ಸಿಎಂ ಕಚೇರಿ ಸಾಮಾಜಿಕ ಮಾಧ್ಯಮ ನಿರ್ವಹಣೆಗೆ ಮಾಡುವ ಖರ್ಚು ಬಹಿರಂಗ: ಇಷ್ಟೊಂದು ಅಗತ್ಯವಿದೆಯೇ ಎಂದ ಆರ್‌ಟಿಐ ಕಾರ್ಯಕರ್ತ
ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಪ್ರತಿ ತಿಂಗಳು ಸಾಮಾಜಿಕ ಮಾಧ್ಯಮ ನಿರ್ವಹಣೆಗೆ ಎಷ್ಟು ಖರ್ಚು ಮಾಡುತ್ತಿದೆ ಎಂಬ ವಿವರ ಬಹಿರಂಗವಾಗಿದೆ. ಸಿಎಂಒ ಕಚೇರಿಯ ಖಾತೆ, ಮುಖ್ಯಮಂತ್ರಿಗಳ ವೈಯಕ್ತಿಕ ಖಾತೆ ನಿರ್ವಹಣೆಗೆ ಮಾಡುವ ಖರ್ಚಿನ ವಿವರ ಬಯಲಾಗಿದ್ದು, ಅಭಿವೃದ್ಧಿಕಾರ್ಯಗಳು ಕುಂಠಿತವಾಗಿರುವ ಈ ಸಂದರ್ಭದಲ್ಲಿ ಇಷ್ಟೊಂದು ಖರ್ಚಿನ ಅಗತ್ಯ ಇದೆಯೇ ಎಂದು ಆರ್‌ಟಿಐ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 2: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ತಿಂಗಳಿಗೆ ಸುಮಾರು 54 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಎಂಬುದು ಆರ್‌ಟಿಐ ಕಾರ್ಯಕರ್ತರು ಸಲ್ಲಿಸಿದ ಅರ್ಜಿಗೆ ದೊರೆತ ಉತ್ತರದಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವಾಗ ಮುಖ್ಯಮಂತ್ರಿ ಕಚೇರಿಯು ಇಷ್ಟೊಂದು ಮೊತ್ತದ ಹಣವನ್ನು ಕೇವಲ ಪ್ರಚಾರಕ್ಕೆ ಬಳಸಿಕೊಂಡಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಣದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಸರ್ಕಾರವು ಗುತ್ತಿಗೆದಾರರ ಬಿಲ್ ಕ್ಲಿಯರ್ ಮಾಡಲು ಹೆಣಗಾಡುತ್ತಿದೆ. ಇಂಥ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಗೆ ಭಾರಿ ವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಆರ್‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದೆ ಎಂದು ಆರ್‌ಟಿಐ ಕಾರ್ಯಕರ್ತ ಮಾರಲಿಂಗಗೌಡ ಮಾಲಿ ಪಾಟೀಲ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಆದರೆ, ಈ ಹಿಂದಿನ ಮುಖ್ಯಮಂತ್ರಿಗಳು ಮಾಡಿದ್ದ ಖರ್ಚಿಗೆ ಹೋಲಿಸಿದರೆ ಇದು ಕಡಿಮೆ ಎಂದು ಸಿಎಂಒ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನ ಮುಖ್ಯಮಂತ್ರಿಗಳು ತಿಂಗಳಿಗೆ 2 ಕೋಟಿ ರೂ.ನಂತೆ ಖರ್ಚು ಮಾಡುತ್ತಿದ್ದರು. ಅದಕ್ಕೆ ಹೋಲಿಸಿದರೆ ಈ ಮೊತ್ತ ತೀರಾ ಕಡಿಮೆ ಎಂದು ಸಿಎಂಒ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಇಂದು ವಿಚಾರಣೆ ಮುಂದುವರಿಕೆ, ಹೈಕೋರ್ಟ್‌ನತ್ತ ಎಲ್ಲರ ಚಿತ್ತ
ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎ) ಆರ್‌ಟಿಐ ಪಾಟೀಲ್‌ಗೆ ನೀಡಿದ ಉತ್ತರದ ಪ್ರಕಾರ, ಸಿಎಂಒ ಕಳೆದ ವರ್ಷ ಅಕ್ಟೋಬರ್ 25 ರಿಂದ 2024ರ ಮಾರ್ಚ್ ರವರೆಗೆ ಸುಮಾರು 3 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸಿಎಂಒ ಪ್ರತಿ ತಿಂಗಳು ಶೇ 18 ಜಿಎಸ್ಟಿ ಸೇರಿದಂತೆ ಸುಮಾರು 53.9 ಲಕ್ಷ ರೂ. ಪಾವತಿಸಿದೆ. ಸುಮಾರು 35 ಜನರ ಸಮರ್ಪಿತ ತಂಡದೊಂದಿಗೆ ಸಿದ್ದರಾಮಯ್ಯ ಅವರ ಖಾತೆಗಳನ್ನು ನಿರ್ವಹಿಸುವ ದಿ ಪಾಲಿಸಿ ಫ್ರಂಟ್ ಕಂಪನಿಗೆ ಪಾವತಿಗಳನ್ನು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