ರಾಯಚೂರು, ಮಾರ್ಚ್ 19: ವಾಟ್ಸಪ್ ಗ್ರೂಪ್ಗಳಲ್ಲಿ (WhatsApp) ಪೋಸ್ಟ್ ಮಾಡುವವರು ಈ ಸ್ಟೋರಿ ನೋಡಲೇ ಬೇಕು. ಅಪ್ಪಿ ತಪ್ಪಿಯೂ ಪೋಸ್ಟ್ಗಳಿಗೆ ವಿರೋಧ ವ್ಯಕ್ತಪಡಿಸಿದರೆ ಆಗೋದೇ ಬೇರೆ. ಅಷ್ಟಕ್ಕೂ ಅಲ್ಲೊಬ್ಬ ಯುವಕ (boy) ಹಾಕಿದ್ದ ವಿಡಿಯೋ ಪೋಸ್ಟ್ಗೆ ಹಾಸ್ಯಾಸ್ಪದ ಎಮೋಜಿ ಹಾಕಿದ್ದ. ಇದೇ ಕಾರಣಕ್ಕೆ ಈಗ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ರಾಯಚೂರು ನಗರದ ಹರಿಜನವಾಡದಲ್ಲಿ ಇದೇ ಮಾರ್ಚ್ 17 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವಾಟ್ಸಪ್ ಗ್ರೂಪ್ಗಳಲ್ಲಿನ ಪೋಸ್ಟ್ಗಳು ದೊಡ್ಡ ದೊಡ್ಡ ಮಾರಾಮಾರಿಗಳಿಗೆ ಕಾರಣವಾಗಿರುವುದು ಸಾಕಷ್ಟು ಪ್ರಕರಣಗಳು ನಡೆದಿವೆ. ವಾಟ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಲೇಬೇಕಾದ ಸ್ಥಿತಿ ಇದೆ. ಆದರೆ ಇಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋಗೆ ಎಮೋಜಿ ಹಾಕಿದ್ದಕ್ಕೆ ದೊಡ್ಡ ದಾಂಧಲೆ ನಡೆದು ಹೋಗಿದೆ. ಇಂಥ ಘಟನೆ ರಾಯಚೂರು ನಗರದ ಹರಿಜನವಾಡದಲ್ಲಿ ಇದೇ ಮಾರ್ಚ್ 17 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರಾಯಚೂರನ್ನೇ ಬೆಚ್ಚಿಬೀಳಿಸಿದ್ದ ಭೀಕರ ಕೊಲೆ: 31 ಬಾರಿ ಇರಿದು ಕೊಂದವರು ಸಿಕ್ಕಿಬಿದ್ದರು
ಮಹೇಶ್ ರೆಡ್ಡಿ ಅನ್ನೋ ವ್ಯಕ್ತಿ ಮಾರ್ಚ್ 17 ರಂದು ನಟ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಹಿನ್ನೆಲೆ ತನ್ನ ಸ್ನೇಹಿತರು, ಸ್ಥಳೀಯರ ಜೊತೆ ಸೇರಿ ಏರಿಯಾದಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದರು. ಕೇಕ್ ಕಟ್ಟಿಂಗ್ ಮಾಡಿ ಸಂಭ್ರಮಿಸಿರುವ ಫೋಟೊಗಳನ್ನ ಮಹೇಶ್ ರೆಡ್ಡಿ ವಾಟ್ಸಪ್ ಗ್ರೂಪ್ವೊಂದರಲ್ಲಿ ಹಾಕಿದ್ದ. ನಂತರ ಕೆಲ ಹೊತ್ತಲ್ಲೇ ಮಹೇಶ್ ರೆಡ್ಡಿ ಆಂಧ್ರ ಪ್ರದೇಶದ ವ್ಯಕ್ತಿಯೊಬ್ಬ ರಾಜಕೀಯದ ಬಗ್ಗೆ ಮಾತನಾಡಿರುವ 26 ಸೆಕೆಂಡ್ಗಳ ವಿಡಿಯೋವನ್ನ ಅದೇ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ್ದ. ಆಗಲೇ ಅಲ್ಲಿ ಕಿಡಿ ಹೊತ್ತಿಕೊಂಡಿತ್ತು. ನಂತರ ಕೆಲವೇ ಕ್ಷಣಗಳಲ್ಲಿ ಅಲ್ಲಿ ಅಲ್ಲೊಂದು ಗ್ಯಾಂಗ್ ಅಟ್ಟಹಾಸ ಮೆರೆದಿತ್ತು.
