ಎನ್‌ಟಿಎ ಪರೀಕ್ಷೆಗೆ ಸಂಬಂಧಿಸಿದ ದೂರು ಸಲ್ಲಿಸುವ ಅಭ್ಯರ್ಥಿಗಳು ಈ ವಿಷಯ ನೆನಪಿಡಿ
ಇಮೇಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪರೀಕ್ಷೆಗೆ ಸಂಬಂಧಿಸಿದ ದೂರು ಹಾಗೂ ಕುಂದುಕೊರತೆಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಮುಖ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಎನ್ಟಿಎಗೆ ಪ್ರತಿದಿನ ಭಾರಿ ಪ್ರಮಾಣದ ದೂರುಗಳು ಸ್ವೀಕೃತವಾಗುತ್ತಿವೆಯಾದರೂ, ಅನೇಕ ಇಮೇಲ್‌ಗಳಲ್ಲಿ ಅಭ್ಯರ್ಥಿಯನ್ನು ಗುರುತಿಸಲು ಅಗತ್ಯವಿರುವ ಮೂಲಭೂತ ವಿವರಗಳೇ ಇರುವುದಿಲ್ಲ. ಇದರಿಂದ ಲಕ್ಷಾಂತರ ಅರ್ಜಿದಾರರಲ್ಲಿ ನಿರ್ದಿಷ್ಟ ಅಭ್ಯರ್ಥಿಯನ್ನು ಹುಡುಕಿ, ಸಮಯಕ್ಕೆ ಸರಿಯಾಗಿ ಸ್ಪಂದಿಸುವುದು ಕಷ್ಟಕರವಾಗುತ್ತಿದೆ ಎಂದು ಎನ್‌ಟಿಎ ತಿಳಿಸಿದೆ. ನೀವೇನಾದರೂ ಎನ್ಟಿಎಗೆ ದೂರು ನೀಡಬೇಕಾದರೆ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ನವದೆಹಲಿ, ಸೆಪ್ಟೆಂಬರ್ 3: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಕುಂದುಕೊರತೆಗಳನ್ನು ಸಲ್ಲಿಸುವ ಕುರಿತು ಅಭ್ಯರ್ಥಿಗಳಿಗೆ ಪ್ರಮುಖ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ತನಗೆ ಪ್ರತಿದಿನ ಅಪಾರ ಸಂಖ್ಯೆಯ ದೂರುಗಳು ಸ್ವೀಕೃತವಾಗುತ್ತಿವೆಯಾದರೂ, ಅನೇಕ ದೂರುಗಳಲ್ಲಿ ಅಭ್ಯರ್ಥಿಯನ್ನು ಗುರುತಿಸಲು ಅಗತ್ಯವಿರುವ ಮೂಲಭೂತ ವಿವರಗಳೇ ಇರುವುದಿಲ್ಲ ಎಂದು ಪರೀಕ್ಷಾ ಸಂಸ್ಥೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಎನ್‌ಟಿಎ ನಡೆಸುವ ಯಾವುದೇ ಪರೀಕ್ಷೆಗೆ ಸಂಬಂಧಿಸಿದಂತೆ ದೂರು ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ನೋಂದಾಯಿತ ಇ-ಮೇಲ್ ಐಡಿ, ಅರ್ಜಿ ಸಂಖ್ಯೆ, ಪರೀಕ್ಷೆಯ ಹೆಸರು ಮುಂತಾದ ಎಲ್ಲಾ ಮೂಲಭೂತ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಎನ್‌ಟಿಎ ಹೇಳಿದೆ.
ಅಭ್ಯರ್ಥಿಗಳು ತಮ್ಮ ದೂರುಗಳಿಗೆ ವೇಗವಾಗಿ ಮತ್ತು ಸೂಕ್ತವಾದ ಪ್ರತಿಕ್ರಿಯೆಯನ್ನು ಪಡೆಯಲು, ವಿಷಯವನ್ನು ಸಲ್ಲಿಸುವಾಗ ಪೂರ್ಣ ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಎನ್‌ಟಿಎ ಸಲಹೆ ನೀಡಿದೆ. ಈ ವಿವರಗಳನ್ನು ನೀಡುವುದರಿಂದ ಸಂಬಂಧಪಟ್ಟ ಅಭ್ಯರ್ಥಿಯನ್ನು ಶೀಘ್ರವಾಗಿ ಗುರುತಿಸಿ, ದೂರುಗಳನ್ನು ಸರಿಯಾದ ವಿಭಾಗಕ್ಕೆ ರವಾನಿಸಲು ಸಹಾಯವಾಗುತ್ತದೆ. ಇದರಿಂದ ವೇಗದ ಪರಿಹಾರ ಮತ್ತು ಪ್ರತ್ಯುತ್ತರ ಸಾಧ್ಯವಾಗುತ್ತದೆ ಎಂದು ಎನ್‌ಟಿಎ ತಿಳಿಸಿದೆ.
