ಚನ್ನಪಟ್ಟಣ ಜಟಾಪಟಿ: 14 ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್, ಡಿವೈಎಸ್ಪಿ ಕಚೇರಿಗೆ ಧಾವಿಸಿದ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಟಾಪಟಿಯ ನಂತರ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದನ್ನು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಖಂಡಿಸಿದರು.
ರಾಮನಗರ: ಚನ್ನಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ನಿರ್ಲಕ್ಷಿಸಲಾಗಿದೆ ಎಂಬ ಕಾರಣಕ್ಕೆ ಜೆಡಿಎಸ್ (JDS) ಮತ್ತು ಬಿಜೆಪಿ (BJP) ಕಾರ್ಯಕರ್ತರ ನಡುವೆ ನಡೆದಿದ್ದ ಜಟಾಪಟಿ ಇದೀಗ ದೊಡ್ಡ ವಿವಾದವಾಗಿ ಬೆಳೆಯುತ್ತಿದೆ. ಜೆಡಿಎಸ್ನ 14 ಕಾರ್ಯಕರ್ತರ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ ಅವರ ಕಾರು ಚಾಲಕ ವೆಂಕಟೇಶ್ ನೀಡಿದ್ದ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ ಅವರಿದ್ದ ಕಾರಿನ ಮೇಲೆ ನಿನ್ನೆ ಕಲ್ಲು, ಮೊಟ್ಟೆ ಎಸೆಯಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತ ದಾಖಲಾಗಿರುವ ದೂರು ಆಧರಿಸಿ ಐಪಿಸಿ ಸೆಕ್ಷನ್ 143, 147, 341, 506 149 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಡಿವೈಎಸ್ಪಿ ಕಚೇರಿಗೆ ನಿಖಿಲ್
ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಟಾಪಟಿಯ ನಂತರ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದನ್ನು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಖಂಡಿಸಿದರು. ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ್ದ ಅವರು ಎಸ್ಪಿ ಸಂತೋಷ್ ಬಾಬು ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಶಂಕುಸ್ಥಾಪನೆ ರದ್ದಾದ ನಂತರ ಈ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದೇಕೆ ಎಂದು ಡಿವೈಎಸ್ಪಿ ಟಿ.ಎ.ಓಂಪ್ರಕಾಶ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಜಟಾಪಟಿ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ತರಾತುರಿಯಲ್ಲಿ ಯೋಗೇಶ್ವರ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲಿನ ಶಾಸಕರನ್ನೇ ಸಿಪಿವೈ ಕಡೆಗಣಿಸಿದ್ದಾರೆ. ಇದನ್ನು ಪ್ರಶ್ನಿಸಿದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ, ಎಫ್ಐಆರ್ ಸಹ ದಾಖಲಿಸಿದ್ದಾರೆ. ನಮ್ಮ ಕಾರ್ಯಕರ್ತರು ಕಲ್ಲು ಎಸೆದಿದ್ದಕ್ಕೆ ಸಾಕ್ಷಿ ಇದೆಯೇ? ಚನ್ನಪಟ್ಟಣದಲ್ಲಿ ಈ ಘಟನೆ ನಡೆಯಲು ಪೊಲೀಸರು, ರಾಜ್ಯ ಸರ್ಕಾರವೇ ಕಾರಣ ಎಂದು ಹೇಳಿದರು.
ಕಿಡಿಕಾರಿದ ಅಶ್ವತ್ಥ ನಾರಾಯಣ
ಕೋಲಾರ: ಬಿಜೆಪಿ ನಾಯಕ ಯೋಗೇಶ್ವರ್ ಅವರಿದ್ದ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆದಿದ್ದನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಖಂಡಿಸಿದರು. ಕಾರ್ಯಕ್ರಮ ನಡೆಯಬಾರದು ಎಂಬ ಉದ್ದೇಶದಿಂದ ಅವರು ಹೀಗೆ ವರ್ತಿಸಿದರು. ಅವರು ಕೇಳಿದ ಅನುದಾನ, ಸಹಕಾರವನ್ನು ನಮ ಸರ್ಕಾರವು ಯಾವುದೇ ತಾರತಮ್ಯವಿಲ್ಲದೆ ನೀಡಿದೆ. ಆದರೂ ಅವರು ಹೀಗೆ ವರ್ತಿಸಿದ್ದು ಏಕೆ ಎಂದು ಪ್ರಶ್ನಿಸಿದರು.
