‘ಕಾಂತಾರ: ಚಾಪ್ಟರ್ 1’ ನೋಡಲು ತೆರಳಿದ್ದ ಯುವಕರು ದುರಂತ ಸಾವು
ಕಾಂತಾರ: ಚಾಪ್ಟರ್ 1 ಸಿನಿಮಾ ನೋಡಲು ಬಂದಿದ್ದ ಇಬ್ಬರು ಯುವಕರು ದುರಂತವಾಗಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ಸದ್ಯ ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಮೃತದೇಹಗಳು ರಾಯಚೂರಿನ ಸಿರವಾರ ಬಳಿ ಪತ್ತೆ ಆಗಿವೆ.

ರಾಯಚೂರು, ಅಕ್ಟೋಬರ್ 05: ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ: ಚಾಪ್ಟರ್ 1 ಚಿತ್ರದ ಕ್ರೇಜ್ ಎಲ್ಲೆಡೆ ಜೋರಾಗಿದೆ. ದೇಶ, ಹೊರದೇಶಗಳಲ್ಲಿ ಸಿನಿಮಾ ನೋಡಲು ಟಿಕೆಟ್ ಸಿಗುತ್ತಿಲ್ಲ. ಈ ಮಧ್ಯೆ ಕಾಂತಾರ: ಚಾಪ್ಟರ್ 1 ನೋಡಲು ತೆರಳಿದ್ದ ಯುವಕರಿಬ್ಬರು (boys) ದುರಂತವಾಗಿ ಸಾವನ್ನಪ್ಪಿರುವಂತಹ (death) ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ನಡೆದದ್ದೇನು?
ಮುದಗಲ್ನಿಂದ ಮಸ್ಕಿಗೆ ಕಾಂತಾರ ಸಿನಿಮಾ ನೋಡಲು ವೆಂಕಟೇಶ(28) ಮತ್ತು ಯಲ್ಲಾಲಿಂಗ(28) ಬಂದಿದ್ದರು. ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದಿದ್ದರಿಂದ ನಾಲೆಯಲ್ಲಿ ಈಜಾಡಿ, ನಂತರ ಸಂಜೆ ಸಿನಿಮಾ ನೋಡಲು ಪ್ಲ್ಯಾನ್ ಮಾಡಿಕೊಂಡಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರುಪಾಲು
ಈಜು ಬಾರದಿದ್ದರಿಂದ ನಾಲೆಯಲ್ಲಿ ಯಲ್ಲಾಲಿಂಗ ಕೊಚ್ಚಿಹೋಗುತ್ತಿದ್ದ. ಆತನ ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ನೀರುಪಾಲಾಗಿದ್ದಾನೆ. ಇಬ್ಬರ ಮೃತದೇಹಗಳು ರಾಯಚೂರಿನ ಸಿರವಾರ ಬಳಿ ಪತ್ತೆ ಆಗಿವೆ. ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ತೆರಳಿದ್ದ ಯುವಕ ನಾಲೆಯಲ್ಲಿ ನೀರುಪಾಲು
ಮತ್ತೊಂದು ಪ್ರಕರಣದಲ್ಲಿ ನಾಲೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹುದುಗೂರು ಬಳಿಯ ಹಾರಂಗಿ ನಾಲೆಯಲ್ಲಿ ನಡೆದಿದೆ. ಸಂತೋಷ್(28) ಮೃತ ವ್ಯಕ್ತಿ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹರ್ಷಪುರ ಗ್ರಾಮದ ಜಮೀನೊಂದರಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗಂಗಮ್ಮ(37) ಮತ್ತು ಶಕುಂತಲಾ (36) ಮೃತ ಅಕ್ಕ-ತಂಗಿ. ಇಬ್ಬರು ತವರು ಮನೆ ಹರ್ಷಪುರದಲ್ಲೇ ವಾಸಿಸುತ್ತಿದ್ದರು.
ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಸಹೋದರಿಯರ ಸಾವು
ಅಕ್ಕ-ತಂಗಿ ಇಬ್ಬರು ದನ ಮೇಯಿಸಲು ಹೊಲಕ್ಕೆ ತೆರಳಿದ್ದರು. ಎಷ್ಟೊತ್ತಾದರೂ ಮನೆಗೆ ಬರದಿದ್ದಾಗ ಅನುಮಾನ ಬಂದು ಹುಡುಕಾಡಿದ್ದು, ಈ ವೇಳೆ ಪಕ್ಕದ ಹೊಲದಲ್ಲಿನ ಕೃಷಿ ಹೊಂಡದ ಬಳಿ ಇಬ್ಬರ ಚಪ್ಪಲಿಗಳು ಪತ್ತೆ ಆಗಿವೆ.
ಇದನ್ನೂ ಓದಿ: ಮಹೇಂದ್ರ ಜತೆ ಆಯೇಷಾ ಪರಾರಿ ಶಂಕೆ: ಯುವಕನ ಸಂಬಂಧಿಗೆ ಚಾಕು ಇರಿದ ದುಷ್ಕರ್ಮಿಗಳು
ಅನಿಲ್ ಎಂಬುವರಿಗೆ ಕೃಷಿ ಹೊಂಡವಾಗಿದ್ದು, ಕೃಷಿ ಹೊಂಡದ ಸುತ್ತ ಯಾವುದೇ ಫೆನ್ಸಿಂಗ್ ಮಾಡಿಸಿರಲಿಲ್ಲ. ಅನುಮಾನ ಬಂದು ಕೃಷಿಹೊಂಡದಲ್ಲಿ ಹುಡುಕಿದಾಗ ಶವ ಪತ್ತೆ ಆಗಿದೆ. ಸದ್ಯ ಅಕ್ಕ-ತಂಗಿಯರ ಈ ಸಾವು ಅನುಮಾನ ಹುಟ್ಟಿಸಿದೆ. ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:47 pm, Sun, 5 October 25



