ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಕಳೆದ 12 ದಿನಗಳಿಂದ ನಿರಂತರವಾಗಿ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಬೃಹತ್ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಪ್ರತಿ ಟನ್ ಕಬ್ಬಿಗೆ 5,500 ನಿಗದಿ ಮಾಡಬೇಕೆಂದು ಪಟ್ಟು ಹಿಡಿದಿದ್ದ ರೈತರು, ಸರ್ಕಾರ ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿ ನಿಗದಿಪಡಿಸಿದ 3,600 ಬೆಲೆಗೆ ತೃಪ್ತಿಗೊಂಡು ಗುರುವಾರ ಸಂಜೆ ಗುರ್ಲಾಪುರದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಬೆಳಗಾವಿ (ನವೆಂಬರ್ 05): ಕಳೆದ 12 ದಿನಗಳಿಂದ ನಿರಂತರವಾಗಿ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಬೃಹತ್ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಪ್ರತಿ ಟನ್ ಕಬ್ಬಿಗೆ 5,500 ನಿಗದಿ ಮಾಡಬೇಕೆಂದು ಪಟ್ಟು ಹಿಡಿದಿದ್ದ ರೈತರು, ಸರ್ಕಾರ ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿ ನಿಗದಿಪಡಿಸಿದ 3,600 ಬೆಲೆಗೆ ತೃಪ್ತಿಗೊಂಡು ಗುರುವಾರ ಸಂಜೆ ಗುರ್ಲಾಪುರದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ರೈತ ಮುಖಂಡ ಚೂನಪ್ಪ ಪೂಜಾರಿ, ಗುರ್ಲಾಪುರದಲ್ಲಿ ಕೂಡ ಹೋರಾಟ ಹಿಂಪಡೆದಿದ್ದು, ಸಕ್ಕರೆ ಕಾರ್ಖಾನೆಗಳು ನಾಳೆಯಿಂದ (ನವೆಂಬರ್ 6) ಆರಂಭ ಆಗುತ್ತವೆ. ಹೀಗಾಗಿ ಯಾರು ಕೂಡ ಕಾರ್ಖಾನೆ ಆರಂಭಕ್ಕೆ ಅಡ್ಡಿ ಮಾಡಬೇಡಿ. ಶುಕ್ರವಾರ ಗುರ್ಲಾಪುರದಲ್ಲಿ ಎಲ್ಲ ರೈತರು ಸೇರಿ ಸಭೆ ಮಾಡ್ತೇವೆ. ನಾವು 3,800 ರೂಪಾಯಿ ಕೊಡಿ ಎಂದು ಕೇಳಿದ್ವಿ. ಸಚಿವ ಸತೀಶ್ ಜಾರಕಿಹೊಳಿ ಅವರು ಮಧ್ಯಸ್ಥಿಕೆ ವಹಿಸಿ 3,600 ದರ ನಿಗದಿ ಮಾಡಿಸಿದ್ದಾರೆ. ದರ ನಿಗದಿ ನಮಗೆ ತೃಪ್ತಿ ತಂದಿದೆ. ಸಕ್ಕರೆ ಮಾರಾಟದ ಮೇಲೂ ನಮಗೆ ಲಾಂಭಾಂಶ ಬರಲಿದೆ. ಮೊದಲ ಹಂತದಲ್ಲಿ ನಮಗೆ ಜಯ ಸಿಕ್ಕಿದೆ. ಆದ್ರೆ, ಸರ್ಕಾರ 1 ಸಾವಿರ ಪ್ರೋತ್ಸಾಹ ಧನ ನೀಡುವವರೆಗೂ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳು ಒಂದು ಸಾವಿರ ಹಣ ಘೋಷಣೆ ಮಾಡಬೇಕು. ಇಲ್ಲವಾದ್ರೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

