ವರ್ಗಾವಣೆ ದಂಧೆ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ ನಿವೃತ್ತಿ ಯಾವಾಗ: ಛಲವಾದಿ ನಾರಾಯಣಸ್ವಾಮಿ
ವರ್ಗಾವಣೆ ದಂಧೆ ಸಾಬೀತುಪಡಿಸಿದರೆ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಎಂದಿದ್ದರು. ಪೊಲೀಸ್ ವರ್ಗಾವಣೆ ಪಟ್ಟಿಯಿಂದ ಸಿಎಂ ಸುಳ್ಳು ಹೇಳಿದ್ದೆಂದು ಗೊತ್ತಾಗಿದೆ. ಹಾಗಾದ್ರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು, ನವೆಂಬರ್ 18: ವರ್ಗಾವಣೆ ದಂಧೆ ಸಾಬೀತುಪಡಿಸಿದರೆ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಎಂದಿದ್ದರು. ಪೊಲೀಸ್ ವರ್ಗಾವಣೆ ಪಟ್ಟಿಯಿಂದ ಸಿಎಂ ಸುಳ್ಳು ಹೇಳಿದ್ದೆಂದು ಗೊತ್ತಾಗಿದೆ. ಹಾಗಾದ್ರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಸಿಎಂ ಸಿದ್ದರಾಮಯ್ಯ ಹೇಳಬೇಕು, ಯಾವಾಗ ನಿವೃತ್ತಿ ಆಗ್ತೀನೆಂದು. ಸಿದ್ದರಾಮಯ್ಯ ಇನ್ನುಂದೆ ಸುಳ್ಳುರಾಮಯ್ಯ ಎಂದು ಕಿಡಿಕಾರಿದ್ದಾರೆ.
ಸ್ಪೀಕರ್ ಕುರ್ಚಿಯನ್ನು ಜಮೀರ್ ತಾಲಿಬಾನ್ ಮಾಡಲು ಹೊರಟಿದ್ದಾರೆ. ಮುಸ್ಲಿಮರಿಗೆ ಸ್ಥಾನ ಕೊಟ್ಟಿದ್ದೇವೆ, ಬಿಜೆಪಿ ಅವರು ನಮಸ್ಕರಿಸ್ತಾರೆಂದು ಹೇಳಿದ್ದಾರೆ. ಇದಕ್ಕಿಂತ ಕೆಟ್ಟ ಸಂಸ್ಕೃತಿ ಇಲ್ಲ, ಯಾವ ಕಾಂಗ್ರೆಸ್ಸಿಗರು ಇದನ್ನು ಖಂಡಿಸಿಲ್ಲ. ಕ್ಷಮೆ ಕೇಳಬೇಕು, ಇಲ್ಲವೇ ಜಮೀರ್ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ನೇಮಕಾತಿ ಹಗರಣದ ಕಿಂಗ್ ಪಿನ್ ಪ್ರಿಯಾಂಕ್ ಎಂದ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ
ಸ್ಪೀಕರ್ ಸ್ಥಾನ ಬಗ್ಗೆ ಸಚಿವ ಜಮೀರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಮಾತನಾಡಿ, ಈ ವಿಚಾರವನ್ನು ಅವರ ಪಕ್ಷದವರು ಸಹಿಸಬಹುದು, ನಾವು ಸಹಿಸಲ್ಲ. ಬೆಳಗಾವಿಯ ಅಧಿವೇಶನದಲ್ಲಿ ಆ ವಿಕೆಟ್ ಉದುರಲೇಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪರಿಣಾಮಕಾರಿಯಾಗಿ ಎದುರಿಸಬೇಕು. ಯಾರು ಮುಖ್ಯಮಂತ್ರಿ ಅಂತಾ ಅವರಲ್ಲೇ ಗೊಂದಲ ಶುರುವಾಗಿದೆ. ಜನ ವಿರೋಧಿ ದುಷ್ಟ ಸರ್ಕಾರವನ್ನು ಬಯಲಿಗೆಳೆಯಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊಟ್ಟು ಅಧಿಕಾರ ಪಡೆಯೋದು ಕಾಂಗ್ರೆಸ್ ಸಂಸ್ಕೃತಿ: ಸಚಿವ ಪ್ರಿಯಾಂಕ್ ಖರ್ಗೆಗೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು
ಬಿಜೆಪಿ ವಿರುದ್ಧ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನೇಮಕಾತಿ ಹಗರಣದ ಕಿಂಗ್ ಪಿನ್ ಪ್ರಿಯಾಂಕ್. ಪ್ರಿಯಾಂಕ್ ತಲೆಯಲ್ಲಿ ಏನೂ ಇಲ್ಲ, ಅದಕ್ಕೆ ಹೀಗೆ ಮಾತಾಡೋದು ಎಂದು ಕಿಡಿಕಾರಿದ್ದಾರೆ.
ಸರ್ಕಾರ ಕೆಲಸ ಮಾಡದಿದ್ದರೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ: ಆರ್.ಅಶೋಕ್
‘ಬಿಜೆಪಿ ಶಾಸಕರು ಎದ್ದುನಿಂತು ಸ್ಪೀಕರ್ಗೆ ನಮಸ್ಕಾರ ಮಾಡ್ತಾರೆ’ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಆರ್.ಅಶೋಕ್ ತಿರುಗೇಟು ನೀಡಿದ್ದು, ನಾವು ಸ್ಪೀಕರ್ ಸ್ಥಾನಕ್ಕೆ ಗೌರವವನ್ನು ಕೊಡುತ್ತೇವೆ. ಈ ರೀತಿಯ ಮತೀಯ ವಿಚಾರಗಳ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ನವರದ್ದು ವಂಶ ಪಾರಂಪರ್ಯ ರಾಜಕಾರಣ. ತಾತ, ಮಗ, ಮೊಮ್ಮಗ ಹೀಗೆ 4 ತಲೆಮಾರುಗಳ ರಾಜಕಾರಣ. ಸರ್ಕಾರ ಕೆಲಸ ಮಾಡದಿದ್ದರೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಸರಿದಾರಿಗೆ ಬಾರದೆ ಹೋದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.