Gruha Lakshmi scheme: ಕೊನೆಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಬಹು ನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ದಿನಾಂಕ ಕೊನೆಗೂ ಪ್ರಕಟವಾಗಿದೆ.
ಬೆಂಗಳೂರು: ಪ್ರತಿ ಮನೆ ಯಜಮಾನಿಗೆ 2000 ನೀಡುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಗೆ(Gruha Lakshmi scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅಂತೂ ಇಂತೂ ಮುಹೂರ್ತ ಕೂಡಿಬಂದಿದೆ. ಇದೇ ಜುಲೈ 19 ರಂದು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸಂಜೆ 5.30ಕ್ಕೆ ಗೃಹ ಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಅದೇ ದಿನದಿಂದ ಫಲಾನುಭವಿಯಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಆಗಸ್ಟ್ 16 ಅಥವಾ 17ರಂದು ಯಜಮಾನಿ ಖಾತೆಗೆ 2000 ರೂ. ಹಣ ಹಾಕುತ್ತೇವೆ ಎಂದು ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮನೆಯೊಡತಿಗೆ ಮಾಸಿಕ ಎರಡು ಸಾವಿರ ರೂ ಭತ್ಯೆ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರಿಂದ ಜುಲೈ 17 ಅಥವಾ 19ರಂದು ಚಾಲನೆ ಕೊಡಿಸುವ ಚಿಂತನೆಗಳು ನಡೆದಿದ್ದವು. ಈ ಸಂಬಂಧ ಸಿದ್ದರಾಮಯ್ಯನವರು ಸೋನಿಯಾ ಗಾಂಧಿಯವರಿಗೆ ಪತ್ರವನ್ನು ಬರೆದಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಒಂದು ವೇಳೆ ರಾಷ್ಟ್ರೀಯ ನಾಯಕರ ಲಭ್ಯತೆಯಿಲ್ಲದಿದ್ದರೆ ಸಿದ್ದರಾಮಯ್ಯನವರೇ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದರು. ಇದೀಗ ರಾಷ್ಟ್ರೀಯ ನಾಯಕರು ಲಭ್ಯ ಇಲ್ಲದ ಕಾರಣ ಸಿದ್ದರಾಮಯ್ಯನವರೇ ಜುಲೈ 19ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇನ್ನು ಈ ಯೋಜನೆಗೆ ಯಾರು ಅರ್ಹರು? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಎನ್ನುವ ಮಾಹಿತಿಯನ್ನು ಈಗಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ವಿವರವಾಗಿ ಹೇಳಿದ್ದಾರೆ.
ಈ ಯೋಜನೆಗೆ ಯಾರು ಅರ್ಹರು?
ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಫಲಾನುಭವಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಾಗಿರತಕ್ಕದ್ದಲ್ಲ. ರೇಷನ್ ಕಾರ್ಡ್ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೋಂದಣಿ ಸ್ಥಳದ ವಿವರ ಎಸ್ಎಂಎಸ್ ಮೂಲಕ ರವಾನೆ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ವನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಗೊಂದಲ ಇದ್ದರೆ ಸಹಾಯವಾಣಿಗೆ ಕರೆ ಮಾಡಿ
ಫಲಾನುಭವಿಯು ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಗೆ 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು. ನಿಗದಿಪಡಿಸಿದ ದಿನಾಂಕದಂದು ನೋಂದಣಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.