ಕೃಷ್ಣನೂರಿನಲ್ಲಿ ಕಳೆಗಟ್ಟಿದ ಅಷ್ಟಮಿ ಸಂಭ್ರಮ: ಹುಲಿವೇಷ, ಮೊಸರುಕುಡಿಕೆ ಕಲರವ; ಬಿಗಿ ಪೊಲೀಸ್ ಕಾವಲು
ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಜ್ಜಾಗಿದ್ದು, ಶೀರೂರು ಮಠದ ಆಶ್ರಯದಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 6ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 4ರಂದು ಅರ್ಘ್ಯ ಪ್ರದಾನ, ಸೆಪ್ಟೆಂಬರ್ 5ರಂದು ವಿಟ್ಲಪಿಂಡಿ, ಹುಲಿವೇಷ, ಮತ್ತು ಮೊದಲ ಬಾರಿಗೆ ಮಲ್ಲಯುದ್ಧ ಪ್ರದರ್ಶನ ಆಕರ್ಷಣೆಯಾಗಿದೆ. ಭಕ್ತರ ಸುರಕ್ಷತೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಉಡುಪಿ, ಸೆಪ್ಟೆಂಬರ್ 03: ಜಗದೊಡೆಯ ಶ್ರೀಕೃಷ್ಣನ ಜನ್ಮೋತ್ಸವಕ್ಕೆ ಉಡುಪಿ ಸಜ್ಜಾಗುತ್ತಿದೆ. ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ಈ ಬಾರಿಯ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ ಆಗಸ್ಟ್ 29ರಿಂದ ಸೆಪ್ಟೆಂಬರ್ 6ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜನಪದ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಕೃಷ್ಣ ಮಠದಲ್ಲಿ ಕೊನೆಯ ಹಂತದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.
ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯಪ್ರದಾನ; ಭಕ್ತಿಪರವಶತೆಯ ಕ್ಷಣ
ಇನ್ನೆರಡು ದಿನ ಕೃಷ್ಣನೂರು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಲಿದೆ. ಉಡುಪಿಯ ರಥಬೀದಿ, ಶ್ರೀಕೃಷ್ಣ ಮಠದ ಸುತ್ತಮುತ್ತ ಈಗಾಗಲೇ ಹಬ್ಬದ ವಾತಾವರಣ ಕಳೆಗಟ್ಟಿದೆ. ಭಕ್ತರು ಹಾಗೂ ಪ್ರವಾಸಿಗರ ಆಗಮನ ಹೆಚ್ಚುತ್ತಿದ್ದು, ಜನ್ಮಾಷ್ಟಮಿಯ ರಾತ್ರಿ ನಡೆಯಲಿರುವ ವಿಶೇಷ ಪೂಜೆ ಹಾಗೂ ಮರುದಿನ ನಡೆಯುವ ವಿಟ್ಲಪಿಂಡಿ ಲೀಲೋತ್ಸವದತ್ತ ಎಲ್ಲರ ಚಿತ್ತ ನೆಟ್ಟಿದೆ. ನಾಳೆ ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದ್ದು, ಮಧ್ಯರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನೆರವೇರಲಿದೆ.
ಇದನ್ನೂ ಓದಿ: Tulunada Aati: ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿದೆ ಕರಾವಳಿಯ ವೈಭವ; ಆ 09 ರಂದು ಬೃಹತ್ ‘ತುಳುನಾಡ ಆಟಿ’ ಉತ್ಸವ
ಕೃಷ್ಣನ ಜನನದ ಕ್ಷಣವನ್ನು ಸ್ಮರಿಸುವ ಈ ಧಾರ್ಮಿಕ ವಿಧಿ ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡಲಿದೆ. ಜನ್ಮಾಷ್ಟಮಿಯ ದಿನ ಉಪವಾಸ, ಭಜನೆ, ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಶ್ರೀಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲು ಉಂಡೆ, ಚಕ್ಕುಲಿಗಳ ತಯಾರಿ ಮಾಡಲಾಗಿದೆ. ಸೆ.5 ಮಧ್ಯಾಹ್ನದ ಬಳಿಕ ಉಡುಪಿಯ ರಥಬೀದಿ ಜನಪದ ಸಂಭ್ರಮದ ರಂಗವಾಗಲಿದ್ದು, ಅಪರಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆಯೊಂದಿಗೆ ವಿಟ್ಲಪಿಂಡಿ ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ.
