ರಂಜಾನ್: ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉರ್ದು ಶಾಲಾ ವೇಳಾಪಟ್ಟಿ ಬದಲಿಸಿದ ಸರ್ಕಾರ
ಮುಸ್ಲಿಮರ ಹಬ್ಬವಾದ ರಂಜಾನ್ ಸಂದರ್ಭದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಉರ್ದು ಶಾಲೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಮತ್ತೊಂದೆಡೆ, ಇತರ ಸರ್ಕಾರಿ ಅನುದಾನ ಮತ್ತು ಅನುದಾನ ರಹಿತ ಶಾಲೆಯಲ್ಲಿನ ಮುಸ್ಲಿಂ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಸಂಜೆ ಬೇಗನೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.
ಬೆಂಗಳೂರು, ಮಾರ್ಚ್ 8: ರಂಜಾನ್ (Ramadan 2024) ಆಚರಣೆಗಾಗಿ ಅಲ್ಪಸಂಖ್ಯಾತ ಶಾಲಾ ಮಕ್ಕಳ (Minority Students Timetable) ವೇಳಾಪಟ್ಟಿ ಸಡಿಲಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಂಜಾನ್ ಆರಂಭ ದಿನದಿಂದ 1 ತಿಂಗಳವರಗೆ ಉರ್ದು ಶಾಲಾ ಅವಧಿಯಲ್ಲಿ ತುಸು ಬದಲಾವಣೆ ಮಾಡಲಾಗಿದೆ. ರಂಜಾನ್ ತಿಂಗಳ ಆರಂಭದಿಂದ ಏಪ್ರಿಲ್ 10 2024 ರವೆಗೆ ಉರ್ದು ಶಾಲೆಗಳ (Urdu Schools) ಸಮಯ ಬದಲಾವಣೆ ಮಾಡಲಾಗಿದೆ. ಜತೆಗೆ, ಇತರ ಸರ್ಕಾರಿ ಅನುದಾನ ಮತ್ತು ಅನುದಾನ ರಹಿತ ಶಾಲೆಯಲ್ಲಿನ ಮುಸ್ಲಿಂ ವಿದ್ಯಾರ್ಥಿ (Muslim Students) ಮತ್ತು ಸಿಬ್ಬಂದಿಗೆ ಸಂಜೆ ಅರ್ಧಗಂಟೆ ಮುಂಚಿತವಾಗಿ ತೆರಳಲು ಅನುಮತಿ ನೀಡಲಾಗಿದೆ.
ಉರ್ದು ಶಾಲೆಯ ವೇಳಾಪಟ್ಟಿ ಬದಲಾಯಿಸಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ರಂಜಾನ್ ತಿಂಗಳಲ್ಲಿ ಉರ್ದು ಶಾಲೆಗಳಿಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12-45 ದರ ವೆರೆಗೆ ಸಮಯ ನಿಗದಿ ಮಾಡಲಾಗಿದೆ. ಜತೆಗೆ, ರಂಜಾನ್ ತಿಂಗಳಲ್ಲಿ ಕಡಿತಗೊಳ್ಳುವ ಶಾಲಾ ಸಮಯವನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕೆಲ ಮುಸ್ಲಿಂ ಶಾಸಕರು ರಂಜಾನ್ ತಿಂಗಳಲ್ಲಿ ಉರ್ದು ಶಾಲೆಯ ಸಮಯ ಬದಲಾವಣೆಗೆ ಮನವಿ ಮಾಡಿದ್ದರು. ಹೀಗಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಉರ್ದು ಶಾಲೆಗಳ ಸಮಯ ಬದಲಾಯಿಸಿ ಆದೇಶ ಹೊರಡಿಸಲಾಗಿದೆ.
ಎಲ್ಲಾ ಶಾಲೆಗಳಿಗೂ ಅನ್ವಯವಾಗಲಿದೆಯೇ?
ಶಾಲಾ ಶಿಕ್ಷಣ ಇಲಾಖೆ ಆದೇಶದ ಪ್ರಕಾರ, ಈ ವೇಳಾಪಟ್ಟಿ ಬದಲಾವಣೆ ಸದ್ಯ ಉರ್ದು ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಆದರೆ, ಇತರ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಸಾಯಂಕಾಲ ಬೇಗನೇ ತೆರಳಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: 5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ!
ಇತ್ತೀಚೆಗೆ ವಸತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ದ್ವಾರದಲ್ಲಿ ಪ್ರಕಟಿಸಲಾಗಿದ್ದ ಕುವೆಂಪು ಅವರ ಕವಿತೆಯ ಘೋಷವಾಕ್ಯ ಬದಲಾವಣೆ ಮಾಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ ಇದು ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು. ನಿರ್ಧಾರ ವಿವಾದ ಕೀಡಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ವಸತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ದ್ವಾರದ ಘೋಷವಾಕ್ಯ ಬದಲಾವಣೆ ನಿರ್ಧಾರವನ್ನು ಕೈಬಿಟ್ಟಿತ್ತು. ಎಲ್ಲೆಲ್ಲಿ ಬದಲಾವಣೆ ಮಾಡಲಾಗಿದೆಯೋ ಅಲ್ಲಿ ಮೊದಲಿನಂತೆಯೇ ಘೋಷವಾಕ್ಯ ಅಳವಡಿಸಲು ಸೂಚನೆ ನೀಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Fri, 8 March 24