ಕಚೇರಿಗೆ ಅಲೆಯೋದೇ ಬೇಡ: ಈ ಸೈಟ್ನಲ್ಲಿ ಅರ್ಜಿ ಸಲ್ಲಿಸಿದ್ರೆ ಎರಡೇ ದಿನಗಳಲ್ಲಿ ಸಿಗುತ್ತೆ ಇ ಖಾತಾ!
ಇನ್ಮುಂದೆ ಇ-ಖಾತಾ ಪಡೆಯುವವರು ಕಚೇರಿಗೆ ಅಲೆಯುವುದು ಬೇಕಾಗಿಲ್ಲ. ಏಕೆಂದರೆ ಈ ಸೈಟ್ನಲ್ಲಿ ಅರ್ಜಿ ಸಲ್ಲಿಸಿದರೆ ಎರಡೇ ದಿನಗಲ್ಲಿ ಇ ಖಾತಾ ಸಿಗಲಿದೆ. ಆ ಮೂಲಕ ಇ-ಖಾತಾವನ್ನು ಅರ್ಜಿದಾರರಿಗೆ ತ್ವರಿತವಾಗಿ ಒದಗಿಸಲು ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಮಾರ್ಚ್ 31: ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಮಾರಾಟ, ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಇ-ಖಾತಾವನ್ನು (E-khata) ಕಡ್ಡಾಯಗೊಳಿಸಲಾಗಿದೆ. ಇ-ಖಾತಾ ಪಡೆಯಲು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅವಕಾಶ ನೀಡಲಾಗಿದೆ. ಜನರಿಗೆ ಇ-ಖಾತಾ ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಕೆಲ ಸಮಸ್ಯೆಗಳಿಂದ ಇ-ಖಾತಾ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಬಿಬಿಎಂಪಿ (BBMP) ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಅರ್ಜಿ ಸಲ್ಲಿಸಿದ ಎರಡು ದಿನಗಳಲ್ಲಿ ಇ-ಖಾತಾವನ್ನು ಪಡೆಯಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು ಅರ್ಜಿ ಸಲ್ಲಿಸಿದ ಎರಡು ದಿನಗಳಲ್ಲಿ ತಮ್ಮ ಅಂತಿಮ ಇ-ಖಾತಾವನ್ನು ಪಡೆಯಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಅರ್ಜಿದಾರರು ತಮ್ಮ ಮಾಹಿತಿಯನ್ನು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ bbmpeaasthi.karnataka.gov.in ನಲ್ಲಿ ಸಲ್ಲಿಸಬೇಕು. ಆ ಮೂಲಕ ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಮತ್ತು ಕೇಸ್ ವರ್ಕರ್‌ಗಳು ನಿಗದಿತ ಸಮಯದೊಳಗೆ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತಕ್ರಮಕೈಗೊಳ್ಳುತ್ತಾರೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನೂ ಮುಗಿಯದ ಇ ಖಾತಾ ಸಂಕಷ್ಟ: ಗೊಂದಲ ಬಗೆಹರಿಸಲು ಬಿಬಿಎಂಪಿ ಸರ್ಕಸ್
ಸದ್ಯ ಇದುವರೆಗೆ ಸ್ವೀಕರಿಸಲಾದ ಸುಮಾರು 2.9 ಲಕ್ಷ ಅರ್ಜಿಗಳಲ್ಲಿ ಈಗಾಗಲೇ 2.7 ಲಕ್ಷ ಇ-ಖಾತಾಗಳನ್ನು ನೀಡಲಾಗಿದೆ. ಎಲ್ಲಾ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳು ಅರ್ಜಿಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು ಸಜ್ಜಾಗಿವೆ. ಬಾಕಿ ಇರುವ ಅರ್ಜಿಗಳನ್ನು ಒಂದು ದಿನದೊಳಗೆ ಪರಿಹರಿಸಲಾಗುತ್ತದೆ. ದಿನದಿಂದ ದಿನಕ್ಕೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂದು ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.
ಜನರು ಇ-ಖಾತಾವನ್ನು ಸರಾಗವಾಗಿ ಪಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳು ಮತ್ತು 64 ಸಹಾಯಕ ಕಂದಾಯ ಅಧಿಕಾರಿಗಳೊಂದಿಗೆ ಪ್ರತಿದಿನ ವರ್ಚುವಲ್ ಸಭೆಗಳನ್ನು ಮಾಡಲಾಗುತ್ತಿದೆ. ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್
ಇ-ಖಾತಾ ನಿರೀಕ್ಷೆಯಲ್ಲಿ ಇದ್ದವರಿಗೆ ಇತ್ತೀಚೆಗೆ ಸರ್ಕಾರ ಸಿಹಿ ಸುದ್ದಿ ನೀಡಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಇ-ಖಾತೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅಸ್ತು ಎಂದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Mon, 31 March 25