ಕಾರ್ಯಕರ್ತರ ಅಸಮಾಧನ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ: ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ
ಕಾಂಗ್ರೆಸ್ ಸರ್ಕಾರದ ಸಾಲು ಸಾಲು ಬೆಲೆ ಏರಿಕೆ ಸಂಬಂಧ ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು, ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಕುತ್ತಿದ್ದಾರೆ. ವಿರೋಧ ಪಕ್ಷವಾಗಿ ಬಿಜೆಪಿ ಏನು ಮಾಡುತ್ತಿಲ್ಲವೆಂದು ಬೇಸರ ಮಾತುಗಳನ್ನಾಡುತ್ತಿದ್ದಾರೆ. ಹೀಗೆ ಸ್ವಪಕ್ಷದ ರಾಜ್ಯ ನಾಯಕರ ನಡೆ ಬಗ್ಗೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆ.

ಬೆಂಗಳೂರು, ಮಾರ್ಚ್ 31: ಬೆಲೆಯೇರಿಕೆ ಖಂಡಿಸಿ ರಾಜ್ಯ ಸರ್ಕಾರದ (Karnataka Government) ವಿರುದ್ಧ ರಾಜ್ಯದ್ಯಂತ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಬಿಜೆಪಿ (BJP) ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 2ರಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ನಮ್ಮ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತಾರೆ. ಏಪ್ರಿಲ್ 5ರಂದು ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಧರಣಿ ಮಾಡುತ್ತೇವೆ ಎಂದರು.
ನಾಲ್ಕು ಹಂತಗಳಲ್ಲಿ ಹೋರಾಟ
ನಾಲ್ಕು ಹಂತಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೋರಾಟ ನಡೆಸುತ್ತೇವೆ. ಏಪ್ರಿಲ್ 7ರಂದು ಮೈಸೂರಿನಿಂದ ಜನಜಾಗೃತಿ ಹೋರಾಟ ಪ್ರಾರಂಭವಾಗುತ್ತದೆ. ಜನಾಕ್ರೋಶ ಹೋರಾಟಕ್ಕೆ ಮಧ್ಯಾಹ್ನ 3ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡುತ್ತಾರೆ. ಏ.7ರಂದು ಮೈಸೂರು, ಚಾಮರಾಜನಗರದಲ್ಲಿ ಜನಜಾಗೃತಿ ಹೋರಾಟ ನಡೆಯಲಿದ್ದು, ಏಪ್ರಿಲ್ 8ರಂದು ಮಂಡ್ಯ, ಹಾಸನದಲ್ಲಿ ನಡೆಯಲಿದೆ. ಏಪ್ರಿಲ್ 9ರಂದು ಕೊಡಗು, ಮಂಗಳೂರಿನಲ್ಲಿ ಜನಾಕ್ರೋಶ ಹೋರಾಟ ನಡೆಯಲಿದೆ. ಏಪ್ರಿಲ್ 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಏಪ್ರಿಲ್ 9 ರಂದು ಕೊಡಗು ಮತ್ತು ಮಂಗಳೂರು, ಏಪ್ರಿಲ್ 10 ರಂದು ಉಡುಪಿ ಮತ್ತು ಚಿಕ್ಕಮಗಳೂರು, ಏಪ್ರಿಲ್ 13ರಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ, ಏಪ್ರಿಲ್ 16 ರಂದು ಬೀದರ್ ಮತ್ತು ಕಲಬುರಗಿ, ಏಪ್ರಿಲ್ 17 ರಂದು ವಿಜಯಪುರ ಮತ್ತು ಬಾಗಲಕೋಟೆ, ಏಪ್ರಿಲ್ 18 ರಂದು ಬೆಳಗಾವಿ ಮತ್ತು ಹುಬ್ಬಳ್ಳಿ, ಏಪ್ರಿಲ್ 21 ರಂದು ಯಾದಗಿರಿ ಮತ್ತು ರಾಯಚೂರು, ಏಪ್ರಿಲ್ 22 ರಂದು ಬಳ್ಳಾರಿ ಮತ್ತು ವಿಜಯನಗರ, ಏಪ್ರಿಲ್ 23 ರಂದು ಕೊಪ್ಪಳ ಮತ್ತು ಗದಗ ಏಪ್ರಿಲ್ 24 ರಂದು ಹಾವೇರಿ ಮತ್ತು ದಾವಣಗೆರೆ, ಏಪ್ರಿಲ್ 27 ರಂದು ಚಿತ್ರದುರ್ಗ ಮತ್ತು ತುಮಕೂರು, ಏಪ್ರಿಲ್ 28 ರಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಮತ್ತು ಮೇ 3ರಂದು ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದಲ್ಲಿ ಹೋರಾಟ ನಡೆಯಲಿದೆ.
