ನಿನ್ನೆಯ ಕಾಂಗ್ರೆಸ್ ಕಾರ್ಯಕ್ರಮದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ; ಬಿಜೆಪಿ ವಿರುದ್ಧ ಆಕ್ರೋಶ
ರಾಹುಲ್ ಗಾಂಧಿಯವರು ಅವರ ಪಕ್ಷ ಸಂಘಟನೆಗೆ, ಜನರ ವಿಶ್ವಾಸ ಗಳಿಸೋಕೆ ಪಾದಯಾತ್ರೆ ಮಾಡುತ್ತಿದ್ದಾರೆಂದು ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ: ರಾಹುಲ್ ಗಾಂಧಿಯವರು (Rahul Gandhi) ಅವರ ಪಕ್ಷ ಸಂಘಟನೆಗೆ, ಜನರ ವಿಶ್ವಾಸ ಗಳಿಸೋಕೆ ಪಾದಯಾತ್ರೆ ಮಾಡುತ್ತಿದ್ದಾರೆಂದು ಚನ್ನಪಟ್ಟಣದಲ್ಲಿ (Channapattana) ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ (HD Kumarswamy) ಹೇಳಿದ್ದಾರೆ. ಪಾದಯಾತ್ರೆಯ ಉದ್ದೇಶ ಹೇಳಬೇಕಲ್ವ? ನಿನ್ನೆ ಕಾಂಗ್ರೆಸ್ (Congress) ಅವರು ಪಾದಯಾತ್ರೆ ಮಾಡಿದ್ದರಲ್ಲ, ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ? ನಿನ್ನೆಯ (ಆಗಸ್ಟ್ 15) ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸುಮಾರು 25 ಕೋಟಿ ಖರ್ಚಾಗಿದೆಯಂತೆ. ಆ ದುಡ್ಡು ಎಲ್ಲಿಂದ ಬಂತು ಹೇಳಬೇಕಲ್ವ ? ಈ ರೀತಿಯ ಪಾದಯಾತ್ರೆಗಳಿಂದ ಜನರ ಸಮಸ್ಯೆ ಬಗೆಹರಿಯೊಲ್ಲ. ಸರ್ಕಾರ ನಡೆಸಬೇಕಾದರೆ ಏನು ಕಾರ್ಯಕ್ರಮ ಕೊಟ್ಟಿದ್ದೆ ಎನ್ನುವುದು ಮುಖ್ಯವಾಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಪ್ರೇಮ್ಸಿಂಗ್ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧ ಮಾತಮಾಡಿದ ಅವರು ಸ್ವಾತಂತ್ರ್ಯ ತಂದು ಕೊಟ್ಟವರ ಬಗ್ಗೆ ಪ್ರಾಮಾಣಿಕವಾಗಿ ದುಡಿದವರ ಬಗ್ಗೆ ಬಿಜೆಪಿ ಸ್ಮರಿಸಿಕೊಳ್ಳುತ್ತಿಲ್ಲ. ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ. ಸಮಾಜದಲ್ಲಿ ಸಂಘರ್ಷಗಳಿಗೆ ಎಡೆ ಮಾಡಿ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ನಾಯಕರ ಹೇಳಿಕೆಗಳಿಂದ ಸಹೋದರ ಬಾಂಧವ್ಯವನ್ನು ಕಲುಷಿತಗೊಳ್ಳುತ್ತಿದೆ. ಮುಂದೆ ನಮಗೆ ಅವಕಾಶ ಕೊಟ್ಟರೆ ಏನು ಕಾರ್ಯಕ್ರಮ ಕೊಡತೀವಿ ಎನ್ನುವ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಬೇಕು. ಸುಮ್ಮನೆ ನಾನು ಒಂದು ಶೋಕಿಗಾಗಿ ಕಾರ್ಯಕ್ರಮ ಮಾಡುತ್ತೇನೆ ಅಂತಾ ಹೋದರೆ ಏನು ಪ್ರಯೋಜನ..? ಎಂದು ಪ್ರಶ್ನಿಸಿದರು.
ಸಚಿವ ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮಾಧುಸ್ವಾಮಿ ಒಬ್ಬರು ಜವಾಬ್ದಾರಿ ಇರುವಂತಹ ಸಚಿವರು. ಪ್ರಮುಖವಾಗಿ ಕಾನೂನು ಇಲಾಖೆಯನ್ನು ನಿರ್ವಹಿಸುತ್ತಾರೆ. ಸರ್ಕಾರದ ನಡೆ ಯಾವ ರೀತಿ ಇದೆ ಅಂತಾ ಮಂತ್ರಿಗಳಿಂದಲೇ ಪ್ರತಿಕ್ರಿಯೆ ಬಂದಿದೆ. ಸಾರ್ವಜನಿಕವಾಗಿ ಎಲ್ಲರಲ್ಲೂ ಇರುವ ಭಾವನೆ ಅದು. ಮಂತ್ರಿಮಂಡಲದಲ್ಲಿರುವ ಅವರಲ್ಲೇ ವಿಶ್ವಾಸ ಇಲ್ಲದಿರುವುದನ್ಮು ಗಮನಿಸಿದ್ದೇನೆ. ಬೇರೆ ಮಂತ್ರಿಗಳು ಕೊಟ್ಟಂತಹ ಹೇಳಿಕೆಗಳನ್ನು ಗಮನಿಸಿದ್ದೇನೆ. ಈ ಸರ್ಕಾರ ಮಾಧುಸ್ವಾಮಿ ಅವರು ಹೇಳಿದ ರೀತಿ ಸಮಯ ತಳ್ಳುತ್ತಿದೆ. ಸರ್ಕಾರ ಜಾಹಿರಾತುಗಳ ಮೇಲೆ ನಡೆಯುತ್ತಿದೆ ಎಂದು ಟೀಕೆ ಮಾಡಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ನಗರಸಭೆಯಲ್ಲಿ ಸ್ವಚ್ಛತಾ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಎದುರೇ ವಾಗ್ವಾದ ನಡೆದಿದೆ. ಪ್ರೋಟೋಕಾಲ್ ಉಲ್ಲಂಘಿಸಿದ್ದಾರೆಂದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಜೊತೆ ಕಾಂಗ್ರೆಸ್ ಗಲಾಟೆ ಮಾಡಿದ್ದಾರೆ. ಕಾರ್ಯಕರ್ತರ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೆಚ್.ಡಿ.ಕುಮಾರಸ್ವಾಮಿ ಪೊಲೀಸ್ ಭದ್ರತೆಯಲ್ಲಿ ತೆರಳಿದ್ದಾರೆ.
Published On - 2:52 pm, Tue, 16 August 22