ವಿರಾಟ್ ಕೊಹ್ಲಿಗಾಗಿ ತರಾತುರಿ: ಸಿಐಡಿ ತನಿಖೆಯಲ್ಲಿ ಬಯಲಾಯ್ತು ಆರ್​ಸಿಬಿ ವಿಜಯೋತ್ಸವ ಕಾಲ್ತುಳಿತಕ್ಕೆ ಕಾರಣ!

ಆರ್‌ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ವಿರಾಟ್ ಕೊಹ್ಲಿಗಾಗಿ ತರಾತುರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮ ಮತ್ತು ಉಚಿತ ಟಿಕೆಟ್ ಘೋಷಣೆಯಿಂದ ಉಂಟಾದ ಗೊಂದಲವೇ ಮುಖ್ಯ ಕಾರಣ ಎಂಬುದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿಗಾಗಿ ತರಾತುರಿ: ಸಿಐಡಿ ತನಿಖೆಯಲ್ಲಿ ಬಯಲಾಯ್ತು ಆರ್​ಸಿಬಿ ವಿಜಯೋತ್ಸವ ಕಾಲ್ತುಳಿತಕ್ಕೆ ಕಾರಣ!
ವಿರಾಟ್ ಕೊಹ್ಲಿ ಮತ್ತು ನಿಖಿಲ್ ಸೋಸಲೆ

Updated on: Jul 08, 2025 | 1:10 PM

ಬೆಂಗಳೂರು, ಜುಲೈ 8: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್ (IPL) ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಪೊಲೀಸರು ಹಲವು ವಿಚಾರಗಳನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆಯಲ್ಲಿ ಕಂಡುಬಂದ ಎಲ್ಲಾ ಅಂಶಗಳನ್ನು ಸಿಐಡಿ ವರದಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗಾಗಿ (Virat Kohli) ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ಘಟನೆಗೆ ಮುಖ್ಯ ಕಾರಣ ಎಂದು ಸಿಐಡಿ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಆರ್​ಸಿಬಿ ಗೆಲುವಿನ ಮರುದಿನವೇ ಕಾರ್ಯಕ್ರಮ ಆಯೋಜಿಸಲು ಆರ್​ಸಿಬಿ ಸಿಇಓ ರಾಜೇಶ್ ಮೆನನ್, ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಮಿತಿ (ಕೆಎಸ್​​ಸಿಎ) ಮೇಲೆ ಒತ್ತಡ ಹೇರಿದ್ದರು. ಈ ಇಬ್ಬರು ವ್ಯಕ್ತಿಗಳಿಂದಾಗಿಯೇ‌ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಎಂಬ ಮಾಹಿತಿಯನ್ನು ಸಿಐಡಿ ಕಲೆಹಾಕಿದೆ.

ತಡಮಾಡಿದರೆ ಕೊಹ್ಲಿ ಬರಲ್ಲ ಎಂದಿದ್ದ ಸೋಸಲೆ

ಕಾರ್ಯಕ್ರಮ ತಡಮಾಡಿದರೆ ವಿರಾಟ್ ಕೊಹ್ಲಿ ಬರಲ್ಲ. ಹಾಗಾಗಿ ಜೂನ್ 4ರಂದೇ ಕಾರ್ಯಕ್ರಮ ಆಯೋಜಿಸಬೇಕು ಎಂದು ಕೊಹ್ಲಿ ಆಪ್ತರೂ ಆಗಿರುವ ಸೋಸಲೆ ಕೆಎಸ್​​ಸಿಎಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಆರ್​​ಸಿಬಿ ವಿಜಯೋತ್ಸವ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡುವಂತೆ ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಕೆಎಸ್​​ಸಿಎ ಸಲಹೆ ನೀಡಿದ್ದವು. ಆದರೆ, ಕಾರ್ಯಕ್ರಮ ಮುಂದೂಡಿದರೆ ಕೊಹ್ಲಿ ಬರಲ್ಲ. ಅವರು ಬ್ರಿಟನ್​​ಗೆ ಹೋಗಬೇಕು ಎಂದು ಸೋಸಲೆ ಒತ್ತಡ ಹೇರಿದ್ದರು.

ಇದನ್ನೂ ಓದಿ
ರೆಡಿಮೇಡ್ ಬಟ್ಟೆಗಳ ಪ್ಯಾಕ್​ನಲ್ಲಿ ಡ್ರಗ್ಸ್ ಸೇಲ್! ನೈಜೀರಿಯಾ ಪ್ರಜೆಗಳು ವಶ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಹೈಟೆಕ್ ಆಗಲಿದೆ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ!
ಎತ್ತಿನಹೊಳೆ‌ ಡ್ಯಾಂ ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ಜನರಿಂದಲೂ ವಿರೋಧ!