ಇನ್ನು, ಎರಡನೇ ಹಂತದ ಹೋರಾಟ ಏಪ್ರಿಲ್ 13ರಿಂದ ಆರಂಭವಾಗಲಿದೆ. ಏಪ್ರಿಲ್ 13ರಂದು ಶಿವಮೊಗ್ಗ, ಕಾರವಾರದಲ್ಲಿ ಜನಾಕ್ರೋಶ ಹೋರಾಟ ನಡೆಯಲೊದೆ. ಪ್ರತಿ ಜಿಲ್ಲೆಯಲ್ಲಿ 2-3 ಕಿ.ಮೀ. ಪಾದಯಾತ್ರೆ, ಸಭೆಗಳನ್ನು ಮಾಡುತ್ತೇವೆ. ಈ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಮಾತ್ರ ಕೈಗೆತ್ತಿಕೊಂಡಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲ ವಸ್ತುಗಳ ದರ ಹೆಚ್ಚಿಸುತ್ತಿದೆ. ಕಾಂಗ್ರೆಸ್ ಸರ್ಕಾರ ದುಬಾರಿ ಜೀವನ ನಡೆಸುವ ದುಸ್ಥಿತಿ ನಿರ್ಮಿಸಿದೆ. ದೇಶದಲ್ಲೇ ಅತ್ಯಂತ ದುಬಾರಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಿಸಿದೆ. ಗಾಳಿ ಹೊರತುಪಡಿಸಿ ಉಳಿದೆಲ್ಲ ವಸ್ತುಗಳ ದರ ಏರಿಕೆ ಮಾಡುತ್ತಿದ್ದಾರೆ. ಮತದಾರರಿಗೆ ವರದಾನವಾಗುವ ಬದಲು ಸರ್ಕಾರ ಶಾಪಗ್ರಸ್ಥವಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಹೆಚ್ಚಳವಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮನೆ ಕಸಕ್ಕೂ ಕಟ್ಟಬೇಕು ತೆರಿಗೆ? ವಾರ್ಷಿಕ 600 ಕೋಟಿ ರೂ. ಸಂಗ್ರಹಕ್ಕೆ ಯೋಚನೆ
ಬಜೆಟ್ನಲ್ಲಿ ಮುಸ್ಲಿಮರ ಓಲೈಕೆಗಾಗಿ ಹಿಂದೂಗಳಿಗೆ ಅವಮಾನ ಮಾಡಿದೆ. ಬಿಜೆಪಿ ಅಲ್ಪಸಂಖ್ಯಾತರ ಹಾಗೂ ಮುಸ್ಲಿಮರ ವಿರೋಧಿಯಲ್ಲ. ಆದರೆ, ಕೇವಲ ಮುಸ್ಲಿಮರಿಗೆ ಮಾತ್ರ ಯಾಕೆ ಕೊಡುತ್ತಿದ್ದೀರಿ? ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲ ಧರ್ಮಗಳಿಗೂ ಇದೆ. ‘ಭಾಗ್ಯಲಕ್ಷ್ಮೀ’ ಯೋಜನೆಯನ್ನು ಬಿಎಸ್ ಯಡಿಯೂರಪ್ಪನವರು ಯಡಿಯೂರಪ್ಪನವರು ಕೇವಲ ಹಿಂದೂಗಳಿಗೆ ಮಾತ್ರ ಕೊಟ್ಟಿಲ್ಲ. ಸಿದ್ದರಾಮಯ್ಯ ಹಾಲುಮತ ಸಮಾಜವನ್ನು ಸಂಪೂರ್ಣ ಮರೆತಿದ್ದಾರೆ. ಕಾಂಗ್ರೆಸ್ ಸರ್ಕಾರ ಕಾಯಕ ಸಮುದಾಯಗಳನ್ನು ನಿರ್ಲಕ್ಷಿಸಿದೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಹಿಂದೆ ಹೊರಟಿರೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಆಂತರಿಕ ಭಿನ್ನಮತ ಕಂಟ್ರೋಲ್
ಪಕ್ಷದ ಆಂತರಿಕ ಭಿನ್ನಮತ ಎಲ್ಲವೂ ಕಂಟ್ರೋಲ್ ಆಗಿದೆ. ಬೇರೆ ವಿಚಾರಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಿರಂತರವಾಗಿ ಉತ್ತರ ಕೊಡುತ್ತಲೇ ಇರುತ್ತೇವೆ. 18 ಶಾಸಕರ ಅಮಾನತು ನಿರ್ಧಾರವನ್ನು ಸ್ಪೀಕರ್ ವಾಪಸ್ ಪಡೆಯುವವರೆಗೆ ನಮ್ಮ ಶಾಸಕರು ಯಾವುದೇ ಸಮಿತಿ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ದೂರವಿಟ್ಟು ಹೋರಾಟ
ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 7ರಿಂದ ಬಿಜೆಪಿ ಜನಾಕ್ರೋಶ ಹೋರಾಟ ನಡೆಸುತ್ತಿದೆ. ಆದರೆ, ಈ ಹೋರಾಟಕ್ಕೆ ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ವನ್ನು ಹೊರಗಿಟ್ಟಿದೆ ಎಂಬ ಮಾತು ಕೇಳಿಬಂದಿದೆ. ಮೊದಲ ಹಂತದಲ್ಲಿ ಹಳೇ ಮೈಸೂರು ಭಾಗದಲ್ಲಿ ಹೋರಾಟ ನಡೆಯಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Mon, 31 March 25