Bengaluru-Mysore Expressway: ವಾಹನಗಳ ವೇಗಕ್ಕೆ ಬ್ರೇಕ್: ನಿಯಮ ಮುರಿದರೆ ದಂಡ ಅಷ್ಟೇ ಅಲ್ಲ, ಡ್ರೈವಿಂಗ್ ಲೈಸೆನ್ಸ್ ರದ್ದು
ಕಳೆದ ಕೆಲ ದಿನಗಳಲ್ಲಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಗಾಗಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು ರಾಮನಗರ ಪೊಲೀಸರು ಮುಂದಾಗಿದ್ದಾರೆ. ವೇಗದ ಮಿತಿ ಮೀರಿದರೆ ದಂಡ ಅಷ್ಟೇ ಅಲ್ಲ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಮನಗರ: ಕಳೆದ ಕೆಲ ದಿನಗಳಲ್ಲಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru highway) ಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಗಾಗಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು ರಾಮನಗರ ಪೊಲೀಸರು ಮುಂದಾಗಿದ್ದಾರೆ. ರಾಮನಗರದ ಚನ್ನಪಟ್ಟಣ ಬಳಿ ಇಂಟರ್ ಸೆಪ್ಟರ್ ಅಳವಡಿಸಿ ಟ್ರಾಫಿಕ್ ಪೊಲೀಸರು ಸ್ಪೀಡ್ ಚೆಕ್ ಮಾಡುತ್ತಿದ್ದು, ವೇಗದ ಲಿಮಿಟ್ ಕ್ರಾಸ್ ಮಾಡಿದ ವಾಹನ ಸವಾರರಿಗೆ 1000 ರೂ. ದಂಡ ಹಾಕುತ್ತಿದ್ದಾರೆ. ಈ ಮಧ್ಯೆ ಸಾರಿಗೆ ಹಾಗೂ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿ ವೀಕ್ಷಣೆ ಮಾಡಿದ್ದು, ರೂಲ್ಸ್ ಬ್ರೇಕ್ ಮಾಡಿದರೆ ದಂಡ ಅಷ್ಟೇ ಅಲ್ಲ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದಿದ್ದಾರೆ.
ಹೆದ್ದಾರಿಯಲ್ಲಿ ನಿಮ್ಮ ವೇಗದ ಮಿತಿ ಮೇಲೆ 28 ANPR ಕ್ಯಾಮರಾಗಳು ಕಣ್ಣಿಡಲಿವೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವಾಗ ವೇಗದ ಮಿತಿ, ಲೈನ್ ಟ್ರ್ಯಾಕ್, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಕಡ್ಡಾಯ. ರಾಮನಗರ ಜಿಲ್ಲಾ ವ್ಯಾಪ್ತಿಯ ಅತೀ ಹೆಚ್ಚು ಅಪಘಾತ ಸ್ಥಳಗಳಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ವಾಹನಗಳ ವೇಗಕ್ಕೆ ಬ್ರೇಕ್: ವೇಗ ಮೀತಿ ಮೀರಿದ 44 ವಾಹನಗಳ ಮೇಲೆ ಕೇಸ್ ಬುಕ್
ಹೆದ್ದಾರಿ ಮೇಲೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು, ಕಾರ್ ವೇಗದ ಮಿತಿ 100, ಬೈಕ್ ವೇಗದ ಮಿತಿ 80 ಹಾಗೂ ಟ್ರಕ್, ಲಾರಿ ಬಸ್ಸಿನ ಮಿತಿ 60 ನಿಗದಿ ಮಾಡಲಾಗಿದೆ. ಕಾರು 101 ವೇಗದಲ್ಲಿ ಹೋದರೂ 1000 ರೂ. ದಂಡ ಹಾಕಲಾಗುತ್ತಿದೆ.
ಪೊಲೀಸರ ಕ್ರಮಕ್ಕೆ ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದು, ಒಂದು ಕಡೆ ಟೋಲ್ ಕಟ್ಟಬೇಕು, ಈಗ ಫೈನ್ ಕಟ್ಟಬೇಕು. ಏನ್ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ ಚಾಲಕರು.
