16 ಚಿನ್ನದ ಪದಕ ಬಾಚಿದ ರಾಯಚೂರಿನ ಬುಶ್ರಾ ಮತೀನ್​ಗೆ, ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಒತ್ತಾಸೆ

Bushra Mateen: ಬುಶ್ರಾ ಮತೀನ್ ಅವರ ತಂದೆ ಜೂನಿಯರ್ ಸಿವಿಲ್ ಎಂಜಿನಿಯರ್​, ಇನ್ನು ಹೆತ್ತಮ್ಮ ಪದವೀಧರರು. ಡಿಪ್ಲೊಮಾ ಎಂಜಿನಿಯರಿಂಗ್ ಮಾಡಿದ್ದ ಬುಶ್ರಾ ಮತೀನ್ ಅವರ ತಂದೆ ತಮ್ಮ ಮಗಳು ಅದೇ ವಿಭಾಗದಲ್ಲಿ ಪದವಿ ಪಡೆಯಲಿ ಎಂದು ಆಶಿಸಿದ್ದರು.

16 ಚಿನ್ನದ ಪದಕ ಬಾಚಿದ ರಾಯಚೂರಿನ ಬುಶ್ರಾ ಮತೀನ್​ಗೆ, ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಒತ್ತಾಸೆ
ಹಿಂದಿನ ದಾಖಲೆ ಮುರಿದು 16 ಚಿನ್ನದ ಪದಕ ಬಾಚಿದ ರಾಯಚೂರಿನ ಬುಶ್ರಾ ಮತೀನ್​ಗೆ, ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಒತ್ತಾಸೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 19, 2022 | 3:38 PM

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21 ನೇ ಘಟಿಕೋತ್ಸವದಲ್ಲಿ (Visvesvaraya Technological University) ರಾಯಚೂರಿನ ವಿದ್ಯಾರ್ಥಿನಿ 22 ವರ್ಷ ವಯಸ್ಸಿನ ಬುಶ್ರಾ ಮತೀನ್‌ (Bushra Mateen) ಸಿವಿಲ್ ಎಂಜಿನಿಯರಿಂಗ್ ಪದವಿ ವಿಭಾಗದಲ್ಲಿ 16 ಚಿನ್ನದ ಪದಕ ಗಳಿಕೆ ಮಾಡಿದ್ದಾರೆ. ಇದರೊಂದಿಗೆ ಹಿಂದಿನ ದಾಖಲೆ ಅಳಿಸಿ, ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಅತಿ ಹೆಚ್ಚು ಪದಕ ಪಡೆದ ಗೌರವಕ್ಕೆ ಬುಶ್ರಾ ಮತೀನ್ ಪಾತ್ರರಾಗಿದ್ದಾರೆ (SLN College of Engineering, Raichur).

ವಿವಿ ಇತಿಹಾಸದಲ್ಲಿ ಇದುವರೆಗೂ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳನ್ನು ಗಳಿಸಿದ್ದ ದಾಖಲೆ ಇತ್ತು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಇತ್ತೀಚೆಗೆ ಬುಶ್ರಾ ಮತೀನ್​​ಗೆ ಈ 16 ಚಿನ್ನದ ಪದಕಗಳನ್ನು ಪ್ರದಾನ ಮಾಡಿ, ಅಭಿನಂದಿಸಿದರು. ಬೆಂಗಳೂರು ಬಿ.ಎನ್.ಎಂ. ತಾಂತ್ರಿಕ ಸಂಸ್ಥೆಯ ಇ ಅಂಡ್ ಸಿ ವಿಭಾಗದ ಸ್ವಾತಿ ದಯಾನಂದ, ಕೆ.ಎಲ್.ಇ ಸಂಸ್ಥೆಯ ಶೇಷಗಿರಿ ಕಾಲೇಜಿನ ವಿದ್ಯಾರ್ಥಿ ಬೆಳಗಾವಿ ಮೂಲದ ವಿವೇಕ್ ಭದ್ರಕಾಳಿ, ಬಳ್ಳಾರಿಯ ಎಂ ಚಂದನಾ ತಲಾ 7 ಚಿನ್ನದ ಪದಕ ಪಡೆದಿದ್ದಾರೆ.

