
ಬೆಂಗಳೂರು, ಜೂನ್ 12: ಆರ್‌ಸಿಬಿ ಐಪಿಎಲ್ ಟ್ರೋಫಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ವಿಚಾರವಾಗಿ ಇದೀಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕಾಲ್ತುಳಿತ ಸಂದರ್ಭದಲ್ಲಿ ಮಕ್ಕಳಿಗೂ ಹಾನಿಯಾಗಿರುವ ಶಂಕೆ ಇದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ಆಯೋಗ ತಿಳಿಸಿದೆ. ಅಷ್ಟೇ ಅಲ್ಲದೆ, ಎಷ್ಟು ಮಕ್ಕಳಿಗೆ ತೊಂದರೆಯಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿಗೆ ಪತ್ರ ಬರೆದಿದೆ.
ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಸಿಐಡಿಗೆ ಪತ್ರ ಬರೆದಿದ್ದು, ವಿವರ ಒದಗಿಸುವಂತೆ ಕೋರಿದ್ದಾರೆ.
‘ರಾಜ್ಯದ ಆರ್‌ಸಿಬಿ ತಂಡವು ಐಪಿಎಲ್ ಕ್ರಿಕೇಟ್ ಪಂದ್ಯಾವಳಿಯನ್ನು ಗೆದ್ದಿದ್ದರಿಂದ ತಂಡವನ್ನು ರಾಜ್ಯಕ್ಕೆ ಸ್ವಾಗತಿಸಿ, ಅಭಿನಂದಿಸಲು ಬೆಂಗಳೂರಿನ ಕ್ರಿಕೆಟ್ ಅಕಾಡೆಮಿಯು ಕಾರ್ಯಕ್ರಮವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ಈ ಅಭಿನಂದನಾ ಸಮಾರಂಭವನ್ನು ವೀಕ್ಷಿಸಲು ಬೆಂಗಳೂರಿನ ಹಾಗೂ ಇತರ ಜಿಲ್ಲೆಗಳಿಂದ ಸಾಕಷ್ಟು ಸಾರ್ವಜನಿಕರು ಭಾಗವಹಿಸಿದ್ದರು. ಇದರಲ್ಲಿ ಮಕ್ಕಳೂ ಸಹ ಇದ್ದರು ಎಂಬ ಅಂಶವು ಆಯೋಗದ ಗಮನಕ್ಕೆ ಬಂದಿರುತ್ತದೆ. ಈ ಸಮಾರಂಭ ನಡೆಯುವ ಮೊದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಕೆಲವು ದ್ವಾರಗಳ ಮುಂದೆ ಜನ ಸಂಖ್ಯೆಯ ಒತ್ತಡವು ಹೆಚ್ಚಾಗಿದ್ದು, ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ವೈಪಲ್ಯ ಉಂಟಾಗಿದ್ದರಿಂದ 11 ಜನರು ಕಾಲ್ತುಳಿತಕ್ಕೆ ಒಳಗಾಗಿ ಸಾವಿಗೀಡಾಗಿರುವುದು ಈಗಾಗಲೇ ಸುದ್ದಿ ಮಾಧ್ಯಮದಲ್ಲಿ ವರದಿಯಾಗಿದ್ದು, ಈ ಬಗ್ಗೆ ಸರ್ಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಈ ಅವಘಡದಲ್ಲಿ ಮಕ್ಕಳಿಗೂ ಸಹ ತೊಂದರ ಉಂಟಾಗಿರುವ ಬಗ್ಗೆ ಆಯೋಗಕ್ಕೆ ಮಾಹಿತಿಯನ್ನು ಸಾರ್ವಜನಿಕರು ಒದಗಿಸಿರುತ್ತಾರೆ. ಈ ಅಂಶವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಇದುವರೆವಿಗೂ ಮಕ್ಕಳಿಗೆ ಉಂಟಾದ ತೊಂದರೆಯ ವಿವರಗಳು ನಿಖರವಾಗಿ ತಿಳಿದು ಬಂದಿರುವುದಿಲ್ಲ’ ಎಂದು ಮಕ್ಕಳಹಕ್ಕುಗಳ ಆಯೋಗದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಂದುವರಿದು, ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯನ್ನು ವೀಕ್ಷಿಸಲು ಬಂದಿದ್ದ ಸಾರ್ವಜನಿಕರು ಹಾಗೂ ಅದರಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಕಾಲ್ತುಳಿತದಿಂದ ಉಂಟಾದ ಮತ್ತು ಇತರ ಸಮಸ್ಯೆಗಳ ಕುರಿತು ಮಾಹಿತಿಯನ್ನು ಹಾಗೂ ಎಷ್ಟು ಮಕ್ಕಳು ಈ ಅವಘಡಕ್ಕೆ ಒಳಗಾಗಿದ್ದಾರೆ ಎಂಬುದ ಬಗ್ಗೆ ಮಾಹಿತಿಯನ್ನು ಆಯೋಗಕ್ಕೆ ಕೂಡಲೇ ಒದಗಿಸುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಆರ್‌ಸಿಬಿ ಮಾರಾಟವಾದರೆ ಅದರ ಮೌಲ್ಯ ಎಷ್ಟು ಬಿಲಿಯನ್ ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ
ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಸುಮಾರು 40 ಜನ ಗಾಯಗೊಂಡಿದ್ದರು. ಘಟನೆಯು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯವಾಗಿಯೂ ಸದ್ದು ಮಾಡಿತ್ತು.