ದೇಶ-ವಿದೇಶಗಳಿಗೆ ಹಣ್ಣು, ತರಕಾರಿ, ಹೂವು ರಫ್ತು ಮಾಡುವ ‘ಕೃಷಿ ಕಣಜ’ ಕೋಲಾರಕ್ಕೆ ದೊಡ್ಡ ಸಂಕಷ್ಟ
ಕೋಲಾರ ಜಿಲ್ಲೆಯಲ್ಲಿ ಮಣ್ಣು ಸತ್ವ ಕಳೆದುಕೊಂಡು ವಿಷಮಯವಾಗುತ್ತಿದೆ. ಅತಿಯಾದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ಹಾಗೂ ಒಂದೇ ಬೆಳೆ ಪದ್ಧತಿಯಿಂದ ಕೃಷಿ ಭೂಮಿ ಬಂಜರಾಗುತ್ತಿದೆ. ಇದು ರೈತರ ಆರ್ಥಿಕ ಸ್ಥಿತಿ ಕುಸಿತಕ್ಕೆ ಮತ್ತು ಬೆಳೆಗಳ ಗುಣಮಟ್ಟ ಇಳಿಕೆಗೆ ಕಾರಣವಾಗಿದೆ. ಸಾವಯವ ಕೃಷಿ, ಬೆಳೆ ಬದಲಾವಣೆ, ಮಣ್ಣು ಪರೀಕ್ಷೆ ಮೂಲಕ ಈ ಸಮಸ್ಯೆ ನಿವಾರಿಸಲು ತಜ್ಞರು ಸಲಹೆ ನೀಡಿದ್ದು, ಸರ್ಕಾರ ಕ್ರಮಕ್ಕೆ ರೈತರು ಆಗ್ರಹಿಸಿದ್ದಾರೆ.

ಕೋಲಾರ, ಫೆ.24: ದೇಶ-ವಿದೇಶಗಳಿಗೆ ಹಣ್ಣು, ತರಕಾರಿ ಮತ್ತು ಹೂವುಗಳನ್ನು ರಫ್ತು ಮಾಡಿ ‘ಕೃಷಿ ಕಣಜ’ ಎನಿಸಿಕೊಂಡಿದ್ದ ಕೋಲಾರ ಜಿಲ್ಲೆಯಲ್ಲಿ ಈಗ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಜಿಲ್ಲೆಯ ಮಣ್ಣು ತನ್ನ ಸಹಜ ಸತ್ವವನ್ನು ಕಳೆದುಕೊಂಡು ವಿಷಯುಕ್ತವಾಗುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಇಡೀ ಜಿಲ್ಲೆ ಬಂಜರು ಭೂಮಿಯಾಗಲಿದೆ ಎಂದು ಕೃಷಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕೋಲಾರದ ಸುಮಾರು ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಮಣ್ಣು ಈಗ ಸತ್ವ ಕಳೆದುಕೊಂಡಿದೆ. ರಾಜ್ಯದಲ್ಲೇ ಅತಿ ಹೆಚ್ಚು ಫಲವತ್ತತೆ ಕಳೆದುಕೊಂಡ ಜಿಲ್ಲೆ ಎಂಬ ಹಣೆಪಟ್ಟಿ ಕೋಲಾರಕ್ಕೆ ಅಂಟಿಕೊಂಡಿದೆ.
ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ, ಕ್ರಿಮಿನಾಶಕಗಳ ಸಿಂಪಡಣೆ ಮತ್ತು ವರ್ಷವಿಡೀ ಬೆಳೆ ಪರಿವರ್ತನೆ ಮಾಡದೆ ಒಂದೇ ರೀತಿಯ ಬೆಳೆಗಳನ್ನು ಬೆಳೆಯುತ್ತಿರುವುದು ಮಣ್ಣಿನ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣಿನ ವಿಜ್ಞಾನಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಳೆದ 3-4 ವರ್ಷಗಳಿಂದ ಜಿಲ್ಲೆಯಲ್ಲಿ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ. ಅಕಸ್ಮಾತ್ ಬೆಳೆದರೂ ಅವು ಗುಣಮಟ್ಟದಿಂದ ಕೂಡಿರುತ್ತಿಲ್ಲ ಮತ್ತು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಇದರಿಂದಾಗಿ ರೈತರು ಆರ್ಥಿಕವಾಗಿ ಹೈರಾಣಾಗಿದ್ದಾರೆ.
ಜಿಲ್ಲೆಯ ಅಂತರ್ಜಲವೂ ವಿಷಯುಕ್ತವಾಗಿದ್ದು, ಇಲ್ಲಿ ಬೆಳೆಯುವ ತರಕಾರಿಗಳಲ್ಲಿ ‘ಸತು’ವಿನಂತಹ ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಗ್ರಾಹಕರು ಹಾಗೂ ರೈತರನ್ನು ಆತಂಕಕ್ಕೆ ತಳ್ಳಿದೆ. ಈ ಹಿಂದೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರೇ ಈ ಸಮಸ್ಯೆಗೆ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಮಣ್ಣಿನ ಪರೀಕ್ಷೆಗಳು ಬೇರೆಯದೇ ಸತ್ಯವನ್ನು ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ರೈತ ಮುಖಂಡ ನಾರಾಯಣಗೌಡ ಅವರು, “ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮಣ್ಣಿನ ಸತ್ವ ಮರುಸ್ಥಾಪಿಸಲು ಮತ್ತು ರೈತರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನನ್ನ ಲೈಫ್ ಹೇಗಾಗಿದೆ ಅಂದ್ರೆ: ಒಂದು ಕಡೆ ಅಪ್ಪ ಇಲ್ಲ, ಇನ್ನೊಂದು ಕಡೆ ಅಮ್ಮನಿಗೆ ಅನಾರೋಗ್ಯ, ಕೈಯಲ್ಲಿ ಕೆಲಸ ಇಲ್ಲ
ಈ ಬಗ್ಗೆ ಕೆಲವೊಂದು ಸಲಹೆಗಳನ್ನು ತಜ್ಞರು ಕೆಲವೊಂದು ಸಲಹೆ ನೀಡಿದ್ದಾರೆ. ರಾಸಾಯನಿಕ ಗೊಬ್ಬರ ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಮತ್ತು ಕೊಟ್ಟಿಗೆ ಗೊಬ್ಬರ ಬಳಸಬೇಕು. ಒಂದೇ ಭೂಮಿಯಲ್ಲಿ ಪದೇ ಪದೇ ಒಂದೇ ಬೆಳೆ ಬೆಳೆಯುವ ಬದಲು ಬೆಳೆಗಳನ್ನು ಬದಲಾಯಿಸುತ್ತಿರಬೇಕು. ಪ್ರತಿ ವರ್ಷ ಮಣ್ಣಿನ ಪರೀಕ್ಷೆ ನಡೆಸಿ ಅದಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಮಾತ್ರ ನೀಡಬೇಕು ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
