
ನವದೆಹಲಿ, (ಸೆಪ್ಟೆಂಬರ್ 03): ಬೆಂಗಳೂರಿನ ಯಡಿಯೂರು ಕೆರೆ ಭೂವಿವಾದ ಪ್ರಕರಣಕ್ಕ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಯಡಿಯೂರು ಕೆರೆ ಪ್ರದೇಶದ ಜಮೀನಿನ ಸರ್ವೆ ನಂಬರ್‌ಗಳ ಕುರಿತು ಹೊಸದಾಗಿ ತನಿಖೆ ನಡೆಸಲು ಕಂದಾಯ ಅಧಿಕಾರಿಗಳಿಗೆ ಅನುಮತಿ ನೀಡಿದ್ದ ಹೈಕೋರ್ಟ್‌ನ ಆದೇಶ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ
ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದ ಹೊಸ ಸರ್ವೆ ಆದೇಶ ರದ್ದುಗೊಳಿಸಿ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಸಚ್‌ದೇವ ಪೀಠ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಸೆಕ್ಷನ್ 56ರಡಿ ಮರುಪರಿಶೀಲನೆಗೆ ಮೂರು ವರ್ಷಗಳ ಕಾಲಮಿತಿ. ಈ ಮೂರು ವರ್ಷಗಳ ಅವಧಿ ಮೀರಿದ ಬಳಿಕ ಅಧಿಕಾರಿಗಳು ಮರು ಪರಿಶೀಲನಾ ಕ್ರಮ ಕೈಗೊಳ್ಳುವಂತಿಲ್ಲ. ಕಾಲಮಿತಿ ಕಾಯ್ದೆ 1963ರ ಪ್ರಕಾರ 3 ವರ್ಷಗಳ ನಿಗದಿತ ಅವಧಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ವಿವಾದದ ಮೂಲ: ಯಡಿಯೂರು ಕೆರೆ ಒತ್ತುವರಿ ಮಾಡಲಾಗಿದೆ ಎಂಬ ದೂರಿನ ಮೇರೆಗೆ, ಕಂದಾಯ ದಾಖಲೆಗಳ ಜಂಟಿ ನಿರ್ದೇಶಕರು/ನೋಂದಣಾಧಿಕಾರಿಗಳು 2014 ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 56 ರ ಅಡಿಯಲ್ಲಿ ಹೊಸದಾಗಿ ತನಿಖೆ ನಡೆಸಲು ನೋಟಿಸ್ ನೀಡಿದ್ದರು.
ಏಕಸದಸ್ಯ ಪೀಠದ ಆದೇಶ: ಈ ನೋಟಿಸ್ ಅನ್ನು ಪ್ರಶ್ನಿಸಿ ಭೂಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠವು, ಕಾಯ್ದೆಯ ಪ್ರಕಾರ 3 ವರ್ಷಗಳ ಮಿತಿಯ ನಂತರ ಈ ರೀತಿಯ ಪರಿಷ್ಕರಣಾ ಅಧಿಕಾರವನ್ನು (Revisional Power) ಬಳಸಲು ಬರುವುದಿಲ್ಲ ಎಂದು ನೋಟಿಸ್ ರದ್ದುಗೊಳಿಸಿತ್ತು
ವಿಭಾಗೀಯ ಪೀಠದ ತೀರ್ಪು (2020): ಆದರೆ, ಜನವರಿ 2020 ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ತಿರುಚಿ, ಅಧಿಕಾರಿಗಳು ಇನ್ನೂ ಯಾವುದೇ ಅಂತಿಮ ಆದೇಶ ಹೊರಡಿಸದ ಕಾರಣ ಹೊಸದಾಗಿ ತನಿಖೆ ನಡೆಸಲು ಅಧಿಕಾರಿಗಳಿಗೆ ಅನುಮತಿ ನೀಡಿತ್ತು. ಈ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯನ್ನೂ ಹೈಕೋರ್ಟ್ ಜೂನ್ 2023 ರಲ್ಲಿ ವಜಾಗೊಳಿಸಿತ್ತು
ಹೈಕೋರ್ಟ್ ವಿಭಾಗೀಯ ಪೀಠದ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರ ಪೀಠವು ಈ ಕೆಳಗಿನಂತೆ ಆದೇಶಿಸಿದೆ.

ಮೂರು ವರ್ಷಗಳ ಕಾಲಮಿತಿ ಕಡ್ಡಾಯ: ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 56ರ ಅಡಿಯಲ್ಲಿ ಯಾವುದೇ ಆದೇಶ ಅಥವಾ ದಾಖಲೆಗಳನ್ನು ಮರುಪರಿಶೀಲಿಸುವ ಅಧಿಕಾರವನ್ನು ಕಾಯ್ದೆಯಲ್ಲಿ ನಿಗದಿಪಡಿಸಿದ 3 ವರ್ಷಗಳ ಶಾಸನಬದ್ಧ ಅವಧಿಯ ನಂತರ ಚಲಾಯಿಸಲು ಸಾಧ್ಯವಿಲ್ಲ ಎಂದಿದೆ.
ಹೈಕೋರ್ಟ್ ಆದೇಶ ರದ್ದು: ಕೆರೆ ಒತ್ತುವರಿ ತನಿಖೆಯ ನೆಪದಲ್ಲೂ ಕಾನೂನುಬದ್ಧ ಕಾಲಮಿತಿಯನ್ನು ಮೀರಿ ಕಂದಾಯ ಆದೇಶಗಳನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ನೋಟಿಸ್ ವಜಾ: ಅಧಿಕಾರಿಗಳು 2014 ರಲ್ಲಿ ಜಮೀನು ಮಾಲೀಕರಿಗೆ ನೀಡಿದ್ದ ಹೊಸ ತನಿಖೆಯ ನೋಟಿಸ್ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.