ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ 1.50 ರೂ. ಕಡಿತಗೊಳಿಸಿದ ಒಕ್ಕೂಟ
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ಶಾಕ್ ನೀಡಿದೆ. ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ 1.50 ರೂ. ಕಡಿತಗೊಳಿಸಿ ಒಕ್ಕೂಟ ಆದೇಶ ಹೊರಡಿಸಿದೆ. ಇದರಿಂದ ಹಾಲು ಉತ್ಪಾದಕರು ಆಕ್ರೋಶಗೊಂಡಿದ್ದಾರೆ.
ಕೊಪ್ಪಳ, ಸೆಪ್ಟೆಂಬರ್ 02: ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಒಕ್ಕೂಟ (RBKMUL) ಹಾಲು (Milk) ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ ಲೀಟರ್ಗೆ 1.50 ರೂ. ಕಡಿತಗೊಳಿಸಿ ಆದೇಶ ಹೊರಡಿಸಿದೆ. ಒಕ್ಕೂಟಕ್ಕೆ ಆರ್ಥಿಕ ನಷ್ಟವಿದೆ, ಹೀಗಾಗಿ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ 1.50 ರೂ. ಕಡಿತಗೊಳಿಸಲಾಗಿದೆ ಎಂದು ಒಕ್ಕೂಟ ನೆಪ ಹೇಳಿದೆ. ದರ ಕಡಿತಗೊಳಿಸಿದ್ದಕ್ಕೆ ನಾಲ್ಕೂ ಜಿಲ್ಲೆಯ ಹಾಲು ಉತ್ಪಾದಕರು ಆಕ್ರೋಶಗೊಂಡಿದ್ದಾರೆ.
ದರ ಕಡಿತಗೊಳಿಸುವುದಕ್ಕಿಂತ ಮುಂಚೆ ಲೀಟರ್ ಹಾಲನ್ನು 30.50 ರೂಪಾಯಿಗೆ ಖರೀದಿಸಲಾಗುತ್ತಿತ್ತು. ಇದೀಗ ಪ್ರತಿ ಲೀಟರ್ 29 ರೂ. ನೀಡಿ ಖರೀದಿಸಲಾಗುತ್ತಿದೆ. ಬೇರೆ ಯಾವುದೇ ಒಕ್ಕೂಟ ರೈತರಿಗೆ ನೀಡುವ ದರವನ್ನು ಇಳಿಕೆ ಮಾಡಿಲ್ಲ. ನಮ್ಮ ಒಕ್ಕೂಟದಲ್ಲಿ ಮಾತ್ರ ಯಾಕೆ ಇಳಿಕೆ ಮಾಡಿದೆ? ಕೂಡಲೆ ದರ ಕಡಿತಗೊಳಿಸಿರುವುದನ್ನು ಹಿಂಪಡೆಯಬೇಕೆಂದು ಹಾಲು ಉತ್ಪಾದಕರು ಆಗ್ರಹಿಸಿದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಶೀಘ್ರದಲ್ಲೇ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ: ಸಚಿವ ಎಸ್ಎಸ್ ಮಲ್ಲಿಕಾರ್ಜುನ
ಒಂದಡೆ ಪಶು ಆಹಾರದ ದರ ನಿರಂತರವಾಗಿ ಏರುತ್ತಿದೆ. ಇನ್ನೊಂದಡೆ ಗ್ರಾಹಕರಿಗೆ ನೀಡುವ ಹಾಲಿನ ದರ ಕೂಡ ಏರುತ್ತಿದೆ. ಆದರೆ ರೈತರಿಗೆ ನೀಡುವ ಹಾಲಿನ ದರ ಮಾತ್ರ ಕಡಿಮೆ ಮಾಡಲಾಗಿದೆ. ಕೂಡಲೇ ದರ ಇಳಿಕೆ ಕೈಬಿಡಬೇಕು, ಮೊದಲಿನ ದರ ನೀಡಬೇಕು. ಕೂಡಲೇ ಕೆಎಂಎಪ್ ಒಕ್ಕೂಟಕ್ಕೆ ಸೂಚನೆ ನೀಡಬೇಕು ಎಂದರು.
ದಿನಿತ್ಯ 2.30 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 1.60 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಮೊಸರು, ಮಜ್ಜಿಗೆ ಮಾರಾಟ ತುಂಬಾ ಇಳಿಕೆಯಾಗಿದೆ. ಉಳಿದ 60 ರಿಂದ 70 ಸಾವಿರ ಲೀಟರ್ ಹಾಲನಿಂದು ಪುಡಿ ತಯಾರಿಸಲಾಗುತ್ತಿದೆ. ಹಾಲಿನ ಪುಡಿ ದರ ವಿಶ್ವ ಮಾರುಕಟ್ಟೆಯಲ್ಲಿ 85 ರೂ. ಇದೆ. ಹಾಲಿನ ಒಕ್ಕೂಟ ನಷ್ಟದಲ್ಲಿದ್ದು, ವೆಚ್ಚ ಸರಿದೂಗಿಸಲು ದರ ಕಡಿತಗೊಳಿಸುವುದು ಅನಿವಾರ್ಯ ಎಂದು ಒಕ್ಕೂಟ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Mon, 2 September 24