ಅವರಿಬ್ಬರೂ ಒಂದೇ ಗರ್ಭ ಹಂಚಿಕೊಂಡು ಹುಟ್ಟಿದವರು, ತಂದೆ ಹೆಸರಿಗಿದ್ದ ಆಸ್ತಿಯಲ್ಲಿ ಇಡೀ ಆಸ್ತಿ ನನ್ನದಾಗಬೇಕು ಅಂತ ದೊಡ್ಡಣ್ಣ ಕ್ಯಾತೆ ತೆಗೆದಿದ್ರೆ, ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಹಕ್ಕಿದೆ ಅಂತ ತಮ್ಮ ಪಟ್ಟು ಹಿಡಿದಿದ್ದ, ನೀನು ಇದ್ದರೆ ತಾನೇ ಆಸ್ತಿ ನಿನ್ನ ಪಾಲಾಗೋದು ಅಂತ ಅಂದವನೇ ಮಚ್ಚಿನಿಂದ ಸ್ವಂತ ತಮ್ಮನ್ನನ್ನೇ ಕೊಚ್ಚಿ ಕೊಚ್ಚಿ ಸಾಯಿಸಿಬಿಟ್ಟ. ಹೌದು ಇಂತಹದ್ದೊಂದು ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ನೆಸೆಪಾಳ್ಯದಲ್ಲಿ ನಡೆದುಹೋಗಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನಾದ ಪಾಲು ಬೇಕು ಅಂತ ಕೂತಿದ್ದ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಕಾರಣ ಇಡೀ ಊರಲ್ಲಿ ಆತಂಕ ಮನೆ ಮಾಡಿದೆ. ಬೆಳಗಿನ ಝಾವ ಜಮೀನು ಕೆಲಸಕ್ಕೆ ಹೋಗಿದ್ದ ತಮ್ಮ ನಾಗರಾಜನನ್ನು ಅಣ್ಣ ರಾಮಚಂದ್ರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಾಗರಾಜನನ್ನು ಮುಗಿಸಲು ರಾಮಚಂದ್ರ ತಾಯಿ ಅರಸಮ್ಮ ಕೂಡ ಸಾಥ್ ನೀಡಿದ್ದಾಳೆ ಅಂತ ಹೇಳಲಾಗ್ತಿದೆ!
ನೆಸೆಪಾಳ್ಯದಲ್ಲಿ ಒಟ್ಟು ಮೂರು ಎಕರೆ ಜಮೀನು ಹೊಂದಿರುವ ನಾಗರಾಜನಿಗೆ ಕೇವಲ ಎಂಟತ್ತು ಗುಂಟೆ ಮಾತ್ರ ನೀಡಲಾಗಿತ್ತು ಅನ್ನೋ ಆರೋಪವಿದೆ. ರೇಷ್ಮೆ ಬೆಳೆ ಮಾಡಿಕೊಂಡು ಸರಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಆರೋಪಿ ರಾಮಚಂದ್ರನೇ ತೆಗೆದುಕೊಳ್ತಿದ್ದ ಅಂತ ಹೇಳಲಾಗಿದೆ.
ತನಗೂ ಕೂಡ ಅದರ ಲಾಭ ಬರುವಂತೆ ಮಾಡಲು ಉಳಿದ ಭೂಮಿ ಕೊಡಿ ಅಂತ ನಾಗರಾಜ ಪಟ್ಟು ಹಿಡಿದಿದ್ದ, ಅಲ್ಲದೇ ಇದೇ ವಿಚಾರಕ್ಕೆ ಆರು ತಿಂಗಳ ಹಿಂದೆ ಜಗಳವಾಗಿದ್ದು, ತನಗೆ ಕೊಲೆ ಬೆದರಿಕೆ ಇದೆ, ನನಗೇನಾದ್ರೂ ಆದರೆ ಅದಕ್ಕೆ ನನ್ನ ಅಣ್ಣನೇ ಕಾರಣ ಅಂತ ರಾಮನಗರ ಪೊಲೀಸರಿಗೆ ದೂರು ಕೂಡ ನೀಡಿದ್ದ ಎನ್ನುತ್ತಾರೆ ಬಸವರಾಜ್, ಗ್ರಾಮ ಪಂಚಾಯತ್ ಸದಸ್ಯ, ನೆಸೆಪಾಳ್ಯ.
ಬೆಳಗಿನ ಜಾವ ಕೆಲಸಕ್ಕೆಂದು ಹೊಲಕ್ಕೆ ಹೋದ ನಾಗರಾಜ್ ತನ್ನ ಸ್ವಂತ ಅಣ್ಣನಿಂದ ಕೊಲೆಯಾಗಿ ಹೋಗಿದ್ದಾನೆ. ತನ್ನ ಗಂಡ ಕೇಳಿದ್ದರಲ್ಲಿ ತಪ್ಪೇನಿದೆ? ಆಸ್ತಿಗಾಗಿ ತನ್ನ ಗಂಡನನ್ನು ಕೊಲೆ ಮಾಡಿದ ರಾಮಚಂದ್ರನಿಗೆ ಕಠಿಣ ಸಜೆ ಆಗಲಿ ಅಂತ ನಾಗರಾಜ್ ಪತ್ನಿ ದೂರು ನೀಡಿದ್ದಾಳೆ.