ರಾಜ್ಯದಲ್ಲಿ ನಡೀತಿರೋ ಎರಡು ಕ್ಷೇತ್ರಗಳ ಉಪಚುನಾವಣೆ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ಇಂದು ಮತದನಾ ನಡೆಯಲಿದ್ದು, ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿರೋ ಅಭ್ಯರ್ಥಿಗಳ ಹಣೆಬರಹವನ್ನ ಮತದಾರ ನಿರ್ಧರಿಸಲಿದ್ದಾನೆ. ಮತದಾನಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿರೋ ಈ ಹೊತ್ತಲ್ಲಿ, ಅಂತಿಮ ಕ್ಷಣದವರೆಗೂ ನಾನಾ ಕಸರತ್ತುಗಳು ನಡೆದ್ವು.
ತಿಂಗಳು ಗಟಗ್ಟಲೇ ಅಬ್ಬರದ ಪ್ರಚಾರ.. ಕುರುಕ್ಷೇತ್ರ ಕದನ ಗೆಲ್ಲಲು ಅರಿಭಯಂಕರ ಕಸರತ್ತು.. ತಂತ್ರಕ್ಕೆ ತಂತ್ರ.. ಏಟಿಗೆ ಏಟು.. ದಾಳಿಗೆ ಪ್ರತಿದಾಳಿ.. ಇಂಥಾ ಹೋರಾಟಗಳೆಲ್ಲ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ನಿನ್ನೆ ನಡೆದ ಕತ್ತಲ ರಾತ್ರಿಯ ಆಟ.. ಹೋರಾಟಕ್ಕೆ ಇಂದು ಅಂತಿಮ ಮುದ್ರೆ ಬೀಳಲಿದೆ.
ಮೂರೂ ಪಕ್ಷಗಳ ಅಭ್ಯರ್ಥಿಗಳ ಹಣೆ ಬರಹ ನಿರ್ಧಾರಕ್ಕೆ ಕೌಂಟ್ಡೌನ್! ನಿಜ, ರಾಜ ರಾಜೇಶ್ವರಿ ನಗರ ಶಿರಾ ಈ ಎರಡು ಕ್ಷೇತ್ರಕ್ಕೆ ಚುನಾವಣೆ ನಡೀತಿದೆ. ಬಿಜೆಪಿಗೆ ಇದು ಪ್ರತಿಷ್ಟೆ ಯಾದ್ರೆ, ಕಾಂಗ್ರೆಸ್ಗೆ ಅಸ್ಥಿತ್ವದ ಹೋರಾಟ. ಇನ್ನು ಜೆಡಿಎಸ್ಗೆ ಅಳಿವು ಉಳಿವನ್ನ ನಿರ್ಧರಿಸೋ ಚುನಾವಣೆ. ಎರಡೇ ಕ್ಷೇತ್ರ ಆದ್ರೂ, ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗೆ, ಊಹಿಸೋಕೂ ಆಗದಂಥಾ ಬೆಳವಣಿಗೆಗೆ ಸಾಕ್ಷಿಯಾಗೋ ಎಲೆಕ್ಷನ್. ಇಂತಾ ಕುರುಕ್ಷೇತ್ರದ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲಹೊತ್ತಲ್ಲೇ, ಎರಡೂ ಕ್ಷೇತ್ರದ ಅಭ್ಯರ್ಥಿಗಳ ಹಣೆ ಬರಹವನ್ನ ನಿರ್ಧರಿಸೋಕೆ ಮತದಾರರೂ ರೆಡಿಯಾಗಿದ್ದಾರೆ.
ಮತದಾರರನ್ನ ಸೆಳೆಯಲು ಮನೆ ಮನೆ ಮತಬೇಟೆ! ಯೆಸ್, ಇವತ್ತು ಮತದಾನ ನಡೆಯೋ ಹಿನ್ನೆಲೆಯಲ್ಲಿ ಮೊನ್ನೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿತ್ತು. ಹೀಗಾಗಿ ನಿನ್ನೆ ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸಿದ್ರು.
