ಬಿಡದಿ ಟೌನ್‌ಶಿಪ್‌ ವಿರೋಧಿಸಿ ಪ್ರತಿಭಟನೆ: ವಿಪಕ್ಷಗಳಿಗೆ ಡಿಕೆ ಶಿವಕುಮಾರ್ ಮೆಗಾ ಕೌಂಟರ್

ಬಿಡದಿ ಟೌನ್​ಶಿಪ್ ಸಮರ ತಾರಕಕ್ಕೇರಿದೆ. ಯೋಜನೆ ವಿರೋಧಿಸಿ ಇಂದು ಜೆಡಿಎಸ್​​ ಪಾದಯಾತ್ರೆ ನಡೆಸಿದೆ. ಹೀಗಿರುವಾಗ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್​​ ವಿಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಕೌಂಟರ್​​ ನೀಡಿದ್ದಾರೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಟೌನ್​​ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದೆ. ಈ ಯೋಜನೆಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ ಎಂದಿದ್ದಾರೆ.

ಬಿಡದಿ ಟೌನ್‌ಶಿಪ್‌ ವಿರೋಧಿಸಿ ಪ್ರತಿಭಟನೆ: ವಿಪಕ್ಷಗಳಿಗೆ ಡಿಕೆ ಶಿವಕುಮಾರ್ ಮೆಗಾ ಕೌಂಟರ್
ಡಿಕೆ ಶಿವಕುಮಾರ್​
Image Credit source: tv9 kannada

Updated on: Aug 09, 2026 | 3:13 PM

ಮುಖ್ಯಾಂಶಗಳು

  • ಬಿಡದಿ ಟೌನ್‌ಶಿಪ್‌ ಯೋಜನೆಗೆ ಮರುಜೀವ ಎಂದ ಸಿಎಂ
  • ಮೆಟ್ರೋ, ಕ್ರೀಡಾಂಗಣ, ವಸತಿ ಒಳಗೊಂಡ ಎಐ ಸಿಟಿ
  • ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನ

ಬೆಂಗಳೂರು, ಆಗಸ್ಟ್​​​ 09: ‘ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ (Bidadi Township Project) ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar)​ ಮಾಹಿತಿ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ: ಸಿಎಂ 

ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್​​, ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ’ ಎಂದು ಹೇಳಿದ್ದಾರೆ.

ಸಿಎಂ ಡಿಕೆ ಶಿವಕುಮಾರ್​​ ಟ್ವೀಟ್ 


‘ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ 25 ಲಕ್ಷ ರೂ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ’ ಎಂದಿದ್ದಾರೆ.

ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ

ಇನ್ನು ‘ಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಬಿಡದಿ ಟೌನ್ ಶಿಪ್ (ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ) ಯೋಜನೆ ವಿಚಾರವಾಗಿ ವ್ಯಕ್ತವಾಗುತ್ತಿರುವ ವಿಭಿನ್ನ ಅಭಿಪ್ರಾಯಗಳನ್ನು ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚಿಸಲು ನಮ್ಮ ಸರ್ಕಾರ ಆದೇಶಿಸಿದೆ’ ಎಂದು ಸಿಎಂ ತಿಳಿಸಿದ್ದಾರೆ.

‘ಈ ಸಮಿತಿಯಲ್ಲಿ ನಿವೃತ್ತ ಮುಖ್ಯಕಾರ್ಯದರ್ಶಿಗಳಾದ ಎಸ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಸದಸ್ಯರಾಗಿದ್ದಾರೆ. ಈ ಸಮಿತಿಯು 30 ದಿನಗಳಲ್ಲಿ ವರದಿ ಸಲ್ಲಿಸಲಿದೆ. ಸಮಿತಿಯು ಸದರಿ ಯೋಜನೆಯನ್ನು ಕಾನೂನಾತ್ಮಕ, ಮಾನವೀಯತೆ ಹಾಗೂ ಸಮಗ್ರ ಅಭಿವೃದ್ಧಿಯ ಚೌಕಟ್ಟಿನಲ್ಲಿ ವಿಶ್ಲೇಷಣೆಗೊಳಪಡಿಸಿ ತನ್ನ ಶಿಫಾರಸ್ಸನ್ನು ನೀಡಲಿದೆ.’

ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್​​ ಪಾದಯಾತ್ರೆಗೆ ಚಾಲನೆ: ಯಾರೆಲ್ಲ ಭಾಗಿ?

‘ಯೋಜನೆಯನ್ನು ಜನಸ್ನೇಹಿಯಾಗಿ ಜಾರಿಗೊಳಿಸಲು ಸಾರ್ವಜನಿಕರ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಾಗಿ ನಮ್ಮ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಜನರ ಆಶೋತ್ತರಗಳನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಮತ್ತಷ್ಟು ಉತ್ತಮವಾಗಿ ರೂಪಿಸುವುದು ನಮ್ಮ ಸರ್ಕಾರದ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ನಾವು ಸಮಿತಿಯನ್ನು ರಚಿಸಿದ್ದೇವೆ’ ಎಂದಿದ್ದಾರೆ.

CM DK Shivakumar Bidadi Township: ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us