ಸೆ.5ಕ್ಕೆ ವಿಟ್ಲಪಿಂಡಿ ಲೀಲೋತ್ಸವ: ಚಿನ್ನದ ರಥೋತ್ಸವ, ಹುಲಿವೇಷ ಹಾಗೂ ಮಲ್ಲಯುದ್ಧದ ಮೆರುಗು
ವಿಟ್ಲಪಿಂಡಿಯ ಮತ್ತೊಂದು ಪ್ರಮುಖ ಆಕರ್ಷಣೆ ಕರಾವಳಿಯ ವಿಶಿಷ್ಟ ಜನಪದ ಕಲೆಯಾದ ಹುಲಿವೇಷ. ದೇಹಕ್ಕೆ ಬಣ್ಣ ಹಚ್ಚಿಕೊಂಡು, ಹುಲಿಯ ಚಲನೆ ಮತ್ತು ಭಂಗಿಗಳನ್ನು ಅನುಕರಿಸುತ್ತಾ ಡೋಲು–ತಾಳಗಳ ಸದ್ದಿಗೆ ಕುಣಿಯುವ ಹುಲಿವೇಷ ತಂಡಗಳು ರಥಬೀದಿಯ ಸಂಭ್ರಮಕ್ಕೆ ವಿಶಿಷ್ಟ ಮೆರುಗು ನೀಡಲಿವೆ. ಜನ್ಮಾಷ್ಟಮಿ ಸಂಭ್ರಮಕ್ಕೆ ಈ ಬಾರಿ ಹೊಸ ಆಯಾಮ ನೀಡಲು ಸೆ.5ರಂದು ರಥಬೀದಿಯ ವಿಶೇಷ ವೇದಿಕೆಯಲ್ಲಿ ಸಾಂಪ್ರದಾಯಿಕ ಮಲ್ಲಯುದ್ಧ ಪ್ರದರ್ಶನ ಆಯೋಜಿಸಲಾಗಿದೆ. ಮೈಸೂರು, ಮಂಡ್ಯ ಹಾಗೂ ಮಂಗಳೂರಿನಿಂದ ಆಹ್ವಾನಿತ ಪೈಲ್ವಾನ್ರು ತಮ್ಮ ಶಕ್ತಿ, ಕೌಶಲ್ಯ ಹಾಗೂ ಪಟ್ಟುಗಳನ್ನ ಪ್ರದರ್ಶಿಸಲಿದ್ದಾರೆ. ಉಡುಪಿ ಜನ್ಮಾಷ್ಟಮಿ ಆಚರಣೆಯಲ್ಲಿ ಇದೇ ಮೊದಲ ಬಾರಿಗೆ ಮಲ್ಲಯುದ್ಧ ಪ್ರದರ್ಶನ ನಡೆಯುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ.
ವಿಟ್ಲಪಿಂಡಿ ಉತ್ಸವವು ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ವಿಶಿಷ್ಟ ಆಚರಣೆಯಾಗಿದೆ. ಕೃಷ್ಣನ ತುಂಟಾಟ, ಗೋಪಾಲಕರ ಜೀವನ ಹಾಗೂ ಬೆಣ್ಣೆ, ಮೊಸರು ಕುರಿತ ಬಾಲಲೀಲೆಗಳ ಸ್ಮರಣೆಯೊಂದಿಗೆ ನಡೆಯುವ ಈ ಉತ್ಸವದಲ್ಲಿ ರಥಬೀದಿಯೇ ಭಕ್ತಿಯೊಂದಿಗೆ ಜನಪದ ಸಂಭ್ರಮದ ವೇದಿಕೆಯಾಗುತ್ತದೆ. ಮೆರವಣಿಗೆಯಲ್ಲಿ ಕೃಷ್ಣನ ವಿವಿಧ ಲೀಲೆಗಳನ್ನು ಬಿಂಬಿಸುವ ಕಲಾತಂಡಗಳು ಹಾಗೂ ಸಾಂಸ್ಕೃತಿಕ ತಂಡಗಳು ಪಾಲ್ಗೊಳ್ಳುವುದು ಉತ್ಸವದ ವೈಭವವನ್ನು ಹೆಚ್ಚಿಸಲಿದೆ.
ಖಾಕಿ ಕಣ್ಗಾವಲು: ಡ್ರೋನ್, ಸಿಸಿಟಿವಿ, ಫಿಂಗರ್‌ಪ್ರಿಂಟ್ ತಂತ್ರಜ್ಞಾನದ ಹದ್ದಿನ ಕಣ್ಣು
ಉತ್ಸವದ ಭದ್ರತೆ ಹಾಗೂ ಸುಗಮ ಸಂಚಾರಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಒಬ್ಬರು ಎಸ್ಪಿ, ಹೆಚ್ಚುವರಿ ಎಸ್ಪಿ, ಇಬ್ಬರು ಡಿವೈಎಸ್ಪಿ, 6 ಇನ್ಸ್‌ಪೆಕ್ಟರ್‌ಗಳು, 25 ಪಿಎಸ್‌ಐಗಳು ಸೇರಿದಂತೆ ನೂರಾರು ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1 ಕೆಎಸ್‌ಆರ್‌ಪಿ, 9 ಡಿಎಆರ್ ತುಕಡಿಗಳು, ಅಗ್ನಿಶಾಮಕ ದಳ ಹಾಗೂ ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ಇದನ್ನೂ ಓದಿ: ಇಂದಿನ ಕರ್ನಾಟಕ ವಾಯು ಗುಣಮಟ್ಟ ವರದಿ: ರಾಜಧಾನಿಯಲ್ಲಿ ಸಾಧಾರಣ, ಕರಾವಳಿಯಲ್ಲಿ ಶುದ್ಧ ಗಾಳಿ
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ‘ಅಕ್ಕಪಡೆ’ ನಿರಂತರ ನಿಗಾ ವಹಿಸಲಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚಲು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ಬಳಸಲಾಗುತ್ತಿದೆ. 45 ಕಡೆಗಳಲ್ಲಿ ನೂತನ ಸಿಸಿಟಿವಿಗಳು, 12 ಸಾರ್ವಜನಿಕ ಧ್ವನಿವರ್ಧಕಗಳು ಹಾಗೂ 3 ಡ್ರೋನ್ ತಂಡಗಳ ಮೂಲಕ ರಥಬೀದಿಯ ಮೂಲೆಮೂಲೆಯ ಮೇಲೂ ಆಕಾಶದಿಂದ ಹದ್ದಿನ ಕಣ್ಣಿಡಲಾಗಿದ್ದು, ಉಡುಪಿಯ ಜನಪದ ಹಾಗೂ ಭಕ್ತಿಯ ಮಹಾಸಂಗಮಕ್ಕೆ ಬಿಗಿ ಭದ್ರತೆಯ ಕವಚ ಒದಗಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