ಅದ್ರಲ್ಲೂ ಆರ್.ಆರ್,ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿ ನಗರ ಸೇರಿದಂತೆ ಹಲವೆಡೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಸಹ ಮತದಾರರ ಮನೆಗೆ ತೆರಳಿ, ಮತಯಾಚಿಸಿದ್ರು. ಬಳಿಕ ಬೆಂಗಳೂರಿನ ವಿಜಯನಗರದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದ್ರು. ಅಲ್ಲಿಗೆ ಪ್ರಚಾರ, ಮನವೊಲಿಕೆ ಎಲ್ಲವೂ ಮುಗಿದಿದೆ. ಆದ್ರೆ, ಆರ್.ಆರ್.ನಗರದಲ್ಲಿ ಅಭ್ಯರ್ಥಿಗಳ ಬಲಾ ಬಲವೇ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ. ಹಾಗಿದ್ರೆ ಮುನಿರತ್ನಗೆ ಇರೋ ಬಲವೇನು.. ಕುಸಮಾಗೆ ಇರೋ ಶಕ್ತಿ ಏನು.. ಹಾಗೇ ತನ್ನದೇ ಆದ ಫೈಟ್ ನೀಡ್ತಿರೋ ಜೆಡಿಎಸ್ ಪಾತ್ರವೇನು ಅದನ್ನ ಇಲ್ಲಿ ಓದಿ.
ಮುನಿರತ್ನಗೆ ಅಳಿವು ಉಳಿವಿನ ಚುನಾವಣೆ! ಅಂದಹಾಗೆ ಆರ್.ಆರ್.ನಗರ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ನಿಂದ ಎರಡು ಬಾರಿ ಗೆದ್ದಿರೋ ಮುನಿರತ್ನ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಆದ್ರೆ, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಸೇರಿರೋ ಮುನಿರತ್ನ ಈ ಸಲ ಗೆದ್ರೆ ಮಂತ್ರಿ ಸ್ಥಾನ, ಸೋತ್ರೆ ಅತಂತ್ರರಾಗಲಿದ್ದಾರೆ. ಅಷ್ಟಕ್ಕೂ ಕ್ಷೇತ್ರದಲ್ಲಿ ಸ್ಲಂನಲ್ಲಿ ವಾಸಿಸೋ ಮತದಾರರ ಹಾಗೂ ತಮಿಳರ ಮತಗಳನ್ನೇ ಮುನಿರತ್ನ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಲಕ್ಷ್ಮೀ ದೇವಿನಗರ, ಜೆಪಿ ಪಾರ್ಕ್, ಜಾಲಹಳ್ಳಿ ವಾರ್ಡ್ಗಳಲ್ಲಿ ಮುನಿರತ್ನಗೆ ಬಲ ನೀಡೋ ಏರಿಯಾಗಳಾಗಿದ್ರೆ, ಆರ್.ಆರ್.ನಗರ, ಕೊಟ್ಟಿಗೆ ಪಾಳ್ಯದಲ್ಲಿ 50-50 ಅನ್ನೋ ಪರಿಸ್ಥಿತಿ ಇದೆ.
