ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಆಗಮನ; ಹೊಸ ಭರವಸೆಯೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿರುವ ರೈತರು

ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಆಗಮನ; ಹೊಸ ಭರವಸೆಯೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿರುವ ರೈತರು
ಹೊಸ ಭರವಸೆಯೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿರುವ ರೈತರು

ಕಳೆದ ಕೆಲವು ದಿನಗಳ ಹಿಂದೆಯೇ ಉತ್ತಮ ಮಳೆ ಆಗಿದ್ದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿ ಇಟ್ಟುಕೊಂಡಿದ್ದೇವು. ಒಂದು ಮೂಟೆ ಗೊಬ್ಬರಕ್ಕೆ 800 ರಿಂದ 900 ರೂಪಾಯಿ ಕೊಟ್ಟು ಖರೀದಿ ಮಾಡಿ, ಬಿತ್ತನೆ ಕಾರ್ಯದಲ್ಲಿ ತೊಡಗಿದ್ದೇವೆ. ಸರ್ಕಾರ ಇನ್ನಾದರೂ ನಮಗೆ ಅಗತ್ಯ ಸೇವೆ ಒದಗಿಸಲಿ ಎಂದು ರೈತ ಶಂಕರಗೌಡ ಕರೇಗೌಡರ್ ಮನವಿ ಮಾಡಿಕೊಂಡಿದ್ದಾರೆ.

TV9kannada Web Team

| Edited By: preethi shettigar

Jun 11, 2021 | 12:16 PM

ಹಾವೇರಿ: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಹತೋಟಿಗೆ ತರಲು ಸರ್ಕಾರ ಲಾಕ್​ಡೌನ್ ಜಾರಿಗೆ ತಂದಿದೆ. ಅದರಂತೆ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ ಲಾಕ್​ಡೌನ್​ನಿಂದಾಗಿ ದಿನಗೂಲಿಕಾರರು, ವ್ಯಾಪಾರಿಗಳು ಮತ್ತು ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹದ್ದೇ ಪರಿಸ್ಥಿತಿ ಸದ್ಯ ಹಾವೇರಿ ಜಿಲ್ಲೆಯಲ್ಲಿ ಉಂಟಾಗಿದ್ದು, ಈ ಭಾಗದ ರೈತರಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ. ತರಕಾರಿ ಮತ್ತು ಹೂವುಗಳನ್ನು ಬೆಳೆದ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಆದರೆ ಕೊರೊನಾ ಸಂಕಷ್ಟದ ನಡುವೆ ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಹಲವೆಡೆ ಸುರಿದ ಮಳೆ ರೈತರ ಮೊಗದಲ್ಲಿ ಹೊಸ ಭರವಸೆ ಮೂಡಿಸಿದೆ. ಜತೆಗೆ ಮತ್ತೆ ಕೃಷಿ ಕಾರ್ಯದಲ್ಲಿ ನಿರತರಾಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಹಸಿಮೆಣಸಿನಕಾಯಿ, ಬದನೆಕಾಯಿ, ಟೊಮೆಟೋ, ಕ್ಯಾಬೇಜ್, ಸೇವಂತಿ ಹೂವು ಬೆಳೆದ ರೈತರು ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಅಕ್ಷರಶಃ ಕಂಗಾಲಾಗಿದ್ದಾರೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಸುರಿದ ಹದಮಳೆ ಕೊರೊನಾ ಕರಿನೆರಳಿನ‌ ನಡುವೆಯೂ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ರೈತರು ಶೇಂಗಾ, ಸೋಯಾಬಿನ್, ಹತ್ತಿ, ಮೆಕ್ಕೆಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಕೊರೊನಾದಿಂದ ಸಾಕಷ್ಟು ಹಾನಿ ಅನುಭವಿಸಿದ್ದರೂ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂದು ಎಲ್ಲ ನೋವು ಮರೆತು ಹೊಸ ಭರವಸೆಯೊಂದಿಗೆ ಬಿತ್ತನೆ ಕಾರ್ಯದಲ್ಲಿ ಮತ್ತೆ ತೊಡಗಿದ್ದಾರೆ‌.