ರಾಮನಗರಕ್ಕೆ ನಮ್ಮ ಸರ್ಕಾರವು ವಿಶೇಷ ರೂಪ ನೀಡಿದೆ. ರಾಮನಗರದ ಮನೆಮನೆಗೂ ಕಾವೇರಿ ನೀರು ತಲುಪಿಸಿದ್ದೇವೆ. ರಾಜಕೀಯದಲ್ಲಿ ಚುನಾವಣೆಯೇ ಬೇರೆ ಅಭಿವೃದ್ಧಿಯೇ ಬೇರೆ. ಈ ಕಾರ್ಯಕ್ರಮ ಮುಂಚೆಯೂ ನಿಗದಿಯಾಗಿತ್ತು. ರಾಮನಗರದಲ್ಲಿ ಎಚ್ಡಿಕೆ ನೂರಾರು ಕಾರ್ಯಕ್ರಮ ಮಾಡಿದ್ದಾರೆ. ನಾವು ಎಂದೂ ಅವರ ಕಾರ್ಯಕ್ರಮ ತಡೆದಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವನ್ನು ಎಚ್.ಡಿ.ಕುಮಾರಸ್ವಾಮಿ ತಡೆಯಬೇಕಿತ್ತು ಎಂದು ಅವರು ಪ್ರಶ್ನಿಸಿದರು.
ಅಂತರಾಷ್ಟ್ರೀಯ ಮಾರುಕಟ್ಟೆ, ರೆಷ್ಮೆ ಮಾರುಕಟ್ಟೆ, ಪುಡ್ ಯೂನಿಟ್, ರಾಜಿವ್ ಗಾಂಧಿ ವಿವಿ ಸೇರಿದಂತೆ ಅವರು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದೇವೆ. ಜನರ ವಿಶ್ವಾಸ ಗಳಿಸಲು ಎಲ್ಲ ಪಕ್ಷಗಳೂ ರಾಜಕೀಯ ಮಾಡುತ್ತವೆ. ಈ ಕಾರ್ಯಕ್ರಮ ಆಯೋಜಿಸಿದ ನಂತರ ಅವರೇ ಪತ್ರ ಬರೆದು ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ನಾನು ಪ್ರವಾಸದಲ್ಲಿದ್ದೇನೆ ಎಂದು ತಿಳಿಸಿದ್ದರು ಎಂದು ವಿವರಿಸಿದರು.
ಅವರಿಗೆ ಎಷ್ಟು ಗೌರವ ಸ್ವಾತಂತ್ರ್ಯ ಮಾನ್ಯತೆ ಕೊಟ್ಟಿದ್ದೇವೆ, ಎಷ್ಟು ಸಹಿಸಿಕೊಂಡಿದ್ದೇವೆ, ಎಷ್ಟು ಸಹಕಾರ ಕೊಟ್ಟಿದ್ದೇವೆ. ಅವರು ಅಧ್ಯಕ್ಷರಾಗಿ ಕಾರ್ಯಕ್ರನದಲ್ಲಿ ಭಾಗವಹಿಸಬೇಕಿತ್ತು. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ಮತಗಳಿಂದ ಗೆದ್ದಿರೋದು ನಾನು. ಅಲ್ಲಿ ಕೆಲಸ ಮಾಡುವ ಮೂಲಕ ಅಭಿಮಾನದಿಂದ ಜನರ ವಿಶ್ವಾಸ ಗಳಿಸಿದ್ದೇನೆ. ರಾಮನಗರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನ ಕುಮಾರಸ್ವಾಮಿ ತಡೆಯಬೇಕಾಗಿತ್ತು. ಈ ಕೆಲಸವನ್ನು ಅವರು ತಮ್ಮ ಕಾರ್ಯಕರ್ತರ ಮೂಲಕ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Published On - 2:37 pm, Sun, 2 October 22