ರಾಯಚೂರಿನಲ್ಲಿ ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಮೂವರು ದುರ್ಮರಣ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು ಕ್ಯಾಂಪ್ ಬಳಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಂಧನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಯಚೂರು, ಮಾರ್ಚ್ 03: ಎರಡು ಬೈಕ್ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಮೂವರು ದುರ್ಮರಣ (accident) ಹೊಂದಿರುವಂತಹ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು ಕ್ಯಾಂಪ್ ಬಳಿ ನಡೆದಿದೆ. ಶಿವಪ್ಪ ಹುಸೇನಪ್ಪ(37), ಮೌನೇಶ್ ಮಹಾದೇವ(20) ಮತ್ತು ಹನುಮೇಶ(24) ಮೃತ ದುರ್ದೈವಿಗಳು. ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸಿಂಧನೂರು ಗ್ರಾಮೀಣ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಶಿವಪ್ಪ ತನ್ನ ಬೈಕ್‌ನಲ್ಲಿ ಸಿಂಧನೂರಿನಿಂದ ಬಸ್ಸಾಪುರ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಇನ್ನೊಂದು ಬೈಕ್‌ನಲ್ಲಿ ಮಸ್ಕಿಯಿಂದ ಮೌನೇಶ್, ಹನುಮೇಶ್ ಬರುತ್ತಿದ್ದರು. ಮಾರ್ಗ ಮಧ್ಯೆ ಮುಳ್ಳೂರು ಕ್ಯಾಂಪ್ ಬಳಿ ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಸಾವು
ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಸಾವನ್ನಪ್ಪಿರುವಂತಹ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೊಮ್ಮನಜೋಗಿ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ ಪೂಜಾರಿ (37) ಮೃತ ಯೋಧ. ಅನಾರೋಗ್ಯದ ಕಾರಣ ರಜೆ ಮೇಲೆ ಸ್ವಗ್ರಾಮಕ್ಕೆ ಮಲ್ಲಿಕಾರ್ಜುನ ಆಗಮಿಸಿದ್ದರು.
ಇದನ್ನೂ ಓದಿ: ಹೊಸ ಹೈವೇನಲ್ಲಿ ನಾಲ್ವರು ಬಲಿ: ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು
ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಫಲಕಾರಿಯಾಗದೆ ಯೋಧ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮೂವರು ಮಕ್ಕಳು, ತಂದೆ ತಾಯಿ ಹಾಗೂ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ. ಗ್ರಾಮದಲ್ಲಿ ಯೋಧನ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಗಿದೆ. ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.
ಕರುವಿನ ಮೇಲೆ ಹರಿದ ಪ್ರವಾಸಿಗರ ಕಾರು
ಮಡಿಕೇರಿ ನಗರದ ಎಲ್ಐಸಿ ಕಚೇರಿ ಬಳಿ ಕರುವಿನ ಮೇಲೆ ಪ್ರವಾಸಿಗ ಕಾರು ಹರಿಸಿರುವಂತಹ ಘಟನೆ ನಡೆದಿದೆ. ಕಾರಿನಡಿ ಸಿಲುಕಿ ನರಳಾಡಿದ ಪುಟ್ಟ ಕರುವನ್ನು ಗೂಡ್ಸ್ ಆಟೋ ಚಾಲಕರು ರಕ್ಷಿಸಿದ್ದಾರೆ. ಗಾಯಗೊಂಡ ಕರುವಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



