
ಬೆಂಗಳೂರು, ಜೂನ್ 18: ಇತ್ತೀಚೆಗೆ ರಾಜ್ಯದಲ್ಲಿ ಮಳೆ (rain) ಮತ್ತು ಬರಗಾಲದ (drought) ಕುರಿತಾದ ಸುದ್ದಿಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗುವುದಿಲ್ಲ, ಭೀಕರ ಬರಗಾಲ ಆವರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಆದರೆ, ಈ ಆತಂಕಕ್ಕೆ ಹವಾಮಾನ ತಜ್ಞರು ಹಾಗೂ ವಿಜ್ಞಾನಿಗಳು ಮಹತ್ವದ ಮಾಹಿತಿ ನೀಡುವ ಮೂಲಕ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಯಾವುದೇ ಭೀಕರ ಬರಗಾಲ ಬರುವುದಿಲ್ಲ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟಿವಿ9 ಜೊತೆಗೆ ಮಾತನಾಡಿದ ಕೃಷಿ ಹವಾಮಾನ ತಜ್ಞ ಡಾ. ಎಂ.ಬಿ. ರಾಜೇಗೌಡ, ‘ರಾಜ್ಯದಲ್ಲಿ ಭೀಕರ ಬರಗಾಲ ಬರುತ್ತದೆ ಎಂಬುದು ಸುಳ್ಳು, ರೈತರು ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಎಲ್ ನಿನೋ ಎಫೆಕ್ಟ್ ಇರುವುದು ನಿಜ. ಆದರೆ, -64% ಮಳೆ ಕೊರತೆಯಾಗುತ್ತದೆ ಎಂಬ ವದಂತಿ ಸಂಪೂರ್ಣ ಸುಳ್ಳು. ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದ ಮಳೆ ಕೊರತೆಯಾಗಲು ಸಾಧ್ಯವೇ ಇಲ್ಲ. ಎಲ್ ನಿನೋ ಪ್ರಭಾವದಿಂದ ರಾಜ್ಯದಲ್ಲಿ ಸದ್ಯ ಕೇವಲ -8% ಮಳೆ ಕೊರತೆ ಸಂಭವಿಸುವ ಸಾಧ್ಯತೆಯಿದೆ. ಹಿಂದೆ 1964-65ರಲ್ಲಿ ಶೇಕಡಾ -28% ಮಳೆ ಕೊರತೆಯಾದಾಗ ಇಡೀ ದೇಶವೇ ನಲುಗಿಹೋಗಿತ್ತು, ಆದರೆ ಸದ್ಯದ ಪರಿಸ್ಥಿತಿ ಹಾಗಾಗುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ, ಮಳೆಯಬ್ಬರ!
‘ಎಲ್ ನಿನೋ ನೆಗೆಟಿವ್ ಇಂಪ್ಯಾಕ್ಟ್ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ. ಇದರಿಂದ -4 ರಿಂದ -8% ಮಳೆ ಕೊರತೆಯಾಗಬಹುದಾದರೂ, ಮಳೆ ಹಂಚಿಕೆ ಸಮರ್ಪಕವಾಗಿದ್ದರೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದು. ನೆಗೆಟಿವ್ ನಾರ್ಮಲ್‌ನಿಂದಾಗಿ ಡ್ಯಾಮ್‌ಗಳು ತುಂಬಬಹುದು, ಆದಾಗ್ಯೂ, ಕೃಷಿಗೆ ಇದರಿಂದ ಯಾವುದೇ ಧಕ್ಕೆ ಇಲ್ಲ. ಇದರ ಮಧ್ಯೆ ವೆಸ್ಟರ್ನ್ ಡಿಸ್ಟ್ರಬೆನ್ಸ್ ಆರಂಭವಾಗಿರುವುದರಿಂದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗುತ್ತಿರುವುದು ಶುಭ ಸೂಚಕವಾಗಿದೆ. ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಕಾರ್ಯ ಹೆಚ್ಚಾಗಿದೆ. ಕಳೆದ ಸಲ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದ್ದ ಬಿತ್ತನೆ ಕ್ಷೇತ್ರ, ಈ ಬಾರಿ 17 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿದೆ. ಹೀಗಾಗಿ ರೈತಾಪಿ ವರ್ಗ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್. ಪಾಟೀಲ್ ಟಿವಿ9ಗೆ ಪ್ರತಿಕ್ರಿಯಿಸಿದ್ದು, ‘ಕಳೆದ ವರ್ಷ ರಾಜ್ಯಾದ್ಯಂತ ಶೇಕಡಾ 14ರಷ್ಟು ಮಳೆಯ ಪ್ರಮಾಣ ಹೆಚ್ಚಾಗಿತ್ತು. ಉತ್ತರ ಒಳನಾಡಿನಲ್ಲಿ 50% ರಷ್ಟು ಮಳೆ ಹೆಚ್ಚಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ 4% ರಷ್ಟು ಮಳೆ ಕಡಿಮೆಯಾಗಿತ್ತು. ಆದರೆ ಈ ವರ್ಷ ಎಲ್ ನಿನೋ ಎಫೆಕ್ಟ್‌ನಿಂದಾಗಿ ರಾಜ್ಯದಲ್ಲಿ ಸರಾಸರಿ ಶೇಕಡಾ 10ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಪೂರ್ಣ ಬತ್ತಿದ ಕಾವೇರಿ ನದಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ
ಒಟ್ಟಾರೆಯಾಗಿ, ರಾಜ್ಯದಲ್ಲಿ ಭೀಕರ ಬರಗಾಲ ಬರಲಿದೆ ಎಂಬ ವದಂತಿಗೆ ತಜ್ಞರು ಮತ್ತು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ಒಂದಷ್ಟು ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇದೆಯೇ ಹೊರತು, ಅಷ್ಟೊಂದು ದೊಡ್ಡ ಮಟ್ಟದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.