ಟಿಕೆಟ್ ಗೊಂದಲ, ಉಚಿತ ಟಿಕೆಟ್ ಘೋಷಣೆ ಕೂಡ ಕಾರಣ

ಆರ್​ಸಿಬಿ ವಿಜಯೋತ್ಸವಕ್ಕೆ ಬರುವವರಿಗೆ ಚಿನ್ನಸ್ವಾಮಿ ಸ್ಟೇಡಿಂಗೆ ಉಚಿತ ಟಿಕೆಟ್ ಘೋಷಣೆ, ಟಿಕೆಟ್ ಗೊಂದಲದ ಬಗ್ಗೆಯೂ ಸಿಐಡಿ ಮಾಹಿತಿ ಕಲೆಹಾಕಿದೆ. ಹೀಗಾಗಿ ಕಾರ್ಯಕ್ರಮದ ಟೈಮ್​ಲೈನ್ ಪ್ರಕಾರ ಮಾಹಿತಿ ಕಲೆ ಹಾಕಿ ಸಿಐಡಿ ತಂಡ ವರದಿ ಸಿದ್ಧಪಡಿಸುತ್ತಿದೆ.

ಸಿಐಡಿ ಕಲೆಹಾಕಿದ ಮಾಹಿತಿಗಳೇನು?

ಸಾವಿರಾರು ವಿಡಿಯೊಗಳ ವೀಕ್ಷಣೆ, ಸಿಸಿಟಿವಿ ದೃಶ್ಯಗಳ ಪರಿಶೀಲನೆ ಹಾಗೂ ಬಂಧಿತ ಆರೋಪಿಗಳ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿರುವ ಸಿಐಡಿ ತಂಡ ವರದಿ ಸಿದ್ಧಪಡಿಸುತ್ತಿದೆ. ತನಿಖೆ ವೇಳೆ ಸಿಐಡಿ ಕಂಡುಕೊಂಡ ಕೆಲವು ಅಂಶಗಳು ಇಲ್ಲಿವೆ;

  • ಉಚಿತ ಟಿಕೆಟ್ ಘೋಷಣೆ ಗೊಂದಲ.
  • ಬಂದೋಬಸ್ತ್​​ನಲ್ಲಿ ಯಡವಟ್ಟು.
  • ಸರಿಯಾದ ರೋಲ್​​ಕಾಲ್ ಆಗಿಲ್ಲ, ಕಾಲ್ತುಳಿತದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್​​ಗಳ ಬಳಿ ಪೊಲೀಸರೇ ಇರಲಿಲ್ಲ.
  • ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಪೊಲೀಸ್ ಬಂದೋಬಸ್ತ್ ಬಗ್ಗೆ ಸರಿಯಾದ ತಯಾರಿಯೇ ಆಗಿರಲಿಲ್ಲ.
  • ವಿಧಾನಸೌದದ ಕಾರ್ಯಕ್ರಮದ ಬಳಿಯೇ ಹೆಚ್ಚು ಭದ್ರತೆ ಒದಗಿಸಿ ಗಮನ ಹರಿಸಿದ್ದ ಪೊಲೀಸ್ ಇಲಾಖೆ.
  • ಕೆಎಸ್​​ಆರ್​​ಪಿ ಸಿಬ್ಬಂದಿಗೂ ಸರಿಯಾದ ಮಾಹಿತಿ ಇರಲಿಲ್ಲ.
  • ಐಪಿಎಲ್ ಮ್ಯಾಚ್ ಸಂದರ್ಭಗಳಲ್ಲಿ ನೀಡುವಂತೆಯೇ ಕೆಎಸ್​​ಆರ್​​ಪಿ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಉಚಿತ ಟಿಕೆಟ್ ಘೋಷಣೆ ಕಾರಣ ಜನಪ್ರವಾಹವೇ ಹರಿದುಬಂದಿತ್ತು.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ: ಬಂಧಿತರ ವಿಚಾರಣೆ ವೇಳೆ ಗೊತ್ತಾಗಿದ್ದೇನು? ಸಿಐಡಿ ಮುಂದಿನ ನಡೆಯೇನು? ಇಲ್ಲಿದೆ ವಿವರ

ಸದ್ಯ ಈ ಎಲ್ಲ ವಿಚಾರಗಳನ್ನು ಸಿಐಡಿ ತನಿಖಾ ವರದಿಯಲ್ಲಿ ಸೇರಿಸಲಾಗುತ್ತಿದ್ದು, ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸಿ ವರದು ಸಲ್ಲಿಸುವ ನಿರೀಕ್ಷೆ ಇದೆ.

ವರದಿ: ವಿಕಾಸ್, ಟಿವಿ9

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Tue, 8 July 25