ಮಲೆ ಮಹದೇಶ್ವರನಿಗೆ ಮಹಾಮೋಸ: ಸಚಿವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗುತ್ತಿಗೆದಾರರು
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಕಂಡುಬಂದ ಕಳಪೆ ಗುಣಮಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಜ್ರಮಲೆ ಪೀಠೋಪಕರಣ ಕಾಮಗಾರಿಯಲ್ಲಿ ತೇಗದ ಮರದ ಬದಲಿಗೆ ಬಿಳಿ ಮರ ಬಳಸಿದ್ದನ್ನು ಖುದ್ದು ಪರಿಶೀಲಿಸಿದ ಸಚಿವರು, ಭಕ್ತರ ಹಣದಲ್ಲಿ ಇಂತಹ ಕೆಲಸ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಚಾಮರಾಜನಗರ, ಫೆ.24: ರಾಜ್ಯದ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ (Malai Mahadeshwara Hills) ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಕಳಪೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದ ಸಚಿವ ಕೆ. ವೆಂಕಟೇಶ್, ಬೆಟ್ಟದಲ್ಲಿ ಪ್ರಗತಿಯಲ್ಲಿರುವ ತಿರುಪತಿ ಮಾದರಿಯ ಕ್ಯೂ ಲೈನ್ (ಸರತಿ ಸಾಲು) ಬ್ಲಾಕ್ ನಿರ್ಮಾಣ, ಮಾದಪ್ಪನ ಪ್ರತಿಮೆ ಹಾಗೂ ವಜ್ರಮಲೆ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು.
ವಜ್ರಮಲೆಯಲ್ಲಿ ನಡೆಯುತ್ತಿರುವ ಪೀಠೋಪಕರಣಗಳ ಕಾಮಗಾರಿಯನ್ನು ಸಚಿವರು ಸೂಕ್ಷ್ಮವಾಗಿ ಗಮನಿಸಿದಾಗ, ಒಪ್ಪಂದದಂತೆ ತೇಗದ ಮರಗಳನ್ನು ಬಳಸುವ ಬದಲು ಬಿಳಿ ಮರಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇದರಿಂದ ಕೋಪಗೊಂಡ ಸಚಿವರು, “ಭಕ್ತರ ಹಣದಲ್ಲಿ ಇಂತಹ ಕಳಪೆ ಕೆಲಸ ಸಹಿಸುವುದಿಲ್ಲ” ಎಂದು ಕಿಡಿಕಾರಿದರು. ಕೂಡಲೇ ಕಾಮಗಾರಿಯ ಗುಣಮಟ್ಟವನ್ನು ಮರುಪರಿಶೀಲಿಸುವಂತೆ ಮತ್ತು ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್
ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ತಿರುಪತಿ ಮಾದರಿಯ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, ಇಲ್ಲಿ ಶೌಚಾಲಯ, ಕುಡಿಯುವ ನೀರು ಮತ್ತು ಆಸನದ ವ್ಯವಸ್ಥೆ ಇರಲಿದೆ. ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ 90 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ದಾಸೋಹ ಭವನ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬೆಟ್ಟದಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಲು ಖಾಸಗಿ ಏಜೆನ್ಸಿಗಳ ಮೂಲಕ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಒಟ್ಟಾರೆಯಾಗಿ, ಮಾದಪ್ಪನ ಬೆಟ್ಟವನ್ನು ಮಾದರಿ ಯಾತ್ರಾಸ್ಥಳವನ್ನಾಗಿ ಮಾಡಲು ಸರ್ಕಾರ ಮುಂದಾಗಿದ್ದರೂ, ಕಾಮಗಾರಿಗಳಲ್ಲಿ ನಡೆಯುತ್ತಿರುವ ಇಂತಹ ಕಳಪೆ ಕೆಲಸಗಳು ಭಕ್ತರ ಆಕ್ರೋಶಕ್ಕೆ ಕಾರಣವಾಗಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