ಅಥಣಿ: ನೆರೆ ಸಂತ್ರಸ್ತರ ಪರಿಹಾರಕ್ಕೆಂದು ಗೋದಾಮಿನಲ್ಲಿ ಸಂಗ್ರಹಿಸಿಟಿದ್ದ ಕಿಟ್ ಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲಿ, ಹೆಗ್ಗಣಗಳ ಪಾಲಾಗಿವೆ. ಸಂಗ್ರಹಿಸಿದ್ದ ಆಹಾರ ಧಾನ್ಯಗಳನ್ನು ಇಲಿ, ಹೆಗ್ಗಣಗಳು ಹಾಳು ಮಾಡಿವೆ.
ಕೃಷ್ಣಾ ನದಿಯಿಂದ ಪ್ರವಾಹಕ್ಕೆ ತುತ್ತಾಗಿದ್ದ ಸಂತ್ರಸ್ತರ ನೆರೆವಿಗಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಪಿಕೆಪಿಎಸ್ ಗೋದಾಮಿನಲ್ಲಿ ದಾನಿಗಳು ಹಾಗೂ ಸರ್ಕಾರದಿಂದ ಬಂದಿದ್ದ ಆಹಾರ ಧಾನ್ಯಗಳ ಕಿಟ್ ಗಳನ್ನು ಸಂಗ್ರಹಿಸಿಡಲಾಗಿತ್ತು. ಒಂದು ಕಿಟ್ ನಲ್ಲಿ ಸುಮಾರು 10 ಕೆಜಿ ಅಕ್ಕಿ, 1 ಕೆಜಿ ತೊಗರಿಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಪಾಮ್ ಎಣ್ಣೆ, 1 ಕೆಜಿ ಆಯೋಡಿನ್ ಉಪ್ಪು ಸೇರಿದಂತಹ 300 ಹೆಚ್ಚು ಕಿಟ್ ಗಳು ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲಿ, ಹೆಗ್ಗಣಗಳ ಪಾಲಾಗಿವೆ. ಇನ್ನೂ ಹಲವು ಕಡೆಗಳಲ್ಲಿ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಪಾಲಾಗಿವೆ.
ಹಲ್ಯಾಳ ಸೇರಿದಂತೆ ಸುತ್ತ ಮುತ್ತಲಿನ ಹಲವು ಗ್ರಾಮಗಳಲ್ಲಿ ಈ ರೀತಿಯ ಪರಿಸ್ಥಿತಿ ಉಂಟಾಗಿದ್ದು, ಡಿಸಿಎಂ ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.