ಡಿಸೆಂಬರ್ 20ರಿಂದ ಆನ್ಲೈನ್ ಕ್ಲಾಸ್ ಕೂಡ ಬಂದ್ ಆಗುತ್ತೆ.. ಸರ್ಕಾರಕ್ಕೆ ರುಪ್ಸಾ ಎಚ್ಚರಿಕೆ
ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಕಾರಣ ಡಿ.20ರಿಂದ ಶಾಲೆಗಳನ್ನು ಮುಚ್ಚಿ ಆನ್ಲೈನ್ ಕ್ಲಾಸ್ ಬಂದ್ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳ ಮಂಡಳಿ(ರುಪ್ಸಾ) ನಿರ್ಧರಿಸಿದೆ.
ಬೆಂಗಳೂರು: ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಡಿ. 20ರಿಂದ ಆನ್ಲೈನ್ ಕ್ಲಾಸ್ ಬಂದ್ ಮಾಡಲು ನಿರ್ಧರಿಸಲಾಗಿದ್ದು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ರುಪ್ಸಾ ಮುಂದಾಗಿದೆ.
ಡಿಸೆಂಬರ್ 10ರವರೆಗೆ ಸರ್ಕಾರಕ್ಕೆ ಗಡುವು ಕೊರೊನಾ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಶಾಲೆಗಳನ್ನು ತೆರೆಯಲು ಸದ್ಯ ಈಗ ಸರ್ಕಾರ ಚಿಂತಿಸುತ್ತಿದೆ. ಈ ನಡುವೆ ಶಿಕ್ಷಣ ಸಂಸ್ಥೆಗಳು ಖಾಸಗಿ ಶಾಲೆಗಳನ್ನು ಮುಚ್ಚಲು ಮುಂದಾಗಿವೆ. ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಕಾರಣ ಡಿ. 20ರಿಂದ ಶಾಲೆಗಳನ್ನು ಮುಚ್ಚಿ ಆನ್ಲೈನ್ ಕ್ಲಾಸ್ ಬಂದ್ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳ ಮಂಡಳಿ (ರುಪ್ಸಾ) ನಿರ್ಧರಿಸಿದೆ. ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಾಗೂ ಡಿಸೆಂಬರ್ 10ರವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಆದರೆ ಯಾವುದೇ ಪ್ರಯೋಜನವಾಗದ ಕಾರಣ ಅಂತಿಮವಾಗಿ ಶಾಲೆ ಬಂದ್ ಮಾಡಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಖಾಸಗಿ ಶಾಲೆಗಳನ್ನು ಮುಚ್ಚಿದ್ರೆ ಲಕ್ಷಾಂತರ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತೆ. ಆದರೂ 10,000 ಖಾಸಗಿ ಶಾಲೆಗಳನ್ನು ಮುಚ್ಚಿ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ. ಸರ್ಕಾರ ಬೇಡಿಕೆಗಳನ್ನ ಈಡೇರಿಸುವವರೆಗೂ ಶಾಲೆ ತೆರೆಯಲ್ಲ. ಆನ್ಲೈನ್ ಕ್ಲಾಸ್ ಬಂದ್ ಮಾಡುತ್ತೇವೆ ಎಂದು ರುಪ್ಸಾ ತಿಳಿಸಿದೆ. ಇನ್ನು ಡಿ. 20ರಂದು ರುಪ್ಸಾ ಪ್ರತಿನಿಧಿಗಳ ಸಭೆ ಬಳಿಕ ಈ ಬಗ್ಗೆ ಖಚಿತ ನಿರ್ಧಾರ ಪ್ರಕಟವಾಗುತ್ತೆ.