ರಾಯಚೂರಿನಲ್ಲಿ ವಾಲಿದ ಮೂರು ಅಂತಸ್ತಿನ ಕಟ್ಟಡ: ಪ್ರಾಣಾಪಾಯದಿಂದ ಪಾರಾದ ಕುಟುಂಬಗಳು
ರಾಯಚೂರಿನ ನವರಂಗ ದರ್ವಾಜಾ ಬಳಿಯ ಮೂರು ಅಂತಸ್ತಿನ ಕಟ್ಟಡವು ಪಕ್ಕದ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ವಾಲಿದೆ. ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಟ್ಟಡದ ಅಡಿಪಾಯ ದೋಷ ಅಥವಾ ಪಾಲಿಕೆಯ ಚರಂಡಿ ಅವ್ಯವಸ್ಥೆ ಕಾರಣ ಎಂದು ಶಂಕಿಸಲಾಗಿದೆ. ಪಾಲಿಕೆ ಕಟ್ಟಡದ ಎರಡು ಅಂತಸ್ತುಗಳನ್ನು ತೆರವುಗೊಳಿಸಲು ಆದೇಶಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಭರವಸೆ ನೀಡಿದೆ.

ರಾಯಚೂರು, ಜುಲೈ 27: ರಾಯಚೂರು (Raichur) ನಗರದಲ್ಲಿನ ಮೂರು ಅಂತಸ್ತಿನ ಕಟ್ಟಡವೊಂದು ಪಕ್ಕದ ನಾಲ್ಕು ಅಂತಸ್ತಿನ ಕಟ್ಟಡದ (Building) ಮೇಲೆ ವಾಲಿದೆ. ಅದೃಷ್ಟವಶಾತ್ ಈ ಕಟ್ಟಡಗಳಲ್ಲಿ ವಾಸವಾಗಿದ್ದ ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿವೆ. ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ರಾಯಚೂರು ನಗರದ ನವರಂಗ ದರ್ವಾಜಾ ಬಳಿ ಇರುವ ಮೊಹಮ್ಮದ್ ದಸ್ತಗಿರ್ ಎಂಬುವರಿಗೆ ಸೇರಿದ ಮೂರು ಅಂತಸ್ತಿನ ವಸತಿ ಸಮುಚ್ಚಯವು ಪಕ್ಕದಲ್ಲಿರುವ ಸಿರಾಜ್ ಎಂಬುವರಿಗೆ ಸೇರಿದ ನಾಲ್ಕು ಅಂತಸ್ತಿನ ವಸತಿ ಸಮುಚ್ಚಯ ಮೇಲೆ ಶನಿವಾರ ರಾತ್ರಿ ವಾಲಿತ್ತು. ಈ ವಸತಿ ಸಮುಚ್ಚಯಗಳಲ್ಲಿ ಕುಟುಂಬಗಳು ವಾಸವಾಗಿದ್ದು, ಬೇರೆಕಡೆ ಶಿಫ್ಟ್ ಮಾಡಲಾಗಿದೆ.
ದಸ್ತಗಿರ್ ಅವರ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ವಾಲುತ್ತಿದ್ದಂತೆ, ಸಿರಾಜ್ ಅವರು ಕೂಡಲೇ ರಾಯಚೂರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ, ಅಧಿಕಾರಿಗಳು ಮತ್ತು ಪೊಲೀಸರು ಎರಡೂ ಕಟ್ಟಡದಲ್ಲಿ ವಾಸವಿದ್ದ ಕುಟುಂಬಗಳನ್ನು ಬೇರೆಡೆ ಶಿಫ್ಟ್ ಮಾಡಿದರು. ವಾಲಿರುವ ಕಟ್ಟಡದ ಮಾಲೀಕ ದಸ್ತಗಿರ್ ಸಿವಿಲ್ ಇಂಜಿಯರ್ ಆಗಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಾರೆ. ಇವರು ತಮ್ಮ ಕಟ್ಟಡಕ್ಕೆ ಸರಿಯಾಗಿ ಅಡಿಪಾಯ ಹಾಕಿಲ್ಲ. ಹೀಗಾಗಿ, ಕಟ್ಟಡ ವಾಲಿದೆ ಎಂಬ ಆರೋಪ ಕೇಳಿಬಂದಿದೆ.
ಆದರೆ, ಕಟ್ಟಡ ಮಾಲೀಕ ದಸ್ತಗಿರ್ ಈ ಆರೋಪವನ್ನು ತಳ್ಳಿಹಾಕಿದ್ದು, ಮನೆ ಪಕ್ಕ ಚರಂಡಿ ಇದೆ. ಆ ಚರಂಡಿ ನೀರು ಮುಂದೆ ಹರಿದು ಹೋಗುವುದಿಲ್ಲ. ಅಲ್ಲಲ್ಲಿ ನಿಂತುಕೊಂಡಿರತ್ತೆ. ಈ ನೀರು ಶೇಖರಣೆಯಾಗಿ ನಮ್ಮ ಕಟ್ಟಡದ ಅಡಿಪಾಯ ವೀಕ್ ಆಗಿ, ವಾಲಿದೆ. ಇದಕ್ಕೆಲ್ಲ ಪಾಲಿಕೆ ಚರಂಡಿ ಅವ್ಯವಸ್ಥೆ ಕಾರಣ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಪಾಲಿಕೆ ಅಧಿಕಾರಿಗಳು ಮಾತನಾಡಿ, “ಕಟ್ಟಡ ವಾಲಲು ಚರಂಡಿ ನೀರು ಶೇಖರಣೆ ಕಾರಣವಾಗಿದ್ದರೇ, ಅದೇ ಕಟ್ಟಡದ ಪಕ್ಕದಲ್ಲಿರುವ ಮತ್ತೊಂದು ಕಟ್ಟಡಕ್ಕೂ ಸಮಸ್ಯೆ ಆಗಬೇಕಿತ್ತು. ವಾಲಿರುವ ಕಟ್ಟಡ 14 ವರ್ಷ ಹಳೆಯದಾಗಿದೆ. ಕಟ್ಟಡದ ಅಡಿಪಾಯವನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ದುರಂತಕ್ಕೆ ಕಾರಣ ಇರಬಹುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಗರಬಾವಿಯಲ್ಲಿ ಕಟ್ಟಡ ವಾಲಲು ಕಾರಣವೇನು? ಮನೆ ಮಾಲೀಕರ ಪ್ರತಿಕ್ರಿಯೆ ಇಲ್ಲಿದೆ
ದಸ್ತಗಿರ್ ಅವರ ಕಟ್ಟಡ ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸಾಧ್ಯತೆ ಇದೆ. ಹೀಗಾಗಿ, ಪಾಲಿಕೆ ಕಟ್ಟಡದ ಪೈಕಿ ಎರಡು ಅಂತಸ್ತನ್ನು ಬೀಳಿಸಲು ಆದೇಶ ನೀಡಿದ್ದು, ಕಟ್ಟಡ ತೆರುವು ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪಾಲಿಕೆ ಮೇಯರ್ ಸಾಜಿದ್ ಸಮೀರ್, “ಮುಂದೆ ಇಂಥಹ ಘಟನೆ ಆಗದಂತೆ ಕ್ರಮವಹಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Sun, 27 July 25



