ಬೆಳಗಾವಿ, ಡಿಸೆಂಬರ್ 05: ಬಿಜೆಪಿ (BJP) ಪಾಳಯದ ಬಣ ಬಡಿದಾಟ ಸದ್ಯ ದೆಹಲಿ ಅಂಗಳದಲ್ಲಿದೆ. ನಿನ್ನೆ ಶಿಸ್ತು ಸಮಿತಿ ಮುಂದೆ ಹಾಜರಾಗಿದ್ದ ಶಾಸಕ ಯತ್ನಾಳ್‌ಗೆ, ಹೈಕಮಾಂಡ್ ಖಡಕ್ ಆಗಿಯೇ ಸೂಚನೆ ನೀಡಿದೆ. ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿ. ನಿಮಗೆ ಭವಿಷ್ಯ ಇದೆ. ಶಾಂತ ಸ್ವಭಾವದಿಂದ ವರ್ತಿಸುವಂತೆ ತಿಳಿಹೇಳಿದೆ. ಆದರೆ ಈ ಮಧ್ಯೆ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರಗೆ ಹುಡುಗಾಟಿಕೆ ಬುದ್ಧಿಯಿದೆ, ಸಣ್ಣ ಹುಡುಗ ಇದ್ದಾನೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಲಾಯಕ್ ಇಲ್ಲ. ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಹೇಳಿದ್ದೇವೆ. ಯಡಿಯೂರಪ್ಪನವರು ಹೋರಾಟ ಮಾಡಿ ಆ ಸ್ಥಾನಕ್ಕೆ ತಲುಪಿದ್ದರು. ಆದರೆ ಯಡಿಯೂರಪ್ಪ ಮಗನಾಗಿ ಆ ಸ್ಥಾನಕ್ಕೆ ತಲುಪಿ ವ್ಯರ್ಥವಾಗುತ್ತಿದ್ದಾರೆ. ಈಗ ಅಧ್ಯಕ್ಷ ಸ್ಥಾನ ತ್ಯಜಿಸಿ, ಅನುಭವ ಆದ್ಮೇಲೆ ಅಧ್ಯಕ್ಷರಾದರೆ ಸೂಕ್ತ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ರಾಜಕಾರಣದಲ್ಲಿ ಪಳಗಿದವರಲ್ಲ; ಯಡಿಯೂರಪ್ಪ ಹೋರಾಟ ಮಾಡಿದವರು: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಾಯಿಬಿಟ್ಟರೆ ಬರೀ ಸುಳ್ಳು ಹೇಳುತ್ತಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಗಂಭೀರವಾಗಿ ಕೆಲಸ ಮಾಡಬೇಕು. ಆದರೆ ಬಿವೈ ವಿಜಯೇಂದ್ರ ಬಹಳ ಹತಾಶೆ ಭಾವನೆಯಿಂದ ಅಧ್ಯಕ್ಷ ಸ್ಥಾನ ನಡೆಸುತ್ತಿದ್ದಾನೆ. ವಕ್ಫ್ ವಿರುದ್ಧ ಹೋರಾಟಕ್ಕೆ ನಾವು ಬಹಳಷ್ಟು ಮನವಿ ಮಾಡಿದ್ದೆವು ಎಂದು ಹೇಳಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಯಕ್ ಇಲ್ಲಾ ಅಂತಾ ಪದೇ ಪದೇ ಹೇಳುತ್ತೇವೆ. ಹೈಕಮಾಂಡ್ಗೂ ಮನವರಿಕೆ ಆಗಿದೆ. ಯಾವುದೇ ಟೈಮ್ನಲ್ಲಿ ಏನೋ ತಿಳಿದು ಮಾಡಿದ್ದಾರೆ. ಮಾಡಿದ ಬಳಿಕ ಅವನ ನಡುವಳಿಕೆ ತಿಳ್ಸಿಕೊಟ್ಟಿದ್ದೇವೆ. ಮುಂದೆ ಏನು ಮಾಡ್ತಾರೆ ನೋಡೋಣ. ಅಧ್ಯಕ್ಷರ ಬದಲಾವಣೆ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂದಿದ್ದಾರೆ.
ಹೈಕಮಾಂಡ್ ಯಾರಿಗೂ ಏನೂ ಸೂಚನೆ ಕೊಟ್ಟಿಲ್ಲ. ಜೆಪಿಸಿ ಕಮೀಟಿಗೆ ರಿಪೋರ್ಟ್ ಕೊಟ್ಟು ಬಳಿಕ ರಾಜನಾಥ್ ಸಿಂಗ್, ಹಿರಿಯರನ್ನ ಭೇಟಿ ಆಗಿದ್ದೇವೆ. ವಕ್ಪ್ ಮುಂದುವರೆಸಿ ಒಳ್ಳೆ ಕೆಲಸ ಮಾಡ್ತಿದೀರಿ ಅಂತಾ ಹೇಳಿದ್ದಾರೆ. ಅಧಿವೇಶನದ ನಡುವೆ ಬಳ್ಳಾರಿ, ವಿಜಯನಗರ ಜಿಲ್ಲೆ ಮಾಡಬೇಕು ಅಂತಾ ಇದೆ. ತಯಾರಿ ನಡೆಸಿದ ಮೇಲೆ ಎರಡನೇ ಹಂತದ ದಿನಾಂಕ ಘೋಷಣೆ ಮಾಡುತ್ತೇವೆ. ಮೇಲುಗೈ ಯಾರದ್ದು ಆಗುತ್ತೆ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ಅವರು ಏನೂ ತೀರ್ಮಾನ ತೆಗೆದುಕೊಳ್ಳುತ್ತಾರೆ ಒಪ್ಪುತ್ತೇವೆ. ನಮ್ಮ ಪರವಾಗಿ ಕೊಡ್ತಾರೋ ಯಾರ ಪರವಾಗಿ ಕೊಡ್ತಾರೆ ಗೊತ್ತಿಲ್ಲ. ನಮ್ಮ ಪಕ್ಷದ ವಿಚಾರ ಇದೆ ಆಂತರಿಕವಾಗಿ ಬಗೆ ಹರಿಸುತ್ತೇವೆ ಎಂದರು.
ವಕ್ಫ್ ವಿಚಾರವಾಗಿ ಜೆಪಿಸಿ ಅಧ್ಯಕ್ಷರನ್ನು ಭೇಟಿಯಾಗಿ ಬಂದಿದ್ದೇವೆ. ವಕ್ಫ್ ವಿರುದ್ಧದ ಮೊದಲ ಹಂತದ ಹೋರಾಟದ ವರದಿ ಸಲ್ಲಿಸಿದ್ದೇವೆ. ವಕ್ಫ್ ವಿರುದ್ಧ 2ನೇ ಹಂತದ ಹೋರಾಟಕ್ಕೆ ದಿನಾಂಕ ನಿಗದಿ ಮಾಡ್ತೇವೆ. ನಮ್ಮ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:25 pm, Thu, 5 December 24