ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಇಂದು ವಿಚಾರಣೆ ಮುಂದುವರಿಕೆ, ಹೈಕೋರ್ಟ್‌ನತ್ತ ಎಲ್ಲರ ಚಿತ್ತ

ಮುಡಾ ಹಗರಣದಲ್ಲಿ ಕಾಂಗ್ರೆಸ್ ತಳಮಳ, ಆತಂಕ, ಏನಾಗುತ್ತದೆಯೋ ಏನೋ ಎಂಬ ಗೊಂದಲ ಮುಂದುವರಿದಿದೆ. ಪ್ರತಿಭಟನೆ ಮಾಡಿದ್ದಾಗಿದೆ, ರಾಜಭವನ ಚಲೋ ಕೈಗೊಂಡು ಕಹಳೆ ಮೊಳಗಿಸಿದ್ದಾಗಿದೆ. ಇದೀಗ ಕಾನೂನು ಸಮರ ಕುತೂಹಲದ ಘಟ್ಟಕ್ಕೆ ತಲುಪಿದೆ. ಇಂದು ಹೈಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದ್ದು, ಪ್ರಕರಣ ಕುತೂಹಲದ ಘಟ್ಟ ತಲುಪಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಇಂದು ವಿಚಾರಣೆ ಮುಂದುವರಿಕೆ, ಹೈಕೋರ್ಟ್‌ನತ್ತ ಎಲ್ಲರ ಚಿತ್ತ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಇಂದು ವಿಚಾರಣೆ ಮುಂದುವರಿಕೆ, ಹೈಕೋರ್ಟ್‌ನತ್ತ ಎಲ್ಲರ ಚಿತ್ತ
Follow us
| Updated By: ಗಣಪತಿ ಶರ್ಮ

Updated on: Sep 02, 2024 | 6:57 AM

ಬೆಂಗಳೂರು, ಸೆಪ್ಟೆಂಬರ್ 2: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಿಂದ 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದ ಆರೋಪ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದು ಕೋರಿ ಸಿಎಂ ಕಾನೂನು ಸಮರ ನಡೆಸಿದ್ದಾರೆ. ಹೈಕೋರ್ಟ್‌ನಲ್ಲಿ ಬಿರುಸಿನ ವಾದ ಪ್ರತಿವಾದಗಳು ನಡೆಯುತ್ತಿದ್ದು ಈಗಾಗಲೇ 3 ಬಾರಿ ವಿಚಾರಣೆ ಮುಂದೂಡಿಕೆಯಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠದಲ್ಲಿ ಮತ್ತೆ ವಿಚಾರಣೆ ಮುದುವರಿಯಲಿದೆ. ಎಲ್ಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.

ಇಂದೇ ವಿಚಾರಣೆ ಮುಗಿಯುತ್ತಾ?

ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಕಾರ್ಯದರ್ಶಿ ಪರ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರು ವಾದ ಮಂಡಿಸಲಿದ್ದಾರೆ. ಇಂದು ಕೂಡ ವಾದ ಪ್ರತಿವಾದ ಹೈವೋಲ್ಟೇಜ್ ಸೃಷ್ಟಿಸುವ ಸಾಧ್ಯತೆಯಿದೆ. ಆಗಸ್ಟ್ 31ರಂದು ನಡೆದಿದ್ದ ವಿಚಾರಣೆಯಲ್ಲಿ ಎರಡು ಕಡೆಯ ವಕೀಲರು ಹಲವು ಅಂಶಗಳನ್ನು ಮುಂದಿಟ್ಟು ವಾದ ಪ್ರತಿವಾದ ನಡೆಸಿದ್ದರು.

ಸಿದ್ದರಾಮಯ್ಯ ಪರ ವಕೀಲರು ಮಂಡಿಸಿದ್ದ ವಾದಗಳೇನು?

  • ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ವಿವೇಚನೆ ಬಳಸಿಲ್ಲ.
  • ಭ್ರಷ್ಟಾಚಾರ ಕಾಯ್ದೆ ಸೆಕ್ಷನ್ 17ಎ ಅಡಿ ಮಾನದಂಡ ಪಾಲನೆ ಮಾಡಿಲ್ಲ.
  • ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ.
  • ಟಿ.ಜೆ.ಅಬ್ರಹಾಂ ಅರ್ಜಿ ಸಂಬಂಧ ಮಾತ್ರ ಸಿಎಂಗೆ ಶೋಕಾಸ್ ನೋಟಿಸ್, ಉಳಿದ ಇಬ್ಬರ ಅರ್ಜಿದಾರರ ಸಂಬಂಧ ಶೋಕಾಶ್ ನೋಟಿಸ್ ನೀಡಿಲ್ಲ.
  • ಸಚಿವ ಸಂಪುಟ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಿಲ್ಲ

ರಾಜ್ಯಪಾಲರ ಕಾರ್ಯದರ್ಶಿ ಪರ ವಾದಗಳೇನು?