ಇದು ಹೆದ್ದಾರಿ, ರೇಸಿಂಗ್ ಟ್ರ್ಯಾಕ್ ಅಲ್ಲ: ಸಂಸದ ಪ್ರತಾಪ್ ಸಿಂಹ ಪುನರುಚ್ಚಾರ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಹೆಚ್ಚಿದ ಅಪಘಾತಗಳ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದು, ಇದು ಹೆದ್ದಾರಿ, ರೇಸಿಂಗ್ ಟ್ರ್ಯಾಕ್ ಅಲ್ಲ. ಹೇಗೇಗೋ ಡ್ರೈವ್ ಮಾಡಬೇಡಿ. ನಿಮ್ಮ ಕಾರಿನ ಸ್ಪೀಡ್ ಲಿಮಿಟ್ ನೋಡಿಕೊಂಡು ಡ್ರೈವ್ ಮಾಡಿ ಎಂದು ಪುನರುಚ್ಚಾರ ಮಾಡಿದ್ದಾರೆ.
ರೋಡ್ ಚೆನ್ನಾಗಿದೆ ಅಂತ ರೇಸ್ ಮಾಡಬೇಡಿ. ಓವರ್ ಸ್ಪೀಡ್‌ನಿಂದ ಅಪಘಾತ ಆಗುತ್ತಿದೆ. ಕಿಯಾ, ನಿಸ್ಸಾನ್ ಕಾರುಗಳಲ್ಲಿ ಬರೀ ಪ್ಲ್ಯಾಸ್ಟಿಕ್ ಇದೆ. ಯದ್ವಾತದ್ವಾ ಸ್ಪೀಡ್‌ನಲ್ಲಿ ಹೋದರೆ ಆಕ್ಸಿಡೆಂಟ್ ಆಗದೆ ಇರುತ್ತಾ ಎಂದು ಪ್ರಶ್ನೆ ಮಾಡಿದರು.
ವಿಶೇಷವಾಗಿ ಮಾರುತಿ ವ್ಯಾನ್ ಡಬ್ಬದವರು ನೋಡಿಕೊಂಡು ಹೋಗಿ. ಗೂಡ್ಸ್ ಗಾಡಿಯವರು ಸೈಡ್‌ನಲ್ಲಿ ಹೋಗಿ. ಮಧ್ಯ ರೋಡ್‌ನಲ್ಲಿ ಹೋಗಿತ್ತಿದ್ದೀರಿ. ಹಿಂದಿನ ಗಾಡಿ ಬಂದು ಹೊಡೆದರೆ ಉಳೀತೀರಾ ಎಂದರು. ರಸ್ತೆ ವಿಭಜಕ ಎತ್ತರಿಸುವುದು, ಸ್ಪೀಡ್ ಲಿಮಿಟ್, ಆ್ಯಂಬುಲೆನ್ಸ್ ಸೇವೆ ಎಲ್ಲವನ್ನೂ 6 ತಿಂಗಳ ಒಳಗೆ ಮಾಡುತ್ತೇವೆ ಅಲ್ಲಿವರೆಗೂ ನಮಗೆ ಸಹಕಾರ ಕೊಡಿ ಎಂದು ಹೇಳಿದ್ದಾರೆ.
ಕೆಲ ವಾಹನ ಸವಾರರು ಹೈವೇಗೆ ಇಳಿಯುತ್ತಿದ್ದಂತೆ ಮೈ ಮೇಲೆ ಏನೋ ಬಂದವರಂತೆ ವಾಹನ ಚಲಾಯಿಸುತ್ತಾರೆ. ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಅಪಘಾತ ಆಗುತ್ತಿವೆ ಎಂದು ದೂರುತ್ತಾರೆ. ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೈವೆಯಲ್ಲಿ ಮನಬಂದಂತೆ ವಾಹನ ಚಲಾಯಿಸುವ ಬದಲು, ವಾಹನದ ವೇಗದ ಮಿತಿಗೆ ತಕ್ಕಂತೆ ವಾಹನ ಚಲಾಯಿಸಿದರೆ ಅಪಘಾತ ಉಂಟಾಗುವುದಿಲ್ಲ.
ಇದರ ನಡುವೆಯೂ ಹೈವೇಯಲ್ಲಿ ಏನಾದರೂ ಸಣ್ಣಪುಟ್ಟ ದೋಷಗಳಿದ್ದರೂ ಅದನ್ನು ಮುಂದಿನ 15 ದಿನದಲ್ಲಿ ಸರಿಪಡಿಸುತ್ತೇವೆ. ಮುಂದಿನ ಆರು ತಿಂಗಳೊಳಗೆ ಯಾವುದೇ ಸಮಸ್ಯೆಗಳು ಇಲ್ಲದಂತೆ ಹೈವೆಯನ್ನು ಸುಸಜ್ಜಿತಗೊಳಿಸುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Wed, 5 July 23