
ಬೆಂಗಳೂರು, ಫೆಬ್ರವರಿ 25: ಭಾರತ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ವಿವಿಧ ಯಶಸ್ವಿ ಮಿಷನ್ಗಳ ಮೂಲಕ ಜಾಗತಿಕ ಬಾಹ್ಯಾಕಾಶ ಲೋಕ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯಾದ PSLV-4 ತನ್ನ ಕಕ್ಷೆ ಸೇರಿದ್ದು, ಬೆಂಗಳೂರಿನ ವಿದ್ಯಾರ್ಥಿಗಳು ಇದರ ಭಾಗವಾಗಿ ಕೆಲಸ ಮಾಡಿದ್ದು, ದೇಶದ ಮೊದಲ ವಿದ್ಯಾರ್ಥಿ ನಿರ್ಮಿತ ಮೈಕ್ರೋ ಬಯಲಾಜಿಕಲ್ ನ್ಯಾನೋ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
SPADEX/POEM-4 ಮಿಷನ್‌ನ ಭಾಗವಾಗಿ ಕಳೆದ ಡಿಸೆಂಬರ್‌ನಲ್ಲಿ ಇಸ್ರೋದ PSLV C-60 ನಲ್ಲಿ ಉಡಾವಣೆಯಾದ ಭಾರತದ ಮೊದಲ ಮೈಕ್ರೋ ಬಯೋಲಾಜಿಕಲ್ ನ್ಯಾನೊ ಸಾಟ್‌ಲೈಟ್ RVSAT-1 ಅನ್ನು ವಿನ್ಯಾಸ ಮತ್ತು ಅಭಿವೃದ್ಧಿ ಮಾಡುವ ಬೆಂಗಳೂರಿನ RV ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ತಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಬಾಹ್ಯಾಕಾಶದಲ್ಲಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಅಧ್ಯಯನ ಮಾಡುವ ಸಲುವಾಗಿ ಬೆಂಗಳೂರಿನ RV ಕಾಲೇಜ್ ಆಫ್ ಎಂಜಿನಿಯರಿಂಗ್‌ನ ವಿದ್ಯಾರ್ಥಿಗಳ ತಂಡವು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.
ಕರುಳಿನ ಬ್ಯಾಕ್ಟೀರಿಯಾವು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಮೂಲಕ ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇನ್ನು ಬಾಹ್ಯಾಕಾಶದಲ್ಲಿ ಕರುಳಿನ ಬ್ಯಾಕ್ಟೀರಿಯಾಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಈ ಪ್ರಯೋಗ ನಿರ್ಣಾಯಕವಾಗಿದ್ದು, ಇಸ್ರೋ ಬಾಹ್ಯಾಕಾಶ ಕಾರ್ಯಾಚರಣೆಗಳ ಸಮಯದಲ್ಲಿ ಭಾರತೀಯ ಗಗನಯಾತ್ರಿಗಳನ್ನು ಆರೋಗ್ಯವಾಗಿಡಲು ಮಾರ್ಗಗಳನ್ನು ಕಂಡುಕೊಳ್ಳಲು ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಆರ್‌ವಿಸಿಇ ಕಾಲೇಜು ಪ್ರಾಂಶುಪಾಲ ಸುಬ್ರಮಣ್ಯ ಹೇಳಿದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ಶ್ರೀಹರಿಕೋಟದಿಂದ ಉಡಾವಣೆಯಾದ ದೇಶಿ ನಿರ್ಮಿತ ರಾಕೆಟ್ PSLV ಕಕ್ಷೆ ಸೇರಿದ್ದು, RVSAT-1 ಮೈಕ್ರೋ ಬಯಲೋಜಿಕಲ್ ನ್ಯಾನೋ ಸ್ಯಾಟಲೈಟ್ನಲ್ಲಿ ಸಕ್ರಿಯವಾಗಿದ್ದು, ಬ್ಯಾಕ್ಟೀರಿಯಾ ಚಲನವಲನ ದೃಢವಾಗಿದೆ. ಈ ಮೂಲಕ ಬಾಹ್ಯಾಕಾಶದಲ್ಲಿ ಮುಂದಿನ ದಿನಗಳಲ್ಲಿ ಗಗನ ಯಾತ್ರಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿಡುವ ಸಂಬಂಧದ ಅಧ್ಯಯನಗಳಿಗೆ ಇದು ಪುಷ್ಟಿ ನೀಡಲಿದೆ.
ಇದನ್ನೂ ಓದಿ: ಸ್ಪೇಸ್ ಡಾಕಿಂಗ್ ಆಯ್ತು; 2025ರ ಮೊದಲಾರ್ಧದಲ್ಲಿ ಭಾರತದಿಂದ ಬಾಹ್ಯಾಕಾಶ ಯೋಜನೆಗಳ ಸರಮಾಲೆ
ಒಟ್ಟಾರೆಯಾಗಿ ವಿವಿಧ ಮಿಷನ್ಗಳ ಮೂಲಕ ಬಾಹ್ಯಾಕಾಶ ಲೋಕದಲ್ಲಿ ದೇಶದ ಪ್ರಬಲ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ವಿಶ್ವಾಸವಿದ್ದು, ಬೆಂಗಳೂರಿನ RV ಕಾಲೇಜ್ ಆಫ್ ಇಂಜಿನಿಯರಿಂಗ್ನ ವಿದ್ಯಾರ್ಥಿಗಳು ಇಸ್ರೋ ಜೊತೆಗೆ ಕೆಲಸ ಮಾಡಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವೇ ಸರಿ.
ವರದಿ: ಲಕ್ಷ್ಮೀ. ಎನ್
Published On - 8:30 am, Tue, 25 February 25