  • ಸೆಕ್ಷನ್ 17(A) ಪ್ರಕಾರ ಮೇಲ್ನೋಟಕ್ಕೆ ಅಪರಾಧ ಅಂಶಗಳನ್ನು ಪರಿಗಣಿಸಬೇಕು.ಈ ಹಂತದಲ್ಲಿ ಶೋಕಾಸ್ ನೋಟಿಸ್ ನೀಡಲೇಬೇಕೆಂಬ ನಿಯಮವಿಲ್ಲ.
  • ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್‌ರಿಂದ ದೂರು ಸಲ್ಲಿಕೆಯಾಗಿದೆ.
  • ಈ ಮೂವರು ಸಿಎಂ ವಿರುದ್ಧ ಒಂದೇ ರೀತಿ ಆರೋಪ ಮುಂದಿಟ್ಟಿದ್ದಾರೆ.
  • ಎಲ್ಲ ಪ್ರಕರಣಗಳಲ್ಲಿಯೂ ಅನುಮತಿ ಕೇಳಬೇಕು ಎಂಬ ನಿಯಮವಿಲ್ಲ.
  • ಹೀಗಾಗಿ ಉಳಿದಿಬ್ಬರ ದೂರಿನಲ್ಲಿ ಶೋಕಾಸ್ ನೋಟಿಸ್ ನೀಡುವ ಅಗತ್ಯವಿಲ್ಲ.
  • ಸಿಎಂ ವಿರುದ್ಧ ಆರೋಪ ಎದುರಾದಾಗ ಸಂಪುಟ ಸಲಹೆ ಒಪ್ಪಲೇಬೇಕೆಂದಿಲ್ಲ.
  • ಆದರೂ ಸಚಿವ ಸಂಪುಟದ ಸಲಹೆಗೆ ರಾಜ್ಯಪಾಲರು ಪರಿಶೀಲಿಸಿ ಉತ್ತರಿಸಿದ್ದಾರೆ.
  • ಡಿಸಿಎಂ ಸಂಪುಟ ಸಭೆ ಅಧ್ಯಕ್ಷತೆ ವಹಿಸಿದ್ದರಿಂದ ಪಕ್ಷಪಾತದ ನಿರ್ಣಯವಾಗಬಹುದು.

ಇಂದು ಸಿಎಂ ಚಾಮುಂಡಿ ಬೆಟ್ಟ ಭೇಟಿ ರದ್ದು

ಇವತ್ತು ಬೆಳಗ್ಗೆ 11ಗಂಟೆಗೆ ಸಿಎಂ ಮೈಸೂರು ಪ್ರವಾಸ ನಿಗದಿಯಾಗಿತ್ತು. ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವ ಯೋಜನೆ ಇತ್ತು. ಆದರೆ ಹೈಕೋರ್ಟ್‌ನಲ್ಲಿಂದು ವಿಚಾರಣೆ ಕಾರಣ, ಪ್ರವಾಸ ರದ್ದು ಮಾಡಿದ್ದಾರೆ. ಮನೆಯಲ್ಲೇ ವಾದ, ಪ್ರತಿವಾದ ಗಮನಿಸಲಿದ್ದು, ಇಂದು ಸಂಜೆ ಮೈಸೂರು ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ನಾಳೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್​ನಲ್ಲಿ ಹೇಗಿತ್ತು ಸಿದ್ದರಾಮಯ್ಯ ಪರ, ವಿರುದ್ಧ ವಕೀಲರ ವಾದ ವೈಖರಿ? ಇಲ್ಲಿದೆ ವಿವರ

ಒಟ್ಟಿನಲ್ಲಿ ರಾಜ್ಯಪಾಲರ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿಯುತ್ತದೆಯೇ ಅಥವಾ ರದ್ದು ಮಾಡುತ್ತದೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವತ್ತೇ ವಿಚಾರಣೆ ಮುಕ್ತಾಯವಾದರೆ ಆದೇಶ ಪ್ರಕಟಿಸುವ ಆಥವಾ ಕಾಯ್ದಿರಿಸುವ ಸಾಧ್ಯತೆಯೂ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