ಇದಿಷ್ಟು ಮುನಿರತ್ನರ ಪ್ಲಸ್ ಅಂಡ್ ಮೈನಸ್ ಆದ್ರೆ, ಕಾಂಗ್ರೆಸ್ನಲ್ಲಿಯೂ ಭಾರಿ ಲೆಕ್ಕಾಚಾರ ಇದೆ. ಯಾಕಂದ್ರೆ ಆರ್.ಆರ್.ನಗರದಲ್ಲಿ ಕುಸುಮಾ ಅಭ್ಯರ್ಥಿಯಾಗಿದ್ರೂ, ಇದು ಡಿ.ಕೆ.ಶಿವಕುಮಾರ್ಗೆ ಪ್ರತಿಷ್ಠೆ, ಅಸ್ತಿತ್ವ ಎಲ್ಲವೂ ಆಗಿದೆ. ಯಾಕಂದ್ರೆ,
ಡಿಕೆಶಿಗೆ ಪ್ರತಿಷ್ಠೆಯ ಚುನಾವಣೆ! ಆಗಲೇ ಹೇಳಿದಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಸ್ಪರ್ಧೆ ಮಾಡಿದ್ರೂ, ಇದು ಡಿಕೆಶಿ ಚುನಾವಣೆ ಅಂತಲೇ ಬಿಂಬಿತವಾಗಿದ್ದು, ಡಿಕೆಶಿ ಕೂಡಾ ಇದನ್ನ ತುಂಬಾನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಯಾಕಂದ್ರೆ, ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ್ಮೇಲೆ ನಡೀತಿರೋ ಮೊದಲ ಎಲೆಕ್ಷನ್ ಇದಾಗಿದೆ. ಒಂದು ವೇಳೆ ಕುಸುಮಾ ಗೆದ್ರೆ ಹೈಕಮಾಂಡ್ ಬಳಿ ಉತ್ತಮ ಸಂದೇಶ ರವಾನೆಯಾಗಲಿದೆ. ಒಂದು ವೇಳೆ ಸೋತ್ರೆ ಸೋತ್ರೆ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಿಸೋಕೆ ಆಡಳಿತ ಪಕ್ಷಕ್ಕೆ ಟೀಕಾಸ್ತ್ರ ಸಿಕ್ಕಂತಾಗುತ್ತದೆ. ಇಂತಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜ್ಞಾನ ಭಾರತಿ, ಲಗ್ಗೆರೆ ಯಶವಂತಪುರ ವಾರ್ಡ್ನಲ್ಲಿ ಹೆಚ್ಚು ಪ್ರಭಾವ ಹೊಂದಿದ್ದು, ವಕ್ಕಲಿಗ, ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತಗಳನ್ನ ಕಾಂಗ್ರೆಸ್ ನೆಚ್ಚಿಕೊಂಡಿದೆ.
ಇನ್ನೊಂದೆಡೆ ಶಿರಾದಲ್ಲಿ ಕಾಂಗ್ರೆಸ್ನಿಂದ ಟಿ.ಬಿ.ಜಯಚಂದ್ರ, ಬಿಜೆಪಿಯಿಂದ ರಾಜೇಶ್ಗೌಡ ಹಾಗೂ ಜೆಡಿಎಸ್ನಿಂದ ದಿವಂಗತ ಸತ್ಯನಾರಾಯಣಅವರ ಪತ್ನಿ ಅಮ್ಮಾಜಮ್ಮಾ ಅಖಾಡದಲ್ಲಿದ್ದಾರೆ. ಆದ್ರೆ, ಜೆಡಿಎಸ್ ಕಾಂಗ್ರೆಸ್ ನಡುವೆ ಫೈಟ್ ಏರ್ಪಟ್ಟಿದ್ದು, ಅಖಾಡಕ್ಕೆ ವಿಜಯೇಂದ್ರ ಎಂಟ್ರಿ ಬಳಿಕ ರಣರಂಗಣದ ಚಿತ್ರಣ ಬದಲಾಗಿದೆ ಅನ್ನೋ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ನಡೀತಿವೆ. ಅಲ್ದೆ ಮದಲೂರು ಕೆರೆಯೇ ಈ ಬಾರಿ ಚುನಾವಣೆಯ ಕೇಂದ್ರ ಬಿಂದುವಾಗಿದೆ.
ಒಟ್ಟಾರೆ ಯಾರ ಬಲ ಏನೇ ಇದ್ರೂ, ಯಾರ ಮೈನಸ್ ಏನೇ ಇದ್ರೂ ಎಲ್ಲವನ್ನೂ ಅಧಿಕೃತವಾಗಿ ನಿರ್ಧರಿಸೋದು ಕ್ಷೇತ್ರದ ಮತದಾರರು.. ಮತದಾರ ಯಾರಿಗೆ ಬಲ ತುಂಬಿ ಮೇಲೆ ಎತ್ತುತ್ತಾನೆ. ಯಾರನ್ನ ಕೆಳಗೆ ಬೀಳಿಸ್ತಾನೆ ಅನ್ನೋದು ಇಂದು ಡಿಸೈಡ್ ಆಗಲಿದೆ.