ಇದನ್ನೂ ಓದಿ: ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಡಿಯೋ ನಕಲಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಎನ್‌ಟಿಎ
ದೂರು ಸಲ್ಲಿಸುವಾಗ ಈ ರೀತಿ ಮಾಡಿ:
ನೋಂದಾಯಿತ ಇಮೇಲ್ ಐಡಿ ಬಳಸಿ:
ಅಭ್ಯರ್ಥಿಗಳು ಪರೀಕ್ಷೆಯ ಅರ್ಜಿ ಸಲ್ಲಿಕೆ ವೇಳೆಯಲ್ಲಿ ನೀಡಿದ್ದ ಇಮೇಲ್ ವಿಳಾಸದಿಂದಲೇ ತಮ್ಮ ದೂರುಗಳನ್ನು ರವಾನಿಸಬೇಕು.
ಅರ್ಜಿ ಸಂಖ್ಯೆ ನಮೂದಿಸಿ:
ಇಮೇಲ್‌ನ ‘ಸಬ್ಜೆಕ್ಟ್ ಲೈನ್’ನಲ್ಲಿ ನಿಮ್ಮ ‘ಅರ್ಜಿ ಸಂಖ್ಯೆ’ಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ.
ಪರೀಕ್ಷೆಯನ್ನು ನಿರ್ದಿಷ್ಟವಾಗಿ ತಿಳಿಸಿ:
ನಿಮ್ಮ ಸಮಸ್ಯೆಯು ಯಾವ ಪರೀಕ್ಷೆಗೆ ಸಂಬಂಧಿಸಿದೆ ಎಂಬುದರ ಹೆಸರನ್ನು ಸ್ಪಷ್ಟವಾಗಿ ತಿಳಿಸಿ.
📢 Candidate Advisory – Help Us Resolve Your Grievance Faster
NTA receives a large volume of grievances every day through email and social media. Many of these, unfortunately, do not carry basic identifying details, making it very difficult for our team to trace the candidate…
— National Testing Agency (@NTA_Exams) September 3, 2026
ವಿವರವಾಗಿ ಬರೆಯಿರಿ:
ಅಭ್ಯರ್ಥಿಯು ಎದುರಿಸುತ್ತಿರುವ ಸಮಸ್ಯೆಯನ್ನು ಇಮೇಲ್‌ನಲ್ಲಿ ವಿವರವಾಗಿ ಮತ್ತು ಸ್ಪಷ್ಟವಾಗಿ ತಿಳಿಸಿ.
ದಾಖಲೆಗಳನ್ನು ಲಗತ್ತಿಸಿ:
ಸಮಸ್ಯೆಯನ್ನು ಎನ್‌ಟಿಎ ಅರ್ಥಮಾಡಿಕೊಳ್ಳಲು ಮತ್ತು ಪರಿಶೀಲಿಸಲು ಅನುಕೂಲವಾಗುವಂತೆ ಅಗತ್ಯವಿದ್ದರೆ ಸೂಕ್ತ ಸ್ಕ್ರೀನ್‌ಶಾಟ್‌ಗಳು ಅಥವಾ ದಾಖಲೆಗಳನ್ನು ಲಗತ್ತಿಸಿ.
ಸರಿಯಾದ ಹೆಲ್ಪ್‌ಡೆಸ್ಕ್ ಇಮೇಲ್ ಬಳಸಿ:
ಆಯಾ ಪರೀಕ್ಷೆಯ ಮಾಹಿತಿ ವಿವರಣೆ ಹಾಗೂ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ನಿರ್ದಿಷ್ಟ ಪರೀಕ್ಷೆಯ ಹೆಲ್ಪ್‌ಡೆಸ್ಕ್ ಇಮೇಲ್ ವಿಳಾಸಕ್ಕೆ ಮಾತ್ರ ನಿಮ್ಮ ಇ-ಮೇಲ್ ಕಳುಹಿಸಿ.
ಆಯಾ ಪರೀಕ್ಷೆಗೆ ಸಂಬಂಧಿಸಿದ ಪ್ರತ್ಯೇಕ ಹೆಲ್ಪ್‌ಡೆಸ್ಕ್ ಇಮೇಲ್ ವಿಳಾಸಗಳು ಪರೀಕ್ಷೆಯ ಮಾಹಿತಿ ವಿವರಣೆ ಮತ್ತು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿವೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




