ಹಾವೇರಿ: ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಉದ್ಯಾನವನವನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಇದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವುದರಿಂದ, ಹೆದ್ದಾರಿಯಲ್ಲಿ ಸಂಚಾರ ಮಾಡುವವರಿಗೆ ವಿಶ್ರಾಂತಿಗೆ ಅನುಕೂಲವಾದಂತಾಗಿದೆ. ಹಾಗೇ ಈ ಉದ್ಯಾನವನದಲ್ಲಿ ಏನೇನು ಕಾಣ ಸಿಗುತ್ತದೆ, ಪ್ರವೇಶ ದರವೆಷ್ಟು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಉದ್ಯಾನವನದಲ್ಲಿ ಏನೇನಿದೆ?
ಮಕ್ಕಳ ಆಟಿಕೆಗಳು, ವಿಶ್ರಾಂತಿಗೆ ಬೇಕಾದ ಸ್ಥಳಗಳು, ಸುಂದರ ಹಸಿರಿನ ವಾತಾವರಣ ಉಣಬಡಿಸುವ ಸಾಲು ಮರಗಳು, ಜಾರುಬಂಡಿ, ಜೋಕಾಲಿಗಳನ್ನು ಇಲ್ಲಿ ಕಾಣಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನ ಸವಾರರಿಗೆ ಕೊಂಚ ಸುಸ್ತು ಅನಿಸಿದರೆ, ಕೆಲಕಾಲ ಕುಳಿತು ವಿಶ್ರಾಂತಿ ಪಡೆಯಲು ಒಳ್ಳೆಯ ತಾಣವಿದು.
ಕೈಬೀಸಿ ಕರೆಯುವ ಪ್ರಾಣಿಗಳ ಚಿತ್ರಗಳು
ಉದ್ಯಾನವನದ ಒಳಗೆ ಪ್ರವೇಶಿಸುತ್ತಿದ್ದಂತೆ, ಕಲ್ಲುಬಂಡೆಗಳ ಮೇಲೆ ಚಿತ್ರದುರ್ಗದ ಕಲಾವಿದ ನಾಗರಾಜ ಅವರ ಕೈಚಳಕದಲ್ಲಿ ಮೂಡಿಬಂದ ಚಿತ್ರಗಳು ಕಾಣಸಿಗುತ್ತವೆ. ಚಿರತೆ, ನರಿ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳನ್ನು ನಾಗರಾಜ ಚಿತ್ರಿಸಿದ್ದಾರೆ. ರಾಜ್ಯದಲ್ಲಿ ಹೈವೇ ಪಕ್ಕದಲ್ಲಿ ಈವರೆಗೆ ಮೂರು ಉದ್ಯಾನವನಗಳು ಇದ್ದವು. ಇದೀಗ ಛತ್ರ ಗ್ರಾಮದ ಬಳಿ ನಿರ್ಮಾಣ ಆಗುತ್ತಿರುವುದು ನಾಲ್ಕನೇ ಉದ್ಯಾನವನವಾಗಿದೆ.
ಕಡಿಮೆ ದರದಲ್ಲಿ ವೀಕ್ಷಣೆ:
ಇನ್ನೇನು ಕೆಲವು ದಿನಗಳಲ್ಲಿ ಉದ್ಯಾನವನ ಜನರಿಗೆ ಮುಕ್ತವಾಗಿ ನೋಡಲು ಕಾಣಸಿಗುತ್ತದೆ. ಕಡಿಮೆ ಹಣದಲ್ಲಿ ಜನರು ಪ್ರಕೃತಿ ಸೌಂದರ್ಯ, ವನ್ಯ ಮೃಗಗಳ ಚಿತ್ರಗಳನ್ನು ಕಣ್ತುಂಬಿಕೊಳ್ಳಬೇಕೆಂಬ ದೃಷ್ಟಿಯಿಂದ ಒಬ್ಬರಿಗೆ 10-20 ರೂಪಾಯಿ ದರ ವಿಧಿಸುವುದಾಗಿ ನಿರ್ಧರಿಸಲಾಗಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಿತ್ಯವೂ ಸಾಕಷ್ಟು ಸಂಖ್ಯೆಯ ವಾಹನ ಸವಾರರು ಓಡಾಡುತ್ತಾರೆ. ಹೀಗಾಗಿ ಹೆದ್ದಾರಿ ಪಕ್ಕದಲ್ಲಿ ಯಾಕೆ ಒಂದು ಸುಂದರ ಉದ್ಯಾನವನ್ನು ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬಾರದು ಎಂದು ವಿಚಾರ ಮಾಡಿ ಈ ಉದ್ಯಾನವ ನಿರ್ಮಿಸಲಾಗಿದೆ. ಸುಮಾರು 60ಲಕ್ಷ ರುಪಾಯಿ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ. ಸ್ವಂತ ಆಸಕ್ತಿಯಿಂದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಉದ್ಯಾನವನ ನಿರ್ಮಿಸಲಾಗಿದೆ ಎಂದು ಬ್ಯಾಡಗಿ ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣವರ ಹೇಳಿದ್ದಾರೆ.
ಈ ಸುಂದರ ಉದ್ಯಾನವನ ಎಂಥವರನ್ನೂ ಕೈ ಬೀಸಿ ಕರೆಯುತ್ತದೆ. ಮಕ್ಕಳಿಗಂತೂ ಹೇಳಿ ಮಾಡಿಸಿದ ತಾಣದಂತಿದೆ. ಹೆದ್ದಾರಿಯಲ್ಲಿ ಓಡಾಡುವ ಜನರು ಕೆಲಕಾಲ ವಿಶ್ರಾಂತಿ ಪಡೆದು ಮಕ್ಕಳ ಜೊತೆ ಎಂಜಾಯ್ ಮಾಡಲು ಒಳ್ಳೆಯ ಸ್ಥಳಾವಕಾಶವಿದೆ ಎಂದು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಚಂದ್ರು ಶಿಡೇನೂರ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಜಿಲ್ಲೆಗೆ ಬೇಕೇ ಬೇಕು ಒಂದು ಫುಡ್ ಪಾರ್ಕ್: ಇದು ವಿಜಯಪುರ ರೈತರ, ಯುವಕರ, ಉದ್ಯಮಿಗಳ ಆಗ್ರಹ