ಬೆಂಗಳೂರು, ಮಾರ್ಚ್ 31: ನಟಿ ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Gold Smuggling) ಮೂರನೇ ಆರೋಪಿಯಾಗಿರುವ ಸಾಹಿಲ್ ಜೈನ್ (Sahil Jain) ವಿಚಾರಣೆ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ. ಡಿಆರ್ಐಗೆ ಸಿಕ್ಕಿರುವ ಡಿಜಿಟಲ್ ಸಾಕ್ಷಿಯಲ್ಲಿ ಚಿನ್ನ ಕಳ್ಳಸಾಗಣೆ ರಹಸ್ಯ ಬಯಲಾಗಿದೆ. ಇಷ್ಟೇ ಅಲ್ಲದೆ, ಕಳ್ಳಸಾಗಣೆ ಮಾಡಿದ್ದ ಚಿನ್ನ ಮಾರಾಟಕ್ಕೆ ಸಹಾಯ ಮಾಡಿರುವುದಾಗಿ ಸಾಹಿಲ್ ಜೈನ್ ಒಪ್ಪಿಕೊಂಡಿದ್ದಾನೆ. ಈ ಹಿಂದೆ ಹಲವು ಬಾರಿ ಚಿನ್ನ ಕಳ್ಳಸಾಗಣೆಗೆ ಸಹಾಯ ಮಾಡಿದ್ದಾಗಿಯೂ ಹೇಳಿಕೆ ನೀಡಿದ್ದಾನೆ.
ಸಾಹಿಲ್ ವಾಟ್ಸ್ಆ್ಯಪ್ ಚಾಟ್ನಲ್ಲಿ ದುಬೈಗೆ ಹಣ ವರ್ಗಾವಣೆ ಮಾಡಿದ್ದನ್ನು ಡಿಆರ್‌ಐ ಪತ್ತೆಮಾಡಿದೆ. ಚಿನ್ನ ಮಾರಾಟ ಮಾಡಿದ್ದು ಕೂಡ ವಾಟ್ಸ್ಆ್ಯಪ್ ಚಾಟ್ನಿಂದ ಬಹಿರಂಗವಾಗಿದೆ. ಮಾರ್ಚ್ 3ರಂದು ರನ್ಯಾ ರಾವ್, ದುಬೈ ನಂಬರ್ನಿಂದ ಸಾಹಿಲ್ಗೆ ಕರೆ ಮಾಡಿದ್ದ ವೇಳೆ ಚಿನ್ನ ವಿಲೇವಾರಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದು ಪತ್ತೆಯಾಗಿದೆ.
ಮತ್ತೊಂದೆಡೆ, ಹವಾಲಾ ದಂಧೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾಗಿ ಜೈನ್ ತನಿಖಾಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ, ದುಬೈನಲ್ಲಿ ಚಿನ್ನ ಖರೀದಿಗೆ ಹವಾಲಾ ಮೂಲಕ ಹಣ ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ, ಡಿಆರ್‌ಐ ಅಧಿಕಾರಿಗಳು ಸಾಹಿಲ್ ಜೈನ್ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಬಳ್ಳಾರಿ ಮೂಲದ ಸಾಹಿಲ್ ಜೈನ್ ಜ್ಯುವೆಲ್ಲರಿ ಅಂಗಡಿ ಮಾಲೀಕ. ಮಹೇಂದ್ರ ಜೈನ್ ಎಂಬ ಬಟ್ಟೆ ವ್ಯಾಪಾರಿಯ ಮಗನಾಗಿರುವ ಸಾಹಿಲ್, ಆರಂಭದಲ್ಲಿ ಸೋದರ ಮಾವನ ಜೊತೆ ಮುಂಬೈನಲ್ಲಿ ವಾಸವಿದ್ದ. ನಂತರ ಚಿನ್ನದ ಉದ್ಯಮ ಆರಂಭಿಸಿದ್ದ. ಆ ಸಂದರ್ಭದಲ್ಲಿ ಸ್ಮಗ್ಲಿಂಗ್ ಪ್ರಕರಣವೊಂದರಲ್ಲಿ ಆತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ನಂತರ ಪ್ರಕರಣದಿಂದ ಬಚಾವಾಗಿದ್ದ ಸಾಹಿಲ್ ಜೈನ್ ಇದೀಗ ರನ್ಯಾ ಪ್ರಕರಣದಲ್ಲೂ ಚಿನ್ನ ಮಾರಾಟಕ್ಕೆ ಸಹಾಯ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಆತನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಸಾಹಿಲ್ ಡಿಆರ್‌ಐ ಕಸ್ಟಡಿಯಲ್ಲಿದ್ದಾನೆ.
ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಬಳ್ಳಾರಿ ಜ್ಯುವೆಲ್ಲರಿ ಅಂಗಡಿ ಮಾಲೀಕ, ಉದ್ಯಮಿ ಸಾಹಿಲ್ ಜೈನ್ ಬಂಧನ
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಮೊದಲ ಆರೋಪಿಯಾಗಿದ್ದರೆ, ಆಕೆಯ ಮಾಜಿ ಬಾಯ್‌ಫ್ರೆಂಡ್ ತರುಣ್ ರಾಜ್ ಎರಡನೇ ಆರೋಪಿಯಾಗಿದ್ದಾನೆ. ಸಾಹಿಲ್ ಜೈನ್ ಮೂರನೇ ಆರೋಪಿ.