ಕಾವೇರಿ‌ ಹೋರಾಟಕ್ಕಿಳಿದ ಪ್ರತಿಭಟನಾಕಾರರಿಗೆ ಶಾಕ್: ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ವಿರುದ್ಧ ಎಫ್​ಐಆರ್

FIR Against Cauvery Protestors; ಕಾವೇರಿ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ನಡೆ ಖಂಡಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟಿಸಲಾಗಿತ್ತು. ಇದೇ ವೇಳೆ, ಪ್ರಚೋದನಕಾರಿ ಭಾಷಣ ಮಾಡಿ ವೈಷ್ಯಮ್ಯ ಹುಟ್ಟುಹಾಕಿದ್ದಾರೆ ಎಂಬ ಆರೋಪದಡಿ ಕಸ್ತೂರಿ ಕರ್ನಾಟಕ‌ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾವೇರಿ‌ ಹೋರಾಟಕ್ಕಿಳಿದ ಪ್ರತಿಭಟನಾಕಾರರಿಗೆ ಶಾಕ್: ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ವಿರುದ್ಧ ಎಫ್​ಐಆರ್
ಕಾವೇರಿ ನೀರು ಬಿಡುಗಡೆ ವಿರೋಧಿಸಿ ರಾಮನಗರದಲ್ಲಿ ಪ್ರತಿಭಟನೆ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: Ganapathi Sharma

Updated on: Sep 27, 2023 | 6:15 PM

ರಾಮನಗರ, ಸೆಪ್ಟೆಂಬರ್ 27: ಕಾವೇರಿ‌ ಹೋರಾಟಕ್ಕಿಳಿದ (Cauvery Dispute) ಪ್ರತಿಭಟನಾಕಾರರಿಗೆ ಸರ್ಕಾರ ಶಾಕ್ ನೀಡಿದೆ. ಕಾವೇರಿ ಹೋರಾಟ ಪ್ರತಿಭಟನೆ ಹಮ್ಮಿಕೊಂಡವರ ವಿರುದ್ಧ ದೂರು ದಾಖಲು ಮಾಡಲಾಗುತ್ತಿದ್ದು, ಕಸ್ತೂರಿ ಕರ್ನಾಟಕ‌ಜನಪರ ವೇದಿಕೆ (Kasturi Karnataka Janapara Vedike) ರಾಜ್ಯಾಧ್ಯಕ್ಷ ರಮೇಶ್ ಗೌಡ ವಿರುದ್ಧ ಎಫ್​ಐಆರ್​​ ದಾಖಲಿಸಲಾಗಿದೆ. ಸಾರ್ವಜನಿಕ ಓಡಾಟಕ್ಕೆ ಅಡ್ಡಿ ಹಾಗೂ ಎರಡು ಭಾಷಿಕರ‌ ನಡುವೆ ದ್ವೇಷ ಉಂಟು ಮಾಡುವ ಆರೋಪದ‌ಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಜೂರು ಪೊಲೀಸರು ಸ್ವಯಂಪ್ರೇರಿತರಾಗಿ ಕ್ರಮ ಕೈಗೊಂಡಿದ್ದಾರೆ.

ರಾಮನಗರ ಪಟ್ಟಣದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಮೇಶ್ ಗೌಡ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪೋಟೊ ಇಟ್ಟು ಅಣುಕು ತಿಥಿ ಮಾಡಿದ್ದರು. ಸ್ಟಾಲಿನ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ‌ಅರಿಶಿಣ ಕುಂಕುಮ‌ ಇಟ್ಟು ಅಣುಕು ತಿಥಿ ಮಾಡಲಾಗಿತ್ತು.

ಕಾವೇರಿ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ನಡೆ ಖಂಡಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟಿಸಲಾಗಿತ್ತು. ಇದೇ ವೇಳೆ, ಪ್ರಚೋದನಕಾರಿ ಭಾಷಣ ಮಾಡಿ ವೈಷ್ಯಮ್ಯ ಹುಟ್ಟುಹಾಕಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಈ ಮಧ್ಯೆ, ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆಗಳು ಮುಂದುವರಿದಿವೆ. ಮಂಡ್ಯ, ಮೈಸೂರಿನಲ್ಲಿ ವಿವಿಧ ಸಂಘಟನೆಗಳು, ರೈತ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿವೆ.

ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್​​ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ

ಇದೇ ಶುಕ್ರವಾರ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಬಂದ್ ಯಶಸ್ವಿಗೊಳಿಸುವಂತೆ ಬೆಂಗಳೂರಿನಲ್ಲಿ ಬೀದಿ ಬೀದಿ ಸಂಚರಿಸಿ ಸಾರ್ವಜನಿಕರಲ್ಲಿ, ಉದ್ಯಮಿಗಳಲ್ಲಿ ಮನವಿ ಮಾಡಿದ್ದಾರೆ. ಈ ಮಧ್ಯೆ, ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಮನವಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