ಕಳೆದ ಕೆಲವು ದಿನಗಳ ಹಿಂದೆಯೇ ಉತ್ತಮ ಮಳೆ ಆಗಿದ್ದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿ ಇಟ್ಟುಕೊಂಡಿದ್ದೇವು. ಒಂದು ಮೂಟೆ ಗೊಬ್ಬರಕ್ಕೆ 800 ರಿಂದ 900 ರೂಪಾಯಿ ಕೊಟ್ಟು ಖರೀದಿ ಮಾಡಿ, ಬಿತ್ತನೆ ಕಾರ್ಯದಲ್ಲಿ ತೊಡಗಿದ್ದೇವೆ. ಸರ್ಕಾರ ಇನ್ನಾದರೂ ನಮಗೆ ಅಗತ್ಯ ಸೇವೆ ಒದಗಿಸಲಿ ಎಂದು ರೈತ ಶಂಕರಗೌಡ ಕರೇಗೌಡರ್ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಬಿತ್ತನೆ ಬೀಜ ಕೊಂಡುಕೊಳ್ಳದ ರೈತರ ಪಾಲಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ರಸಗೊಬ್ಬರದ ಬೆಲೆ ಕಡಿಮೆ ಮಾಡಿದೆ. ಆದರೆ ಬೆಲೆ ಕಡಿಮೆ ಇದ್ದರು ಸಮರ್ಪಕ ಗೊಬ್ಬರ ಸಿಗುತ್ತಿಲ್ಲ ಎಂದು ರೈತ ಕಲ್ಮೇಶ ಹರವಿ ಬೇಸರ ವ್ಯಕ್ತಪಡಿಸಿದ್ದಾರೆ. ಒಂದೆಡೆ ಕೊರೊನಾದಿಂದಾಗಿ ರೈತರು ಪದೇ ಪದೇ ಬೆಲೆ ಸಿಗದೆ ತೊಂದರೆಗೆ ಒಳಗಾಗುತ್ತಿದ್ದಾರೆ. ಮತ್ತೊಂದೆಡೆ ಏನೇ ಆದರೂ ಕೃಷಿಯನ್ನೆ ನಂಬಿರುವ ರೈತರು ಬಂದಿದ್ದು ಬರಲಿ ಎಂದು ಕೃಷಿ ಕೆಲಸದಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಕೆಲವು ಕಡೆಗಳಲ್ಲಿ ಬಿತ್ತನೆಗೆ ಅಗತ್ಯವಿರುವಷ್ಟು ಮಳೆ ಆಗದೆ ಇರುವುದರಿಂದ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸಿಟ್ಟುಕೊಂಡು, ಭೂಮಿ ಸಜ್ಜುಗೊಳಿಸಿಕೊಂಡು ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಮೊದಲ ಮತ್ತು ಎರಡನೆ ಅಲೆ ರೈತರಿಗೆ ಸಾಕಷ್ಟು ಹಾನಿ ಮಾಡಿದೆ. ಬೆಳೆದ ಬೆಳೆಗೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇನ್ನಾದರೂ ರೈತರ ಕಷ್ಟ ದೂರವಾಗಿ ಬೆಳೆದ ಬೆಳೆಗೆ ಉತ್ತಮ ಫಸಲು ಸಿಗುವಂತಾಗಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ:

Rain Effect: ತೇಲಿ ಹೋಯ್ತು ಸೋಯಾಬೀನ್ ಬೆಳೆ; ಧಾರವಾಡದಲ್ಲಿ ಸುರಿದ ಮಳೆಗೆ ರೈತರು ಕಂಗಾಲು

ಹಡಿಲು ಭೂಮಿ ಕೃಷಿ ಪ್ರಕ್ರಿಯೆ ಉಡುಪಿಯಲ್ಲಿ ಮತ್ತೆ ಆರಂಭ; 2000 ಎಕರೆಯಲ್ಲಿ ಭತ್ತ ಭಿತ್ತನೆಗೆ ಸಿದ್ಧತೆ

Follow us on

Related Stories

Most Read Stories

Click on your DTH Provider to Add TV9 Kannada