ರಾಮನಗರ: ತಾಲ್ಲೂಕಿನ ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರು ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಹನಿಟ್ರ್ಯಾಪ್ ಸಂಚು ರೂಪಿಸಿದ ಮುಖ್ಯ ಆರೋಪಿ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಶಿಕ್ಷಕ ಹಾಗೂ ವಕೀಲ ಮಹದೇವಯ್ಯ, ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಯುವತಿ ದೊಡ್ಡಬಳ್ಳಾಪುರದ ನೀಲಾಂಬಿಕೆ (ಚಂದು) ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಲು ರಾಮನಗರ ಪೊಲೀಸರು ನಿರ್ಧರಿಸಿದ್ದಾರೆ. ಮೂವರೂ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಳ್ಳಲು ನ್ಯಾಯಾಧೀಶರಿಗೆ ಪೊಲೀಸರು ಮನವಿ ಮಾಡಲಿದ್ದಾರೆ.
ಪ್ರಸ್ತುತ ಈ ಮೂವರೂ ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಮೃತ್ಯುಂಜಯ ಸ್ವಾಮೀಜಿ ಹಾಗೂ ಮಹದೇವಯ್ಯ ಅವರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಲಾಗಿದೆ. ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ನ್ಯಾಯಾಲಯವು ಈ ಆರೋಪಿಗಳನ್ನು ಪೊಲೀಸರ ವಶಕ್ಕೆ ಕೊಟ್ಟು, ಪೊಲೀಸ್ ವಿಚಾರಣೆ ಮುಂದುವರಿದರೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಯಾವ ಕೇಸ್ ಬಗ್ಗೆಯೂ ನಾನು ಮಾತನಾಡುವುದಿಲ್ಲ. ತನಿಖೆಯ ಬಗ್ಗೆ ಗೌಪ್ಯತೆ ಏನೂ ಇಲ್ಲ’ ಎಂದರು.
ಮತ್ತಷ್ಟು ಹನಿಟ್ರ್ಯಾಪ್ ಸಾಧ್ಯತೆ
ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಕಾರಣವಾದ ಬ್ಲ್ಯಾಕ್ಮೇಲ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಆರೋಪಿಗಳು ರೂಪಿಸಿರುವ ಸಂಚಿನ ವಿವರಗಳನ್ನು ಒಂದೊಂದಾಗಿ ಅರಿಯುತ್ತಿದ್ದಾರೆ. ಈ ವೇಳೆ ನೀಲಾಂಬಿಕೆ ಮತ್ತು ಇತರರು ಇನ್ನಷ್ಟು ಸನ್ಯಾಸಿಗಳನ್ನು ಇದೇ ರೀತಿ ಹನಿಟ್ರ್ಯಾಪ್ ಬಲೆಗೆ ಕೆಡವಿರುವ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ನೀಲಾಂಬಿಕೆ ಹಲವು ಸ್ವಾಮೀಜಿಗಳ ಜೊತೆ ಅನ್ಯೋನ್ಯವಾಗಿದ್ದರು. ದೊಡ್ಡಬಳ್ಳಾಪುರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ನೀಲಾಂಬಿಕೆ, ಚಿಕ್ಕವಯಸ್ಸಿನಿಂದಲೂ ಸಿದ್ದಗಂಗಾ ಮಠದ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಸಿದ್ದಗಂಗಾ ಮಠಕ್ಕೆ ಬರುವ ಹಲವು ಸ್ವಾಮೀಜಿಗಳನ್ನ ಪರಿಚಯ ಮಾಡಿಕೊಂಡಿದ್ದರು.
ನೀಲಾಂಬಿಕೆಯ ಮಾವ ಸಿದ್ದಗಂಗಾ ಮಠದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮಠಕ್ಕೆ ಹೋಗಿ-ಬಂದು ಮಾಡುವುದು ಸುಲಭವಾಗಿತ್ತು. ತನ್ನೊಂದಿಗೆ ಸಲುಗೆಯಿಂದ ಇದ್ದ ಮತ್ತಷ್ಟು ಸ್ವಾಮೀಜಿಗಳ ವಿಡಿಯೊ ಮಾಡಿ ಕಣ್ಣೂರು ಶ್ರೀಗಳಿಗೆ ಈಕೆ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ. ಇದೇ ರೀತಿಯ ವಿಡಿಯೊಗಳನ್ನು ಕೈಲಿಟ್ಟುಕೊಂಡು ಇನ್ನಷ್ಟು ಸ್ವಾಮಿಗಳನ್ನು ಈ ತಂಡ ಬ್ಲ್ಯಾಕ್ಮೇಲ್ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ.
Published On - 11:21 am, Mon, 31 October 22