ಹೌದು! 26 ಸೆಕೆಂಡ್ಗಳ ರಾಜಕೀಯ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಹೇಶ್ ರೆಡ್ಡಿ, ನಾನು ಕೂಡ ಸ್ಥಳೀಯ ರಾಜಕೀಯ ನಾಯಕ, ನಾನು ಕೂಡ ಆಕಾಂಕ್ಷಿ ಅನ್ನೋ ಸಂದೇಶವನ್ನ ಕೊಟ್ಟಿದ್ದನಂತೆ. ಮಹೇಶ್ ಪೋಸ್ಟ್ ಮಾಡಿದ್ದ ವಿಡಿಯೋಗೆ ರಾಯಚೂರು ನಗರದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ತಿಮ್ಮಾರೆಡ್ಡಿ ಪುತ್ರ ಸಂತೋಷ್ ರೆಡ್ಡಿ ಹಾಸ್ಯಾಸ್ಪದ ಎಮೋಜಿ ಹಾಕಿ ಟ್ಯಾಗ್ ಮಾಡಿದ್ದನಂತೆ. ಇದನ್ನ ನೋಡಿ ಮಹೇಶ್ ಸಂತೋಷ್ಗೆ ಕರೆ ಮಾಡಿ ಹಾಸ್ಯಾಸ್ಪದ ಎಮೋಜಿ ಡಿಲೀಟ್ ಮಾಡು ಎಂದಿದ್ದನಂತೆ. ಆಗ ಮಹೇಶ್ ರೆಡ್ಡಿ ಹಾಗೂ ಸಂತೋಷ್ ರೆಡ್ಡಿ ನಡುವೆ ವಾಗ್ವಾದವಾಗಿದೆ.
ಇದನ್ನೂ ಓದಿ: ರಾಯಚೂರಿನಲ್ಲಿ ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಮೂವರು ದುರ್ಮರಣ
ಈ ವೇಳೆ ಸಂತೋಷ್ ತಂದೆ ಹಾಗೂ ಜೆಡಿಎಸ್ ಮುಖಂಡ ತಿಮ್ಮಾರೆಡ್ಡಿ ಕೂಡ ಮಹೇಶ್ಗೆ ಆವಾಜ್ ಹಾಕಿದ್ದಾರಂತೆ. ಇದಾದ ಕೆಲ ಹೊತ್ತಲ್ಲೇ ಸಂತೋಷ್ ರೆಡ್ಡಿ ಹಾಗೂ ಆತನ ಬೆಂಬಲಿಗರ 20ಕ್ಕೂ ಹೆಚ್ಚಿನ ಯುವಕರಿದ್ದ ಗ್ಯಾಂಗ್, ಮಹೇಶ್ ಮನೆಗೆ ನುಗ್ಗಿದ್ದಾರಂತೆ. ಮನೆಯಲ್ಲಿದ್ದ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿ ದಾಂಧಲೆ ಮಾಡಿದ್ದಾರಂತೆ. ಅಲ್ಲದೇ ಮಹೇಶ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರಂತೆ. ಈ ವೇಳೆ ತನ್ನ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ ಅಂತ ಮಹೇಶ್ ಮಾರ್ಕೆಟ್ ಯಾರ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ದೂರುದಾರ ಮಹೇಶ್ ಹಾಗೂ ಆತನ ಕಡೆಯವರು ಹಿರಿಯ ಪೊಲೀಸ್ ಅಧಿಕಾರಿಗಳನ್ನ ಭೇಟಿ ಮಾಡಿ ನ್ಯಾಯ ಕೊಡಿಸಿ ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಜೆಡಿಎಸ್ ಮುಖಂಡ ತಿಮ್ಮಾರೆಡ್ಡಿ, ಆತನ ಪುತ್ರ ಸಂತೋಷ್ ರೆಡ್ಡಿ ಸೇರಿ 10ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.