ಬುಶ್ರಾ ಮತೀನ್‌ 16 ಚಿನ್ನದ ಪದಕಗಳೊಂದಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಲು ಕ್ಯಾಂಪಸ್​ ಸೆಲೆಕ್ಷನ್​​ಗೆ ಮಣೆ ಹಾಕದೆ, ಐಎಎಸ್ ಗಾಗಿ​ ಯುಪಿಎಸ್​ಸಿ (UPSC exam) ಕದ ತಟ್ಟಲು ನಿಶ್ಚಯಿಸಿದ್ದಾರೆ. ಒಬ್ಬ ಸಿವಿಲ್ ಎಂಜಿನಿಯರ್​ ಆಗಿ ಸರ್ಕಾರದಲ್ಲಿ ಕೆಲಸ ಮಾಡೋಣ ಅಂತಿದ್ದೆ ಮೊದಲು. ಆದರೆ ನಂತರ ಯುಪಿಎಸ್​ಸಿ ಉತ್ತಮ ಆಯ್ಕೆ ಎಂಬುದು ಅರಿವಾಯಿತು. ಅದರಿಂದ ದೇಶ ಸೇವೆ ಮಾಡಲು ದೊಡ್ಡ ಅವಕಾಶ ಸಿಗಲಿದೆ. ಕಳೆದ ನವೆಂಬರ್ ತಿಂಗಳಲ್ಲಿಂದಲೇ ಐಎಎಸ್ ಗಾಗಿ ತಯಾರಿ ನಡೆಸಿದ್ದೇನೆ ಎಂದು ಅದಮ್ಯ ಆತ್ಮವಿಶ್ವಾಸದಿಂದ ಬೀಗುತ್ತಾ ಬುಶ್ರಾ ಮತೀನ್ ಹೇಳಿದರು.

ಅಂದಹಾಗೆ, ಬುಶ್ರಾ ಮತೀನ್ ಅವರ ತಂದೆ ಜೂನಿಯರ್ ಸಿವಿಲ್ ಎಂಜಿನಿಯರ್​, ಇನ್ನು ಹೆತ್ತಮ್ಮ ಪದವೀಧರರು. ಡಿಪ್ಲೊಮಾ ಎಂಜಿನಿಯರಿಂಗ್ ಮಾಡಿದ್ದ ಬುಶ್ರಾ ಮತೀನ್ ಅವರ ತಂದೆ ತಮ್ಮ ಮಗಳು ಅದೇ ವಿಭಾಗದಲ್ಲಿ ಪದವಿ ಪಡೆಯಲಿ ಎಂದು ಆಶಿಸಿದ್ದರು. ಮೊದಲು ಕಂಪ್ಯೂಟರ್​ ಎಂಜಿನಿಯರಿಂಗ್ ಮಾಡೋಣಾ ಅಂತಿದ್ದೆ. ಆದರೆ ಅಪ್ಪನ ಆಸೆಯಂತೆ ಮತ್ತು ನಾನು ತವರು ರಾಯಚೂರಿನಲ್ಲಿಯೆ ಇರಬೇಕು ಎಂಬ ಒತ್ತಾಸೆಯೊಂದಿಗೆ ಸಿವಿಲ್ ಎಂಜಿನಿಯರ್ ಆಗಲು ನಿರ್ಧರಿಸಿದ್ದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಎಂಬುದು ಎಷ್ಟು ಅತ್ಯವಶ್ಯ ಮತ್ತು ಅತ್ಯಮೂಲ್ಯ ಎಂದು ತಮ್ಮ ಸಾಹಸಗಾಥೆ ಮೂಲಕ ಇತರೆ ಹೆಣ್ಣುಮಕ್ಕಳಿಗೆ ಮಾರ್ಗದರ್ಶಕರಾಗಿದ್ದಾರೆ ಬುಶ್ರಾ ಮತೀನ್.