
ರಾಯಚೂರು, ಜೂ.18: ಹಾಸ್ಟೆಲ್‌ಗಳಲ್ಲಿ ಮಕ್ಕಳನ್ನು ಬಿಟ್ಟು ಓದಿಸುತ್ತಿರುವ ಪೋಷಕರು ಒಮ್ಮೆ ಈ ಸ್ಟೋರಿ ಓದಲೇಬೇಕು. ರಾಯಚೂರಿನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸುಲಭವಾಗಿ ಹಣ ಗಳಿಸಿ ಮಜಾ ಉಡಾಯಿಸುವ ಹಪಾಹಪಿಗೆ ಬಿದ್ದ ಇಬ್ಬರು ಪದವಿ ವಿದ್ಯಾರ್ಥಿಗಳು ಸ್ಥಳೀಯ ಯುವಕನೊಂದಿಗೆ ಸೇರಿ ದೊಡ್ಡ ಮಟ್ಟದ ಬೈಕ್ ಕಳ್ಳತನದ ಜಾಲವನ್ನು ನಡೆಸುತ್ತಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ರಾಯಚೂರು ನಗರದ ನೇತಾಜಿನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಬರೋಬ್ಬರಿ 15 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ರಾಯಚೂರು ನಗರದ ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸವಿದ್ದ ಬಿಎ (BA) ವಿದ್ಯಾರ್ಥಿ ಆಕಾಶ್, ಬಿಕಾಂ (B.Com) ವಿದ್ಯಾರ್ಥಿ ಕಾರ್ತಿಕ್ ಮತ್ತು ಸ್ಥಳೀಯ ಒಡನಾಡಿ ಆಂಜನೇಯ ಬಂಧಿತ ಆರೋಪಿಗಳಾಗಿದ್ದಾರೆ. ನಾರಾಯಣ ಎಂಬ ವಿದ್ಯಾರ್ಥಿಯ ಪಲ್ಸರ್ ಬೈಕ್ ಮೇ 25 ರಂದು ಕಳ್ಳತನವಾಗಿತ್ತು. ಈ ಕುರಿತು ಆತ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಆಕಾಶ್ ಮತ್ತು ಗ್ಯಾಂಗ್ ನಾರಾಯಣನ ಪಲ್ಸರ್ ಬೈಕ್ ಕದ್ದು, ಅದರ ನಂಬರ್ ಪ್ಲೇಟ್ ಹಾಗೂ ಬಿಡಿಭಾಗಗಳನ್ನು ಸಂಪೂರ್ಣ ಮಾರ್ಪಾಡು (Modify) ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದರು.
ಕೆಲವು ದಿನಗಳ ನಂತರ, ನಾರಾಯಣನ ಮೊಬೈಲ್‌ಗೆ ಗೆಳೆಯರ ಮೂಲಕ “ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕ್ ಮಾರಾಟಕ್ಕಿದೆ” ಎಂಬ ಜಾಹೀರಾತಿನ ಫೋಟೋವೊಂದು ಬಂದಿದೆ. ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ ನಾರಾಯಣ, ಅದು ಮಾರ್ಪಾಡಾಗಿದ್ದರೂ ತನ್ನದೇ ಹಳೆಯ ಬೈಕ್ ಎಂಬುದನ್ನು ಖಾತ್ರಿಪಡಿಸಿಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು
ಮಾಹಿತಿ ಸಿಗುತ್ತಿದ್ದಂತೆ ನೇತಾಜಿನಗರ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಬೈಕ್ ಮಾರಾಟ ಮಾಡುವ ನೆಪದಲ್ಲಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಅವರ ಒಡನಾಡಿ ಲಾಕ್ ಆಗಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇವರು ರಾಯಚೂರು ಸುತ್ತಮುತ್ತಲಿನ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ನೆರೆಯ ತೆಲಂಗಾಣ ರಾಜ್ಯದಲ್ಲೂ ಬೈಕ್‌ಗಳನ್ನು ಕದ್ದು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಅವರಿಂದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದೀಗ ಅವರ ವಿರೋಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