ಕೆಪಿಎಸ್‌ಸಿ ಹಗರಣದಲ್ಲಿ ಮೊದಲ ತೆಲೆದಂಡ:ಐಎಎಸ್ ಜ್ಞಾನೇಂದ್ರ ಕುಮಾರ್ ಅಮಾನತು
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ತನಿಖೆ ಸಿಐಡಿ ತೀವ್ರಗೊಳಿಸಿದೆ. ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಸ್ಫೋಟ ಅಂಶಗಳು ಬಯಲಿಗೆ ಬಂದಿದ್ದು, ಐಎಎಸ್ ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ, ಜ್ಞಾನೇಂದ್ರ ಕುಮಾರ್ ಅವರನ್ನ ಅಮಾನತು ಮಾಡಿದೆ.

ಬೆಂಗಳೂರು, (ಸೆಪ್ಟೆಂಬರ್ 03): ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಭಾಗಿಯಾಗಿರುವುದು ದೃಢಪಟ್ಟಿದೆ. ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಕಂಟ್ರೋಲ್‌ನಲ್ಲಿ ಫಿಲ್ಮಿ ಸ್ಟೈಲ್‌ನಲ್ಲಿ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. OMR ಶೀಟ್ ತಿದ್ದುಪಡಿ, ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವುದು ಬಟಾಬಯಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಜ್ಞಾನೇಂದ್ರ ಕುಮಾರ್ ಅವರನ್ನು ಅಮಾನತು ಮಾಡಿ ಇಂದು (ಸೆಪ್ಟೆಂಬರ್ 03) ಆದೇಶ ಹೊರಡಿಸಿದೆ. ಇದರೊಂದಿಗೆ ಕೆಪಿಎಸ್‌ಸಿ ಅಕ್ರಮದಲ್ಲಿ ಮೊದಲ ತಲೆದಂಡವಾದಂತಾಗಿದೆ.
ED ಶೋಧನೆ ಮತ್ತು ಜಪ್ತಿ ಕಾರ್ಯಾಚರಣೆ ವೇಳೆ ಭ್ರಷ್ಟಾಚಾರ ಸಾಬೀಯಾಗಿದೆ. KPSC ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ಪುರಾವೆ ಪತ್ತೆಯಾಗಿವೆ. ಇನ್ನು KPSC ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಅಕ್ರಮ ಆರೋಪ ಸಂಬಂಧ ಮೇಲ್ನೋಟಕ್ಕೆ ಅಖಿಲ ಭಾರತ ಸೇವೆಗಳ ನಿಯಮ ಉಲ್ಲಂಘನೆ ಹಾಗೂ 48 ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸ್ ಕಸ್ಟಡಿ ಹಿನ್ನೆಲೆ CID ತನಿಖೆ ಮುಕ್ತಾಯವಾಗುವವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಜ್ಞಾನೇಂದ್ರ ಕುಮಾರ್ ನನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
ಇದನ್ನೂ ನೋಡಿ: ಕೆಪಿಎಸ್‌ಸಿ ಹಗರಣ: ಬೆಳಗ್ಗೆ ಡೀಲು, ರಾತ್ರಿ ಪುಲ್ ಪಾರ್ಟಿ, ಐಎಎಸ್ ಅಧಿಕಾರಿಯ ರಾತ್ರಿ ಕಾರುಬಾರು ಬಯಲು
2016ರ ಬ್ಯಾಚಿನ ಐಎಎಸ್ ಅಧಿಕಾರಿ
ಉತ್ತರ ಪ್ರದೇಶದ ಮೂಲದ ಜ್ಞಾನೇಂದ್ರ ಕುಮಾರ್ 2016ರ ಬ್ಯಾಚಿನ ಐಎಎಸ್ ಅಧಿಕಾರಿ. 2024ರ ಫೆಬ್ರವರಿಯಿಂದ ಮಾರ್ಚ್ 2026ರವರೆಗೆ ಕೆಪಿಎಸ್ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಮಾರ್ಚ್ನಲ್ಲಿ ವರ್ಗಾವಣೆಗೊಂಡಿದ್ದರು. ಪ್ರಸ್ತುತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮೆಗಳ ಇಲಾಖೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ನ್ಯಾಯಾಂಗ ಬಂಧನದಲ್ಲಿರುವ ಜ್ಞಾನೇಂದ್ರ ಕುಮಾರ್
ಈಗಾಗಲೇ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರೊಂದಿಗೆ ಬಸವರಾಜ ಕನ್ನಾಳೆ ನಿರಂತರ ಸಂಪರ್ಕದಲ್ಲಿದ್ದ. ಅಕ್ರಮ ನೇಮಕಾತಿ ಪ್ರಕ್ರಿಯೆಯಲ್ಲಿ ಈತ ಸಹ ಪ್ರಮುಖ ಪಾತ್ರ ವಹಿಸಿರುವ ಶಂಕೆಯ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಇಬ್ಬರನ್ನೂ ಇಂದು 1ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 9ರವರೆಗೂ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ ವರ್ಷ ಜನವರಿ 8 ಹಾಗೂ 9ರಂದು ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ಸುಮಾರು 70ರಿಂದ 80 ಲಕ್ಷ ರೂಪಾಯಿಗಳವರೆಗೆ ಲಂಚ ಪಡೆದಿರುವ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇ.ಡಿ ತನಿಖೆ ನಡೆಸಿದೆ. ಅಲ್ಲದೆ, ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Thu, 3 September 26




