದೇ ಕ್ರಿಮಿನಾಶಕ ಸೇವಿಸಿದ್ದಾಳೆ. ಆಗ ತಿಮ್ಮಕ್ಕ ಒದ್ದಾಡಲು ಶುರು ಮಾಡಿದಳು. ಇದೇ ವೇಳೆ ತಿಮ್ಮಕ್ಕ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ರೇಣುಕಾ ಹಾಗೂ ಅಪ್ರಾಪ್ತೆ ಭಯಭೀತರಾಗಿ ತಿಮ್ಮಕ್ಕನ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಸ್ಥಳೀಯರು ಧಾವಿಸಿ, ಅಪ್ರಾಪ್ತೆಯನ್ನು ಬದುಕಿಸಿದ್ದರೆ ರೇಣುಕಾ ಸಾವನ್ನಪ್ಪಿದ್ದಳು.
ಮಗಳ ಸಾವಿನ ಬಗ್ಗೆ ಕುಟುಂಬಸ್ಥರು, ತಿಮ್ಮಕ್ಕ ಮತ್ತು ಅಪ್ರಾಪ್ತೆ ಮೇಲೆ ಅನುಮಾನವಿದೆ ಎಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ವಿಜಯಪುರ: ಅಕ್ರಮ ಸಂಬಂಧಕ್ಕಾಗಿ ಪ್ರೇಮಿಯ ಕೈಯಲ್ಲೇ ಪತಿಯ ಕೊಲೆ ಮಾಡಿಸಲೆತ್ನಿಸಿದ ಪತ್ನಿ, ರಹಸ್ಯ ಬಯಲಾಗಿದ್ದೇ ರೋಚಕ
ಸದ್ಯ ದೇವದುರ್ಗ ಠಾಣೆಯಲ್ಲಿ ಘಟನೆ ಸಂಬಂಧ ಯುಡಿಆರ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ವಿಷ ಸೇವಿಸಿದ್ದ ತಿಮ್ಮಕ್ಕಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪ್ರಾಪ್ತೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ರೇಣುಕಾಳ ಕುಟುಂಬಸ್ಥರ ಆಕ್ರಂದನ ಕಣ್ಣೀರು ತರಿಸುವಂತಿದೆ.



